IND Vs SA | 2023ರ ಬಳಿಕ ಟಾಸ್ ಗೆದ್ದ Team India

Photo Credit : X
ವಿಶಾಖಪಟ್ಟಣ, ಡಿ.6: ದಕ್ಷಿಣ ಆಫ್ರಿಕಾ ವಿರುದ್ಧ ಶನಿವಾರ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದ ವೇಳೆ ಟಾಸ್ ಜಯಿಸಿದ ಭಾರತ ಕ್ರಿಕೆಟ್ ತಂಡದ ಹಂಗಾಮಿ ನಾಯಕ ಕೆ.ಎಲ್.ರಾಹುಲ್ ಭಾವುಕರಾದರು.
ಇಂದಿನ ಪಂದ್ಯಕ್ಕಿಂತ ಮೊದಲು ಟೀಮ್ ಇಂಡಿಯಾವು ಸತತ 20 ಬಾರಿ ಟಾಸ್ ಸೋತಿತ್ತು. ಕೊನೆಗೂ ಕೆ.ಎಲ್. ರಾಹುಲ್ ಗೆ ಅದೃಷ್ಟ ಖುಲಾಯಿಸಿದ್ದು, ಅವರು ಟಾಸ್ ಗೆದ್ದಿದ್ದಾರೆ. ಭಾರತ ಕ್ರಿಕೆಟ್ ತಂಡವು 2023ರಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನ್ಯೂಝಿಲ್ಯಾಂಡ್ ತಂಡದ ವಿರುದ್ಧ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿ ಫೈನಲ್ ಪಂದ್ಯದಲ್ಲಿ ಕೊನೆಯ ಬಾರಿ ಟಾಸ್ ಗೆದ್ದಿತ್ತು.
ಟಾಸ್ ಗೆದ್ದ ನಂತರ ‘ಯಸ್’ ಎಂದು ಉದ್ಗರಿಸಿದ ರಾಹುಲ್ ನಾವು ಮೊದಲು ಬೌಲಿಂಗ್ ಅಯ್ದುಕೊಳ್ಳುವೆ ಎಂದರು.
‘‘ನಾವು ವಿಶಾಖಪಟ್ಟಣದಲ್ಲಿ ಕಳೆದ ರಾತ್ರಿ ತರಬೇತಿ ನಡೆಸಿದ್ದೇವೆ. ಇಬ್ಬನಿ ಕಾಡಲಿದೆ ಎಂಬ ಮಾಹಿತಿಯನ್ನು ಕೋಚ್ ಗಳಿಂದ ಪಡೆದಿದ್ದೇವೆ. ಆದರೆ ರಾಂಚಿ ಹಾಗೂ ರಾಯ್ಪುರದಲ್ಲಿ ಕಂಡುಬಂದಂತೆ ಬೇಗನೆ ಮಂಜಿನ ಕಾಟ ಇರುವುದಿಲ್ಲ.ಇದೊಂದು ಉತ್ತಮ ಪಿಚ್ ಇದ್ದಂತೆ ಕಾಣುತ್ತಿದೆ. ನಮ್ಮ ನಾಯಕತ್ವದ ಗುಂಪು ಕಳೆದೆರಡು ಪಂದ್ಯಗಳಲ್ಲಿ ಉತ್ತಮವಾಗಿ ಆಡಿದೆ. ನಾವು ಮಾಡಿರುವ ಬೌಲಿಂಗ್ ಹಾಗೂ ಬ್ಯಾಟಿಂಗ್ ಬಗ್ಗೆ ನನಗೆ ಖುಷಿ ಇದೆ’’ ಎಂದು ರಾಹುಲ್ ಹೇಳಿದ್ದಾರೆ.
‘‘ಆಡುವ 11ರ ಬಳಗದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ವಾಶಿಂಗ್ಟನ್ ಸುಂದರ್ ಹೊರಗುಳಿದಿದ್ದು, ತಿಲಕ್ ವರ್ಮಾ ಅವಕಾಶ ಪಡೆದಿದ್ದಾರೆ’’ ಎಂದು ಭಾರತದ ನಾಯಕ ಖಚಿತಪಡಿಸಿದರು.
ಮತ್ತೊಂದೆಡೆ ದಕ್ಷಿಣ ಆಫ್ರಿಕಾ ನಾಯಕ ಟೆಂಬಾ ಬವುಮಾ ಅವರು ಆಡುವ 11ರ ಬಳಗದಲ್ಲಿ ಎರಡು ಬದಲಾವಣೆ ಮಾಡಲಾಗಿದೆ ಎಂದಿದ್ದಾರೆ. ಎರಡನೇ ಏಕದಿನ ಪಂದ್ಯದಲ್ಲಿ ಗಾಯಗೊಂಡಿದ್ದ ಬರ್ಗೆರ್ ಹಾಗೂ ರೆರ್ಝಿ ಬದಲಿಗೆ ರಿಕೆಲ್ಟನ್ ಹಾಗೂ ಬಾರ್ಟ್ಮನ್ ಅವರು ಆಡುವ ಬಳಗವನ್ನು ಸೇರಿದ್ದಾರೆ.







