ಮೊದಲ ಟೆಸ್ಟ್ | ಬೆನ್ ಡಕೆಟ್ ಐತಿಹಾಸಿಕ ಸಾಧನೆ

Photo: Sportzpics for BCCI
ಲೀಡ್ಸ್: ಭಾರತ ತಂಡದ ವಿರುದ್ಧ ಹೆಡ್ಡಿಂಗ್ಲೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಬೆನ್ ಡಕೆಟ್ ಅವರು ಅಲಿಸ್ಟರ್ ಕುಕ್ ಸಾಧನೆಯ ನಂತರ 30 ವರ್ಷಗಳಲ್ಲಿ 2ನೇ ಬಾರಿ ಎರಡು ಬಾರಿ 50ಕ್ಕೂ ಅಧಿಕ ರನ್ ಗಳಿಸಿದ ಇಂಗ್ಲೆಂಡ್ನ ಎರಡನೇ ಆರಂಭಿಕ ಆಟಗಾರನಾಗಿ ಇತಿಹಾಸ ನಿರ್ಮಿಸಿದ್ದಾರೆ.
ಮೊದಲ ಇನಿಂಗ್ಸ್ನಲ್ಲಿ 62 ರನ್ ಗಳಿಸಿರುವ ಡಕೆಟ್ ಅವರು 2ನೇ ಇನಿಂಗ್ಸ್ನಲ್ಲಿ 149 ರನ್ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್ನ 2ನೇ ಇನಿಂಗ್ಸ್ನಲ್ಲಿ ಮೊದಲ ಬಾರಿ ಶತಕ ಗಳಿಸಿದ್ದಾರೆ.
ಮೊದಲ ಇನಿಂಗ್ಸ್ನಲ್ಲಿ ಡಕೆಟ್ 94 ಎಸೆತಗಳಲ್ಲಿ 9 ಬೌಂಡರಿಗಳ ಸಹಿತ 62 ರನ್ ಗಳಿಸಿ ಜಸ್ಪ್ರಿತ್ ಬುಮ್ರಾಗೆ ಕ್ಲೀನ್ ಬೋಲ್ಡ್ ಆಗಿದ್ದರು.
ಎಡಗೈ ಬ್ಯಾಟರ್ 2ನೇ ಇನಿಂಗ್ಸ್ನಲ್ಲೂ ತನ್ನ ಶ್ರೇಷ್ಠ ಫಾರ್ಮ್ ಮುಂದುವರಿಸಿದರು. ಭಾರತದ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ಎದುರಿಸಿದರು. ಡಕೆಟ್ 97 ರನ್ ಗಳಿಸಿದ್ದಾಗ ಜೀವದಾನ ಪಡೆದಿದ್ದರು. ಯಶಸ್ವಿ ಜೈಸ್ವಾಲ್ ಕ್ಯಾಚ್ ಕೈಚೆಲ್ಲಿದ್ದು ಮುಹಮ್ಮದ್ ಸಿರಾಜ್ಗೆ ನಿರಾಶೆಯಾಯಿತು. ಜೈಸ್ವಾಲ್ ಪಂದ್ಯದಲ್ಲಿ ಕೈಬಿಟ್ಟ 4ನೇ ಕ್ಯಾಚ್ ಇದಾಗಿದೆ. ಮೊದಲ ಇನಿಂಗ್ಸ್ನಲ್ಲಿ 3 ಕ್ಯಾಚ್ಗಳನ್ನು ಕೈಬಿಟ್ಟಿದ್ದರು.
ಡಕೆಟ್ 2010ರ ನಂತರ ಟೆಸ್ಟ್ ಪಂದ್ಯದ 4ನೇ ಇನಿಂಗ್ಸ್ನಲ್ಲಿ ಶತಕ ಗಳಿಸಿದ ಇಂಗ್ಲೆಂಡ್ನ ಮೊದಲ ಆರಂಭಿಕ ಬ್ಯಾಟರ್ ಎನಿಸಿಕೊಂಡಿದ್ದಾರೆ. 15 ವರ್ಷಗಳ ಹಿಂದೆ ಅಲಸ್ಟೈರ್ ಕುಕ್ ಬಾಂಗ್ಲಾದೇಶದ ವಿರುದ್ಧ್ದ ಮೀರ್ಪುರದಲ್ಲಿ ಔಟಾಗದೆ 109 ರನ್ ಗಳಿಸಿದ್ದರು.