IND Vs NZ ODI | ಮತ್ತೆ ಅಬ್ಬರಿಸಿದ ವಿರಾಟ್ ಕೊಹ್ಲಿ, ಕಿವೀಸ್ ಮಣಿಸಿದ ಭಾರತ

Photo Credit : x/BCCI
ವಡೋದರ: ಇಲ್ಲಿನ ವಡೋದರ ಇಂಟರ್ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆದ ನ್ಯೂಝಿಲ್ಯಾಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು 4 ವಿಕೆಟ್ ಗಳ ಜಯ ಸಾಧಿಸಿದೆ.
ಇತ್ತೀಚಿಗಷ್ಟೇ ದೇಶೀಯ ಅಂಗಣದಲ್ಲಿ ವಿಜಯ್ ಹಝಾರೆ ಟ್ರೋಫಿಯಲ್ಲಿ ತಮ್ಮಲ್ಲಿ ಕ್ರಿಕೆಟ್ ಆಡುವ ಉತ್ಸಾಹ ಬತ್ತಿಲ್ಲ ಎಂದು ಸೆಂಚುರಿ ಬಾರಿಸಿದ್ದ ವಿರಾಟ್ ಕೊಹ್ಲಿ, ನ್ಯೂಝಿಲ್ಯಾಂಡ್ ವಿರುದ್ಧವೂ ಅದೇ ಲಯದಲ್ಲಿ ಆಟವಾಡಿದರು.
91 ಎಸೆತ ಎದುರಿಸಿದ ವಿರಾಟ್ ಕೊಹ್ಲಿ, 8 ಬೌಂಡರಿಯೊಂದಿಗೆ 1 ಸಿಕ್ಸರ್ ಬಾರಿಸಿ ಶತಕದ ಅಂಚಿನಲ್ಲಿ ಕೈಲ್ ಜೇಮಿಸನ್ ಅವರಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ಹಿಡಿದರು.
ನ್ಯೂಝಿಲ್ಯಾಂಡ್ ನೀಡಿದ 300 ರನ್ ಗಳ ಬೆನ್ನತ್ತಿದ ಭಾರತ ತಂಡದ ಪರವಾಗಿ ರೋಹಿತ್ ಶರ್ಮಾ, ನಾಯಕ ಶುಭಮನ್ ಗಿಲ್ ಇನ್ನಿಂಗ್ಸ್ ಅರಂಭಿಸಿದರು. ರೋಹಿತ್ 26, ಶುಭಮನ್ ಗಿಲ್ 56 ರನ್ ಗಳಿಸಿದರು. ಶ್ರೇಯಸ್ ಅಯ್ಯರ್ 49 ರನ್ ಗಳ ಕೊಡುಗೆ ನೀಡಿದರು. ರವೀಂದ್ರ ಜಡೇಜಾ 4, ವಾಶಿಂಗ್ಟನ್ ಸುಂದರ್ 7 ರನ್ ಗಳಿಸಿದರು.
ವಿಕೆಟ್ ಕೀಪರ್ ಕೆ ಎಲ್ ರಾಹುಲ್ 29, ಹರ್ಷಿತ್ ರಾಣಾ 29 ರನ್ ಗಳಿಸಿ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ದರು. ಭಾರತ ತಂಡವು 6 ವಿಕೆಟ್ ನಷ್ಟಕ್ಕೆ 49 ಓವರ್ ಗಳಲ್ಲಿ 306 ರನ್ ಗಳಿಸಿತು.
ನ್ಯೂಝಿಲ್ಯಾಂಡ್ ಪರ ಕೈಲ್ ಜೇಮಿಸನ್ ಬಿಗು ದಾಳಿ ನಡೆಸಿದರು. ಅವರು ಭಾರತ ತಂಡದ ಪ್ರಮುಖ 4 ವಿಕೆಟ್ ಕಿತ್ತರು. ಉಳಿದಂತೆ ಆದಿತ್ಯ ಅಶೋಕ್, ಕ್ರಿಸ್ ಕ್ಲರ್ಕ್ ತಲಾ ಒಂದು ವಿಕೆಟ್ ಪಡೆದರು.
ಮೊದಲು ಟಾಸ್ ಗೆದ್ದ ಭಾರತ ತಂಡವು ನ್ಯೂಝಿಲ್ಯಾಂಡ್ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತು. 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡ ಕಿವೀಸ್ 300 ರನ್ ಗಳಿಸಿತು. ಕಿವೀಸ್ ಪರ ಡೆರಿಲ್ ಮಿಷೆಲ್ 84 ರನ್ ಗಳಿಸಿದರು. ಹೆನ್ರಿ ನಿಕೋಲಸ್ 62 ರನ್ ಬಾರಿಸಿದರು.
ಭಾರತ ತಂಡದ ಪರ ಮುಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಪ್ರಸಿದ್ ಕೃಷ್ಣ ತಲಾ 2 ವಿಕೆಟ್ ಪಡೆದರು. ಕುಲ್ ದೀಪ್ ಯಾದವ್ 1 ವಿಕೆಟ್ ಪಡೆದರು.







