Ind Vs SA T20 | ತಿಲಕ್ ವರ್ಮಾ ಹೋರಾಟ ವ್ಯರ್ಥ; ದಕ್ಷಿಣ ಆಫ್ರಿಕಾಕ್ಕೆ 51 ರನ್ ಗಳ ಜಯ

Photo Credit : PTI
ನ್ಯೂ ಚಂಡಿಗಡ, ಡಿ.11: ಆರಂಭಿಕ ಬ್ಯಾಟರ್ ಕ್ವಿಂಟನ್ ಡಿಕಾಕ್(90 ರನ್, 46 ಎಸೆತ, 5 ಬೌಂಡರಿ, 7 ಸಿಕ್ಸರ್),ಡೊನೊವನ್ ಫೆರೇರ(ಔಟಾಗದೆ 30, 16 ಎಸೆತ, 1 ಬೌಂಡರಿ, 3 ಸಿಕ್ಸರ್)ಅಬ್ಬರದ ಬ್ಯಾಟಿಂಗ್ ಹಾಗೂ ಒಟ್ನೀಲ್ ಬಾರ್ಟ್ಮನ್(4-24)ಶಿಸ್ತುಬದ್ಧ ಬೌಲಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು ದ್ವಿತೀಯ ಟ್ವೆಂಟಿ-20 ಅಂತರ್ರಾಷ್ಟ್ರೀಯ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು 51 ರನ್ ಅಂತರದಿಂದ ಮಣಿಸಿತು. ಈ ಮೂಲಕ ಐದು ಪಂದ್ಯಗಳ ಸರಣಿಯನ್ನು 1-1ರಿಂದ ಸಮಬಲಗೊಳಿಸಿತು.
ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡವು ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ಗಳ ನಷ್ಟಕ್ಕೆ 213 ರನ್ ಕಲೆ ಹಾಕಿತು.ಗೆಲ್ಲಲು 214 ರನ್ ಗುರಿ ಬೆನ್ನಟ್ಟಿದ ಭಾರತ ತಂಡವು 19.1 ಓವರ್ಗಳಲ್ಲಿ 162 ರನ್ ಗಳಿಸಿ ಆಲೌಟಾಯಿತು.
ಭಾರತದ ಪರ ತಿಲಕ್ ವರ್ಮಾ(62, 34 ಎಸೆತ, 2 ಬೌಂಡರಿ, 5 ಸಿಕ್ಸರ್)ಸರ್ವಾಧಿಕ ಸ್ಕೋರ್ ಗಳಿಸಿದರು. ಶುಭಮನ್ ಗಿಲ್(0)ಹಾಗೂ ನಾಯಕ ಸೂರ್ಯಕುಮಾರ್(5 ರನ್)ಮತ್ತೊಮ್ಮೆ ವಿಫಲರಾದರು. ಜಿತೇಶ್ ಶರ್ಮಾ(27 ರನ್), ಅಕ್ಷರ್ ಪಟೇಲ್(21 ರನ್) ಹಾಗೂ ಹಾರ್ದಿಕ್ ಪಾಂಡ್ಯ(20 ರನ್) ಒಂದಷ್ಟು ಹೋರಾಟ ನೀಡಿದರು.
ಬಾರ್ಟ್ಮನ್(4-24)ಯಶಸ್ವಿ ಪ್ರದರ್ಶನ ನೀಡಿದರು. ಮಾರ್ಕೊ ಜಾನ್ಸನ್(2-25),ಹಾಗೂ ಲುಥೊ ಸಿಪಾಮ್ಲಾ(2-46) ಹಾಗೂ ಎನ್ಗಿಡಿ(2-26) ತಲಾ ಎರಡು ವಿಕೆಟ್ಗಳನ್ನು ಪಡೆದರು.
ಇದಕ್ಕೂ ಮೊದಲು ಇನಿಂಗ್ಸ್ ಆರಂಭಿಸಿದ ಡಿಕಾಕ್ ಹಾಗೂ ರೀಝಾ ಹೆಂಡ್ರಿಕ್ಸ್(8 ರನ್)4.1 ಓವರ್ಗಳಲ್ಲಿ 38 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಡಿಕಾಕ್ ಹಾಗೂ ನಾಯಕ ಮರ್ಕ್ರಮ್(29 ರನ್, 26 ಎಸೆತ)ಎರಡನೇ ವಿಕೆಟ್ಗೆ 47 ಎಸೆತಗಳಲ್ಲಿ 83 ರನ್ ಜೊತೆಯಾಟ ನಡೆಸಿ ಇನಿಂಗ್ಸ್ಗೆ ಬಲ ತುಂಬಿದರು. ದಕ್ಷಿಣ ಆಫ್ರಿಕಾ ತಂಡ ಪವರ್ಪ್ಲೇನಲ್ಲಿ 1 ವಿಕೆಟ್ ನಷ್ಟಕ್ಕೆ 53 ರನ್ ಗಳಿಸಿತು.
ಡಿಕಾಕ್ ಕೇವಲ 26 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ಗಳ ಸಹಾಯದಿಂದ ಅರ್ಧಶತಕ ಪೂರೈಸಿದರು. ಡಿಕಾಕ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ದ.ಆಫ್ರಿಕಾ ತಂಡ 10.2 ಓವರ್ಗಳಲ್ಲಿ 100 ರನ್ ತಲುಪಿತು.
ಮರ್ಕ್ರಮ್ ವಿಕೆಟನ್ನು ಪಡೆದ ವರುಣ್ ಚಕ್ರವರ್ತಿ ಎರಡನೇ ವಿಕೆಟ್ ಜೊತೆಯಾಟಕ್ಕೆ ತೆರೆ ಎಳೆದರು. 90 ರನ್ ಗಳಿಸಿ ಶತಕದತ್ತ ಮುನ್ನುಗ್ಗುತ್ತಿದ್ದ ಡಿಕಾಕ್ರನ್ನು ವಿಕೆಟ್ಕೀಪರ್ ಜಿತೇಶ್ ಶರ್ಮಾ ರನೌಟ್ ಮಾಡಿದರು.
ಡಿಕಾಕ್ ಔಟಾದ ಬೆನ್ನಿಗೇ ಡೆವಾಲ್ಡ್ ಬ್ರೆವಿಸ್(14 ರನ್)ಅಕ್ಷರ್ ಪಟೇಲ್ಗೆ ವಿಕೆಟ್ ಒಪ್ಪಿಸಿದರು.
ಮಂಜಿನ ಹನಿ ಕಾಟದಿಂದಾಗಿ ಅರ್ಷದೀಪ್ ಹಾಗೂ ಬುಮ್ರಾ ಇಬ್ಬರೂ ಭಾರೀ ನಿರಾಶೆಗೊಳಿಸಿದರು. ಈ ಇಬ್ಬರ ಯಾರ್ಕರ್ ಪ್ರತಿ ಬಾರಿಯೂ ತಪ್ಪಾಗಿ ಪರಿಣಮಿಸಿತು. ಡೇವಿಡ್ ಮಿಲ್ಲರ್(ಔಟಾಗದೆ 20, 12 ಎಸೆತ, 2 ಬೌಂಡರಿ, 1 ಸಿಕ್ಸರ್) ಹಾಗೂ ಡೊನೊವನ್ ಫೆರೇರ (ಔಟಾಗದೆ 30 ರನ್) ಇದರ ಲಾಭವನ್ನು ಪಡೆದರು. ಐದನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ 23 ಎಸೆತಗಳಲ್ಲಿ 53 ರನ್ ಸೇರಿಸಿದರು. ಕೊನೆಯ 3 ಓವರ್ಗಳಲ್ಲಿ 49 ರನ್ ಹರಿದು ಬಂತು.ಅಂತಿಮವಾಗಿ ದಕ್ಷಿಣ ಆಫ್ರಿಕಾ 213 ರನ್ ಗಳಿಸುವಲ್ಲಿ ಶಕ್ತವಾಯಿತು.
ಭಾರತದ ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್ ವರುಣ್ ಚಕ್ರವರ್ತಿ(2-29)ಯಶಸ್ವಿ ಪ್ರದರ್ಶನ ನೀಡಿದರು. ವೇಗಿಗಳಾದ ಅರ್ಷದೀಪ್ ಹಾಗೂ ಬುಮ್ರಾ 4 ಓವರ್ಗಳಲ್ಲಿ ಕ್ರಮವಾಗಿ 54 ಹಾಗೂ 45 ರನ್ ನೀಡಿ ದುಬಾರಿಯಾದರು.
ದಕ್ಷಿಣ ಆಫ್ರಿಕಾ ತಂಡವು ಆಡುವ 11ರ ಬಳಗದಲ್ಲಿ ಮೂರು ಬದಲಾವಣೆಗಳನ್ನು ಮಾಡಿತ್ತು. ರೀಝಾ ಹೆಂಡ್ರಿಕ್ಸ್, ಜಾರ್ಜ್ ಲಿಂಡ್ ಹಾಗೂ ಒಟ್ನಿಲ್ ಬಾರ್ಟ್ಮನ್ ಅವರು ಟ್ರಿಸ್ಟನ್ ಸ್ಟಬ್ಸ್, ಕೇಶವ ಮಹಾರಾಜ್ ಹಾಗೂ ಅನ್ರಿಚ್ ನೋಟ್ಜೆ ಬದಲಿಗೆ ಆಡಿದರು. ಭಾರತ ತಂಡವು ಯಾವುದೇ ಬದಲಾವಣೆ ಮಾಡಿರಲಿಲ್ಲ.







