5ನೇ ಟೆಸ್ಟ್: ಭಾರತ ವಿರುದ್ಧ ಗೆಲುವಿನ ವಿಶ್ವಾಸದಲ್ಲಿ ಇಂಗ್ಲೆಂಡ್
ಬ್ರೂಕ್ , ರೂಟ್ ಶತಕ, ಡಕೆಟ್ ಅರ್ಧಶತಕ

Photo : x@ICC
ಲಂಡನ್, ಆ.3: ಹ್ಯಾರಿ ಬ್ರೂಕ್ ಶತಕ(111 ರನ್, 98 ಎಸೆತ, 14 ಬೌಂಡರಿ, 2 ಸಿಕ್ಸರ್), ಜೋ ರೂಟ್(105 ರನ್, 152 ಎಸೆತ, 12 ಬೌಂಡರಿ)ಹಾಗೂ ಬೆನ್ ಡಕೆಟ್(54 ರನ್, 83 ಎಸೆತ, 6 ಬೌಂಡರಿ)ಅರ್ಧಶತಕಗಳ ಕೊಡುಗೆಯ ನೆರವಿನಿಂದ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ ಆತಿಥೇಯ ಇಂಗ್ಲೆಂಡ್ ತಂಡ ಭಾರತ ತಂಡದ ವಿರುದ್ಧದ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನು ಜಯಿಸಿ ಸರಣಿಯನ್ನು 3-1 ಅಂತರದಿಂದ ವಶಪಡಿಸಿಕೊಳ್ಳುವ ವಿಶ್ವಾಸದಲ್ಲಿದೆ.
ಗೆಲ್ಲಲು 374 ರನ್ ಗುರಿ ಪಡೆದಿದ್ದ ಇಂಗ್ಲೆಂಡ್ ತಂಡವು 4ನೇ ದಿನದಾಟವಾದ ರವಿವಾರ 1 ವಿಕೆಟ್ ನಷ್ಟಕ್ಕೆ 50 ರನ್ನಿಂದ ತನ್ನ 2ನೇ ಇನಿಂಗ್ಸ್ ಮುಂದುವರಿಸಿತು. ಮಳೆಯಿಂದಾಗಿ ಪಂದ್ಯವು ಬೇಗನೆ ಕೊನೆಗೊಂಡಾಗ ಇಂಗ್ಲೆಂಡ್ 6 ವಿಕೆಟ್ ಗಳ ನಷ್ಟಕ್ಕೆ 339 ರನ್ ಗಳಿಸಿದ್ದು, ಗೆಲುವಿಗೆ ಕೊನೆಯ ದಿನವಾದ ಸೋಮವಾರ ಇನ್ನೂ 35 ರನ್ ಗಳಿಸುವ ಅಗತ್ಯವಿದೆ.
ಜಮೀ ಸ್ಮಿತ್(2 ರನ್)ಹಾಗೂ ಓವರ್ಟನ್(0)ಕ್ರೀಸ್ ಕಾಯ್ದುಕೊಂಡಿದ್ದಾರೆ.
ಡಕೆಟ್ ಹಾಗೂ ಓಲಿ ಪೋಪ್(27 ರನ್)ವಿಕೆಟ್ ಒಪ್ಪಿಸಿದಾಗ ಜೊತೆಯಾದ ರೂಟ್ ಹಾಗೂ ಬ್ರೂಕ್ 4ನೇ ವಿಕೆಟ್ ಗೆ 211 ಎಸೆತಗಳಲ್ಲಿ 195 ರನ್ ಸೇರಿಸಿ ಇಂಗ್ಲೆಂಡ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಕೇವಲ 91 ಎಸೆತಗಳಲ್ಲಿ 12 ಬೌಂಡರಿ, 2 ಸಿಕ್ಸರ್ ನೆರವಿನಿಂದ ಬ್ರೂಕ್ ತನ್ನ 10ನೇ ಶತಕ ದಾಖಲಿಸಿದರು. ಬ್ರೂಕ್ ಅಬ್ಬರಕ್ಕೆ ಆಕಾಶ ದೀಪ್ ಕೊನೆಗೂ ತೆರೆ ಎಳೆದರು.
ಭೋಜನ ಹಾಗೂ ಟೀ ವಿರಾಮದ ನಡುವೆ 1 ವಿಕೆಟ್ ಕಳೆದುಕೊಂಡು 153 ರನ್ ಕಲೆ ಹಾಕಿದ ಇಂಗ್ಲೆಂಡ್ ತಂಡವು ಟೀ ವಿರಾಮದ ನಂತರ 10 ಓವರ್ಗಳಲ್ಲಿ 22 ರನ್ ಗಳಿಸಿ ಬೆಥೆಲ್(5 ರನ್) ಹಾಗೂ ರೂಟ್(105 ರನ್)ವಿಕೆಟ್ಗಳನ್ನು ಕಳೆದುಕೊಂಡಿತು. ಕನ್ನಡಿಗ ಪ್ರಸಿದ್ಧ ಕೃಷ್ಣ (3-109)ಈ ಎರಡೂ ವಿಕೆಟ್ ಗಳನ್ನು ಕಬಳಿಸಿದರು.
ಭಾರತದ ಪರ ಕೃಷ್ಣ ಯಶಸ್ವಿ ಬೌಲರ್ ಎನಿಸಿಕೊಂಡರೆ, ಮುಹಮ್ಮದ್ ಸಿರಾಜ್(2-95)ಎರಡು ವಿಕೆಟ್ ಪಡೆದರು.
5ನೇ ಟೆಸ್ಟ್: 39ನೇ ಶತಕ ಗಳಿಸಿದ ಜೋ ರೂಟ್
ವೃತ್ತಿಬದುಕಿನ 39ನೇ ಟೆಸ್ಟ್ ಶತಕ ಗಳಿಸಿದ ಜೋ ರೂಟ್ ಅವರು ಕುಮಾರ ಸಂಗಕ್ಕರ ಅವರ ದಾಖಲೆಯನ್ನು ಮುರಿದರು. ಭಾರತದ ವಿರುದ್ಧ 13ನೇ ಶತಕ ಗಳಿಸಿ ಸುನೀಲ್ ಗವಾಸ್ಕರ್ ರ ದಾಖಲೆಯನ್ನು ಸರಿಗಟ್ಟಿದರು.
ರೂಟ್ 137 ಎಸೆತಗಳಲ್ಲಿ ಶತಕ ಪೂರೈಸಿದರು. 34ರ ಹರೆಯದ ರೂಟ್ ಶತಕ ತಲುಪಿದ ತಕ್ಷಣ ಹೆಲ್ಮೆಟ್ ತೆಗೆದು ಬ್ಯಾಟ್ ಎತ್ತಿ ಹಿಡಿದು ಸಂಭ್ರಮಿಸಿದರು.
ರೂಟ್ ಇದೀಗ ಭಾರತದ ವಿರುದ್ದ 13ನೇ ಶತಕ ದಾಖಲಿಸಿದರು. ಈ ಮೂಲಕ ವೆಸ್ಟ್ಇಂಡೀಸ್ ವಿರುದ್ಧ 13 ಶತಕಗಳನ್ನು ದಾಖಲಿಸಿದ್ದ ಸುನೀಲ್ ಗವಾಸ್ಕರ್ ದಾಖಲೆಯನ್ನು ಸರಿಗಟ್ಟಿದರು.
39ನೇ ಶತಕ ಗಳಿಸಿದ ರೂಟ್ ಅವರು ಶ್ರೀಲಂಕಾದ ಕುಮಾರ ಸಂಗಕ್ಕರ(38) ಅವರ ಗರಿಷ್ಠ ಟೆಸ್ಟ್ ಶತಕದ ದಾಖಲೆಯನ್ನು ಮುರಿದರು. ರೂಟ್ ಅವರು ಇದೀಗ ಸಾರ್ವಕಾಲಿಕ ಶ್ರೇಷ್ಠ ಟೆಸ್ಟ್ ಶತಕವೀರರ ಪಟ್ಟಿಯಲ್ಲಿ ಸಚಿನ್ ತೆಂಡುಲ್ಕರ್(51), ಜಾಕಸ್ ಕಾಲಿಸ್(45)ಹಾಗೂ ರಿಕಿ ಪಾಂಟಿಂಗ್(41)ನಂತರದ ಸ್ಥಾನದಲ್ಲಿದ್ದಾರೆ.
ರೂಟ್ 100 ರನ್ ಗಳಿಸುವ ಮೂಲಕ ಪ್ರಸಕ್ತ 5 ಪಂದ್ಯಗಳ ಸರಣಿಯಲ್ಲಿ 21 ವೈಯಕ್ತಿಕ ಶತಕಗಳು ದಾಖಲಾಗಿವೆ. 1955ರಲ್ಲಿ ವೆಸ್ಟ್ಇಂಡೀಸ್ ವಿರುದ್ಧ ಆಸ್ಟ್ರೇಲಿಯ ನಿರ್ಮಿಸಿದ್ದ ದಾಖಲೆಯು ಸರಿಗಟ್ಟಲ್ಪಟ್ಟಿದೆ.







