ಟೆಸ್ಟ್ ಕ್ರಿಕೆಟ್: ವಿದೇಶಿ ನೆಲದಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ರಿಷಭ್ ಪಂತ್

Photo : BCCI
ಬರ್ಮಿಂಗ್ಹ್ಯಾಮ್: ಭಾರತ ತಂಡದ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಅವರು ಮತ್ತೊಮ್ಮೆ ಇತಿಹಾಸದ ಪುಸ್ತಕದಲ್ಲಿ ತನ್ನ ಹೆಸರನ್ನು ಅಚ್ಚೊತ್ತಿದ್ದಾರೆ. ವಿದೇಶಿ ನೆಲದಲ್ಲಿ ನಡೆದ ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಠ ಸಿಕ್ಸರ್ಗಳನ್ನು ಸಿಡಿಸಿದ ಬ್ಯಾಟರ್ ಎಂಬ ದಾಖಲೆ ನಿರ್ಮಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧ ಈಗ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಪಂತ್ ಅವರು ತನ್ನ 23ನೇ ಸಿಕ್ಸರ್ ಸಿಡಿಸಿದರು. ದಕ್ಷಿಣ ಆಫ್ರಿಕಾದಲ್ಲಿ 21 ಸಿಕ್ಸರ್ಗಳನ್ನು ಸಿಡಿಸಿರುವ ಬೆನ್ ಸ್ಟೋಕ್ಸ್ ದಾಖಲೆಯನ್ನು ಮುರಿದಿದ್ದಾರೆ. ಲೆಜೆಂಡರಿ ವಿವಿಯನ್ ರಿಚರ್ಡ್ಸ್ ಅವರು ಇಂಗ್ಲೆಂಡ್ ನಲ್ಲಿ ಗರಿಷ್ಠ ಸಿಕ್ಸರ್(16)ಸಿಡಿಸಿದ ಪ್ರವಾಸಿ ತಂಡದ ಬ್ಯಾಟರ್ ಆಗಿದ್ದಾರೆ.
ಪಂತ್ ಅವರು ಸರಣಿಯುದ್ದಕ್ಕೂ ನಿರ್ಭೀತಿಯ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಎರಡೂ ಇನಿಂಗ್ಸ್ ಗಳಲ್ಲಿ ಶತಕ ಗಳಿಸಿದ್ದರು. ಮೊದಲ ಇನಿಂಗ್ಸ್ನಲಿ 134 ರನ್ ಹಾಗೂ 2ನೇ ಇನಿಂಗ್ಸ್ ನಲ್ಲಿ 118 ರನ್ ಗಳಿಸಿದ್ದರು. ಪಂತ್ ವೀರೋಚಿತ ಪ್ರದರ್ಶನದ ಹೊರತಾಗಿಯೂ ಭಾರತವು ಈ ಪಂದ್ಯವನ್ನು 5 ವಿಕೆಟ್ ಗಳಿಂದ ಸೋತಿತ್ತು.
2ನೇ ಟೆಸ್ಟ್ನ 2ನೇ ಇನಿಂಗ್ಸ್ ನಲ್ಲಿ ಪಂತ್ ಅವರು 65 ರನ್(58 ಎಸೆತ, 8 ಬೌಂಡರಿ, 3 ಸಿಕ್ಸರ್)ಗಳಿಸಿ ಶುಐಬ್ ಬಶೀರ್ ಗೆ ವಿಕೆಟ್ ಒಪ್ಪಿಸಿದ್ದಾರೆ.
ಪಂತ್ ಹಿಡಿತ ತಪ್ಪಿ 20 ಮೀ.ದೂರ ಹೋಗಿ ಬಿದ್ದ ಬ್ಯಾಟ್!
ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಸ್ಪಷ್ಟ ಮೇಲುಗೈ ಸಾಧಿಸಿದ ಸಂದರ್ಭದಲ್ಲಿ ಬೆಳಗ್ಗಿನ ಅವಧಿಯಲ್ಲಿ ರಿಷಭ್ ಪಂತ್ ಅವರು ಟಂಗ್ ಅವರ ಬೌಲಿಂಗ್ ನಲ್ಲಿ ಪುಲ್ ಶಾಟ್ ಆಡಿದಾಗ ಬ್ಯಾಟ್ ಸಂಪೂರ್ಣವಾಗಿ ಅವರ ಹಿಡಿತ ತಪ್ಪಿತು. ಬ್ಯಾಟ್ ಸುಮಾರು 20 ಮೀ. ದೂರಕ್ಕೆ ಹಾರಿದ್ದು, ಅದೃಷ್ಟವಶಾತ್ ಇದರಿಂದ ಯಾರಿಗೂ ಹಾನಿಯಾಗಲಿಲ್ಲ.
ಪಂತ್ ಅವರ ಬ್ಯಾಟ್ ಕೈ ಜಾರಿ ಹೋದ ದೃಶ್ಯವು ವೈರಲ್ ಆಗಿದೆ. ಈ ದೃಶ್ಯವನ್ನು ನೋಡಿದ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ನಗೆ ಬೀರಿದರು.