3ನೇ ಟೆಸ್ಟ್: ಯಶಸ್ವಿ ಜೈಸ್ವಾಲ್ ಶತಕ, ಸುಸ್ಥಿತಿಯಲ್ಲಿ ಭಾರತ
ಸಿರಾಜ್ ಗೆ 4 ವಿಕೆಟ್ 319 ರನ್ ಗೆ ಇಂಗ್ಲೆಂಡ್ ಆಲೌಟ್

Photo : PTI
ರಾಜ್ಕೋಟ್: ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ದಿಟ್ಟ ಶತಕದ (104 ರನ್, 133 ಎಸೆತ) ನೆರವಿನಿಂದ ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧ ಇಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಒಟ್ಟಾರೆ 322 ರನ್ ಮುನ್ನಡೆ ಪಡೆಯುವ ಮೂಲಕ ಸುಸ್ಥಿತಿಯಲ್ಲಿದೆ.
ಶನಿವಾರ ಮೂರನೇ ದಿನದಾಟದಂತ್ಯಕ್ಕೆ ಭಾರತವು ತನ್ನ 2ನೇ ಇನಿಂಗ್ಸ್ ನಲ್ಲಿ 2 ವಿಕೆಟ್ ಗಳ ನಷ್ಟಕ್ಕೆ 196 ರನ್ ಗಳಿಸಿದೆ. ಶುಭಮನ್ ಗಿಲ್(ಔಟಾಗದೆ 65 ರನ್, 120 ಎಸೆತ, 6 ಬೌಂಡರಿ, 2 ಸಿಕ್ಸರ್) ಹಾಗೂ ಕುಲದೀಪ್ ಯಾದವ್(3 ರನ್) ಕ್ರೀಸ್ ನಲ್ಲಿದ್ದಾರೆ.
ತಾಯಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಅಶ್ವಿನ್ ಮೈದಾನವನ್ನು ತೊರೆದಿದ್ದಾರೆ. ಹೀಗಾಗಿ ಭಾರತವು 10 ಆಟಗಾರರೊಂದಿಗೆ ಆಡುತ್ತಿದೆ. ದೇವದತ್ತ ಪಡಿಕ್ಕಲ್ ಬದಲಿ ಆಟಗಾರನಾಗಿ ಫೀಲ್ಡಿಂಗ್ ಮಾಡುತ್ತಿದ್ದಾರೆ.
133 ಎಸೆತಗಳಲ್ಲಿ 104 ರನ್ ಗಳಿಸಿದ ಜೈಸ್ವಾಲ್ ಗೆ ಬೆನ್ನುನೋವು ಬಾಧಿಸಿದ ಕಾರಣ ಗಾಯಗೊಂಡು ನಿವೃತ್ತಿಯಾದರು. ಮೈದಾನವನ್ನು ತೊರೆಯುವ ಮೊದಲು ಶುಭಮನ್ ಗಿಲ್ ಜೊತೆ 2ನೇ ವಿಕೆಟ್ ಗೆ 155 ರನ್ ಜೊತೆಯಾಟದಲ್ಲಿ ಭಾಗಿಯಾದರು.
ಬೆನ್ನುನೋವಿನಿಂದಾಗಿ ಜೈಸ್ವಾಲ್ ಇನಿಂಗ್ಸ್ ಮೊಟಕುಗೊಂಡಿದೆ. ಜೈಸ್ವಾಲ್ ಮೈದಾನದಿಂದ ಹೊರಹೋಗುತ್ತಿದ್ದಾಗ ಪ್ರೇಕ್ಷಕರು ಎದ್ದುನಿಂತು ಗೌರವಿಸಿದರು. ವಿಶಾಖಪಟ್ಟಣದಲ್ಲಿ ನಡೆದಿದ್ದ ಎರಡನೇ ಟೆಸ್ಟ್ ನಲ್ಲಿ ಚೊಚ್ಚಲ ದ್ವಿಶತಕ (209 ರನ್, 290 ಎಸೆತ) ಗಳಿಸಿದ ನಂತರ ಇಂದು ಮತ್ತೊಂದು ಉತ್ತಮ ಇನಿಂಗ್ಸ್ ಆಡಿದ್ದಾರೆ.
ರಜತ್ ಪಾಟಿದಾರ್ 10 ಎಸೆತಗಳನ್ನು ಎದುರಿಸಿದರೂ ಶೂನ್ಯಕ್ಕೆ ಔಟಾದರು. ಮೊದಲ ಇನಿಂಗ್ಸ್ ನಲ್ಲಿ 131 ರನ್ ಗಳಿಸಿದ್ದ ನಾಯಕ ರೋಹಿತ್ ಶರ್ಮಾ 19 ರನ್ ಗಳಿಸಿ ಜೋ ರೂಟ್ ಗೆ ಔಟಾದರು. ಆಗ ಗಿಲ್ ಜೊತೆಗೂಡಿದ ಜೈಸ್ವಾಲ್ ಭಾರತದ ಇನಿಂಗ್ಸ್ ಆಧರಿಸಿದರು. ಜೇಮ್ಸ್ ಆ್ಯಂಡರ್ಸನ್ ಬೌಲಿಂಗ್ ನಲ್ಲಿ 1 ಸಿಕ್ಸರ್ ಹಾಗೂ 2 ಬೌಂಡರಿಗಳನ್ನು ಗಳಿಸಿದ ಜೈಸ್ವಾಲ್ ಆಕ್ರಮಣಕಾರಿ ಇನಿಂಗ್ಸ್ ಆಡಿದರು. ವೇಗ ಹಾಗೂ ಸ್ಪಿನ್ ದಾಳಿಯನ್ನು ಸಮರ್ಥವಾಗಿ ಎದುರಿಸಿದರು.
ಜೈಸ್ವಾಲ್ ತಾನಾಡಿದ 7ನೇ ಟೆಸ್ಟ್ ಪಂದ್ಯದಲ್ಲಿ 122 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 5 ಸಿಕ್ಸರ್ ಸಹಾಯದಿಂದ ಮೂರನೇ ಶತಕವನ್ನು ಸಿಡಿಸಿ ಸಂಭ್ರಮಿಸಿದರು. ಸರಣಿಯಲ್ಲಿ ಒಟ್ಟು 435 ರನ್ ಗಳಿಸಿರುವ ಜೈಸ್ವಾಲ್ ಗೆ ಗಿಲ್ ಉತ್ತಮ ಜೊತೆಯಾಟದ ಮೂಲಕ ಸಾಥ್ ನೀಡಿದರು.
ಮುಹಮ್ಮದ್ ಸಿರಾಜ್ಗೆ 4 ವಿಕೆಟ್, ಇಂಗ್ಲೆಂಡ್ 319 ರನ್ ಗೆ ಆಲೌಟ್
ತನ್ನ ಬೌಲಿಂಗ್ ಪರಾಕ್ರಮ ಪ್ರದರ್ಶಿಸಿ 4 ವಿಕೆಟ್ ಗಳನ್ನು ಕಬಳಿಸಿದ ವೇಗದ ಬೌಲರ್ ಮುಹಮ್ಮದ್ ಸಿರಾಜ್(4-84) ಹಾಗೂ ತಲಾ ಎರಡು ವಿಕೆಟ್ ಗಳನ್ನು ಪಡೆದ ಸ್ಪಿನ್ನರ್ ಗಳಾದ ಕುಲದೀಪ್ ಯಾದವ್(2-77) ಹಾಗೂ ರವೀಂದ್ರ ಜಡೇಜರ (2-51) ಸಾಹಸದಿಂದ ಭಾರತ ತಂಡವು ಎದುರಾಳಿ ಇಂಗ್ಲೆಂಡ್ ಕ್ರಿಕೆಟ್ ತಂಡವನ್ನು 71.1 ಓವರ್ ಗಳಲ್ಲಿ 319 ರನ್ ಗೆ ಆಲೌಟ್ ಮಾಡಿತು.
ಬೌಲರ್ ಗಳ ಅಮೋಘ ಪ್ರದರ್ಶನದ ನೆರವಿನಿಂದ ಭಾರತವು ಇದೀಗ ಮೊದಲ ಇನಿಂಗ್ಸ್ ನಲ್ಲಿ 126 ರನ್ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ರೋಹಿತ್ ಶರ್ಮಾ ಹಾಗೂ ರವೀಂದ್ರ ಜಡೇಜರ ಶತಕದ ಸಹಾಯದಿಂದ ಭಾರತವು ಮೊದಲ ಇನಿಂಗ್ಸ್ ನಲ್ಲಿ 445 ರನ್ ಗಳಿಸಿತ್ತು.
ಶನಿವಾರ ಭೋಜನ ವಿರಾಮದ ವೇಳೆಗೆ ಇಂಗ್ಲೆಂಡ್ 5 ವಿಕೆಟ್ ನಷ್ಟಕ್ಕೆ 290 ರನ್ ಗಳಿಸಿತ್ತು. ಬೆನ್ ಫೋಕ್ಸ್(13 ರನ್), ರೆಹಾನ್ ಅಹ್ಮದ್ (6 ರನ್) ಹಾಗೂ ಜೇಮ್ಸ್ ಆ್ಯಂಡರ್ಸನ್(1 ರನ್) ವಿಕೆಟ್ ಗಳನ್ನು ಕಬಳಿಸಿದ ಸಿರಾಜ್ ಇಂಗ್ಲೆಂಡ್ ನ ದಿಢೀರ್ ಕುಸಿತಕ್ಕೆ ಕಾರಣರಾದರು. ಅಪಾಯಕಾರಿ ಆಟಗಾರ ಬೆನ್ ಸ್ಟೋಕ್ಸ್(41 ರನ್, 89 ಎಸೆತ, 6 ಬೌಂಡರಿ) ಹಾಗೂ ಟಾಮ್ ಹಾರ್ಟ್ಲಿ (9 ರನ್) ವಿಕೆಟ್ ಗಳನ್ನು ಉರುಳಿಸಿದ ಜಡೇಜ ಇಂಗ್ಲೆಂಡ್ ಗಾಯಕ್ಕೆ ಉಪ್ಪು ಸವರಿದರು.
133 ರನ್ನಿಂದ ಬ್ಯಾಟಿಂಗ್ ಮುಂದುವರಿಸಿದ ಆರಂಭಿಕ ಬ್ಯಾಟರ್ ಬೆನ್ ಡಕೆಟ್ 151 ಎಸೆತಗಳಲ್ಲಿ 23 ಬೌಂಡರಿ, 2 ಸಿಕ್ಸರ್ ಸಹಿತ 153 ರನ್ ಗಳಿಸಿ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಗೆ ವಿಕೆಟ್ ಒಪ್ಪಿಸಿದರು. ಯಾದವ್ ಭೋಜನ ವಿರಾಮಕ್ಕೆ ಮೊದಲು ಎರಡು ವಿಕೆಟ್ ಗಳನ್ನು ಪಡೆದರು.
2 ವಿಕೆಟ್ ನಷ್ಟಕ್ಕೆ 207 ರನ್ನಿಂದ ತನ್ನ ಮೊದಲ ಇನಿಂಗ್ಸ್ ಮುಂದುವರಿಸಿದ ಇಂಗ್ಲೆಂಡ್ ತಂಡವು ಮಾಜಿ ನಾಯುಕ ಜೋ ರೂಟ್(18 ರನ್)ವಿಕೆಟನ್ನು ಕಳೆದುಕೊಂಡು ಆರಂಭಿಕ ಹಿನ್ನಡೆ ಕಂಡಿತು. ರೂಟ್ ನಿನ್ನೆಯ ಮೊತ್ತಕ್ಕೆ ಕೇವಲ 9 ರನ್ ಸೇರಿಸಿ ಜಸ್ಪ್ರೀತ್ ಬುಮ್ರಾಗೆ ವಿಕೆಟ್ ಒಪ್ಪಿಸಿದರು.
ರೂಟ್ ನಿರ್ ಗಮನದ ನಂತರ ಜಾನಿ ಬೈರ್ಸ್ಟೋವ್ ತನ್ನ ರನ್ ಖಾತೆ ತೆರೆಯುವಲ್ಲಿ ವಿಫಲರಾಗಿ ಕುಲ್ದೀಪ್ ಬೀಸಿದ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು. ಶತಕವೀರ ಡಕೆಟ್ ವಿಕೆಟನ್ನು ಉರುಳಿಸಿದ ಕುಲ್ದೀಪ್ ಇಂಗ್ಲೆಂಡ್ 260 ರನ್ ಗೆ ಐದನೇ ವಿಕೆಟ್ ಕಳೆದುಕೊಳ್ಳುವಂತೆ ಮಾಡಿದರು.
ಡಕೆಟ್ ಆಕ್ರಮಣಕಾರಿ ಇನಿಂಗ್ಸ್ ಹಾಗೂ ನಾಯಕ ಸ್ಟೋಕ್ಸ್ 41 ರನ್ ಕೊಡುಗೆಯ ಹೊರತಾಗಿಯೂ ಇಂಗ್ಲೆಂಡ್ ಆರು ಎಸೆತಗಳಲ್ಲಿ 2 ವಿಕೆಟ್ ಕಳೆದುಕೊಂಡಿತು.
A leap of joy to celebrate his second century of the series
— BCCI (@BCCI) February 17, 2024
Well played, Yashasvi Jaiswal #TeamIndia | #INDvENG | @ybj_19 | @IDFCFIRSTBank pic.twitter.com/pdlPhn5e3N







