IND Vs SL ದ್ವಿತೀಯ ಟೆಸ್ಟ್ | ಗೆಲುವಿನತ್ತ ಟೀಮ್ ಇಂಡಿಯಾ ಚಿತ್ತ
ಫಾಲೋಆನ್ ಗೆ ಸಿಲುಕಿದ ಶ್ರೀಲಂಕಾ, ಸೂರ್ಯಬಂಡಾರ, ಮೆಂಡಿಸ್ ಅರ್ಧಶತಕ

Photo Credit: PTI
ಕೊಲಂಬೊ, ಆ. 26: ಇದೇ ಮೊದಲ ಬಾರಿ ತನ್ನ ತಂಡದ ಆಡುವ 11ರ ಬಳಗದಲ್ಲಿ ಕಾಣಿಸಿಕೊಂಡಿರುವ ಪಸಿಂದು ಸೂರ್ಯಬಂಡಾರ 92 ರನ್ ಗಳಿಸಿದ್ದಲ್ಲದೆ, ಎರಡು ಪ್ರಮುಖ ಜೊತೆಯಾಟಗಳಲ್ಲಿ ಭಾಗಿಯಾಗುವುದರೊಂದಿಗೆ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಇನಿಂಗ್ಸ್ ಅಂತರದ ಸೋಲಿನಿಂದ ಪಾರು ಮಾಡಿದರು. ಆದರೆ, ನಾಲ್ಕನೇ ದಿನದಾಟದ ಅಂತ್ಯಕ್ಕೆ ಮತ್ತೆ ಹಿಡಿತ ಸಾಧಿಸಿರುವ ಭಾರತ ಕ್ರಿಕೆಟ್ ತಂಡವು ಗೆಲುವಿನತ್ತ ಚಿತ್ತ ಹರಿಸಿದೆ. ಈ ಮೂಲಕ ಎರಡು ಪಂದ್ಯಗಳ ಸರಣಿಯನ್ನು ಕ್ಲೀನ್ಸ್ವೀಪ್ ಮಾಡುವ ವಿಶ್ವಾಸದಲ್ಲಿದೆ.
ಮಳೆಯಿಂದಾಗಿ ಬುಧವಾರ ನಾಲ್ಕನೇ ದಿನದಾಟವು ಬೇಗನೆ ಕೊನೆಗೊಂಡಿದ್ದು, ಫಾಲೋಆನ್ ಗೆ ಸಿಲುಕಿರುವ ಶ್ರೀಲಂಕಾ ತಂಡವು ತನ್ನ ಎರಡನೇ ಇನಿಂಗ್ಸ್ ನಲ್ಲಿ 6 ವಿಕೆಟ್ ಗಳ ನಷ್ಟಕ್ಕೆ 229 ರನ್ ಗಳಿಸಿದೆ. ಕೇವಲ 16 ರನ್ಗಳ ಹಿನ್ನಡೆಯಲ್ಲಿದೆ.
ಶ್ರೀಲಂಕಾ ತಂಡವು ಮೊದಲ ಇನಿಂಗ್ಸ್ ನಲ್ಲಿ 290 ರನ್ ಗೆ ಆಲೌಟಾದ ನಂತರ ನಾಯಕ ಶುಭಮನ್ ಗಿಲ್ ಫಾಲೋಆನ್ ಹೇರಿದರು. ಲಂಕಾ ತಂಡವು ಎರಡನೇ ಇನಿಂಗ್ಸ್ ನಲ್ಲಿ ಆರಂಭಿಕ ಆಟಗಾರ ಲಹಿರು ಉದಾರ (3 ರನ್) ಅವರ ವಿಕೆಟ್ ನ್ನು ಬೇಗನೆ ಕಳೆದುಕೊಂಡಿತು. ಆಗ ಕಮಿಲ್ ಮಿಶಾರ (32 ರನ್, 39 ಎಸೆತ) ಅವರೊಂದಿಗೆ ಎರಡನೇ ವಿಕೆಟ್ ಗೆ 58 ರನ್ ಜೊತೆಯಾಟ ನಡೆಸಿದ ಸೂರ್ಯಬಂಡಾರ (92 ರನ್, 173 ಎಸೆತ, 10 ಬೌಂಡರಿ, 1 ಸಿಕ್ಸರ್), ಕಮಿಂದು ಮೆಂಡಿಸ್ (55 ರನ್, 92 ಎಸೆತ, 2 ಬೌಂಡರಿ, 3 ಸಿಕ್ಸರ್) ಜೊತೆ ಮೂರನೇ ವಿಕೆಟ್ ಗೆ ಇನ್ನೂ 115 ರನ್ ಸೇರಿಸಿದರು. ಆಗ ಶ್ರೀಲಂಕಾ ತಂಡವು 3 ವಿಕೆಟ್ ಗಳ ನಷ್ಟಕ್ಕೆ 178 ರನ್ ಗಳಿಸಿತ್ತು.
ಸತತ ಎರಡು ಇನಿಂಗ್ಸ್ಗಳಲ್ಲಿ 162.2 ಓವರ್ ಗಳ ಬೌಲಿಂಗ್ ಮಾಡಿ ದಣಿದಿದ್ದ ಭಾರತೀಯ ಬೌಲರ್ ಗಳು ಆರಂಭದಲ್ಲಿ ವಿಕೆಟ್ ಪಡೆಯಲು ಪರದಾಟ ನಡೆಸಿದರು. ಎರಡು ಓವರ್ ಗಳಲ್ಲಿ ನಾಯಕ ಧನಂಜಯ ಡಿಸಿಲ್ವ (23 ರನ್, 44 ಎಸೆತ) ಹಾಗೂ ಸೂರ್ಯಬಂಡಾರ ಅವರ ವಿಕೆಟ್ ಗಳನ್ನು ಉರುಳಿಸಿದ ಸ್ಪಿನ್ನರ್ ಮಾನವ್ ಸುಥಾರ್ ಭಾರತಕ್ಕೆ ಮೇಲುಗೈ ಒದಗಿಸಿದರು. ಸೂರ್ಯಬಂಡಾರ ಕೇವಲ 8 ರನ್ನಿಂದ ತಮ್ಮ ಚೊಚ್ಚಲ ಟೆಸ್ಟ್ ಶತಕದಿಂದ ವಂಚಿತರಾದರು.
ಸ್ಪಿನ್ನರ್ ಸಾರಾಂಶ್ ಜೈನ್ ಅವರು ನಿರೋಶನ್ ಡಿಕ್ವೆಲ್ಲಾ (6 ರನ್) ಅವರ ವಿಕೆಟ್ ಪಡೆದು ಶ್ರೀಲಂಕಾವನ್ನು ಸಂಕಷ್ಟಕ್ಕೆ ಸಿಲುಕಿಸಿದರು.
ಸೋನಾಲ್ ದಿನುಶಾ ಹಾಗೂ ನುವಾಂಥ (3 ರನ್) ಏಳನೇ ವಿಕೆಟ್ ನಲ್ಲಿ 8.2 ಓವರ್ ಗಳಲ್ಲಿ ಕೇವಲ 11 ರನ್ ಸೇರಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.
37 ಎಸೆತಗಳಲ್ಲಿ ಔಟಾಗದೆ 7 ರನ್ ಗಳಿಸಿರುವ ದಿನುಶಾ ಕೊನೆಯ ದಿನವಾದ ಗುರುವಾರ ಬ್ಯಾಟಿಂಗ್ ಮುಂದುವರಿಸಿ ಪಂದ್ಯವನ್ನು ಡ್ರಾಗೊಳಿಸುವ ವಿಶ್ವಾಸದಲ್ಲಿದ್ದಾರೆ. ಸದ್ಯ ಭರ್ಜರಿ ಫಾರ್ಮ್ನಲ್ಲಿರುವ ದಿನುಶಾ ಲಂಕಾ ಪರ ಪ್ರಸಕ್ತ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಶತಕ ಗಳಿಸಿದ್ದಾರೆ. ಇದು ಸರಣಿಯಲ್ಲಿ ಅವರು ಗಳಿಸಿದ ಎರಡನೇ ಶತಕವಾಗಿದೆ.
►ಶ್ರೀಲಂಕಾ 290 ರನ್ ಗೆ ಆಲೌಟ್
ಇದಕ್ಕೂ ಮೊದಲು 8 ವಿಕೆಟ್ ಗಳ ನಷ್ಟಕ್ಕೆ 265 ರನ್ನಿಂದ ತನ್ನ ಮೊದಲ ಇನಿಂಗ್ಸ್ ಮುಂದುವರಿಸಿದ ಶ್ರೀಲಂಕಾ ತಂಡವು ಫಾಲೋಆನ್ನಿಂದ ಪಾರಾಗಲು 39 ರನ್ ಗಳಿಸಬೇಕಾಗಿತ್ತು. 85 ರನ್ನಿಂದ ಬ್ಯಾಟಿಂಗ್ ಮುಂದುವರಿಸಿದ ದಿನುಶಾ ಅವರು ಜೈನ್ ಬೌಲಿಂಗ್ನಲ್ಲಿ ಸಿಕ್ಸರ್ ಸಿಡಿಸಿದರು. ಜೈನ್ ಹಾಗೂ ಕೃಷ್ಣ ಎಸೆತಗಳಲ್ಲಿ ಇನ್ನೆರಡು ಬೌಂಡರಿ ಗಳಿಸಿದ ದಿನುಶಾ 8 ಬೌಂಡರಿ, 3 ಸಿಕ್ಸರ್ ಗಳ ನೆರವಿನಿಂದ 103 ಎಸೆತಗಳಲ್ಲಿ ಶತಕವನ್ನು ಪೂರೈಸಿದರು. ಇದೇ ವೇಳೆ ಲಹಿರು ಕುಮಾರ (12 ರನ್) ಜೊತೆಗೂಡಿ 9ನೇ ವಿಕೆಟ್ ಗೆ ಅರ್ಧಶತಕದ ಜೊತೆಯಾಟವನ್ನು ನಡೆಸಿದರು.
ಕುಮಾರ ವಿಕೆಟ್ನ್ನು ಪಡೆದ ಸಾರಾಂಶ್ ಜೈನ್ ಈ ಜೋಡಿಯನ್ನು ಬೇರ್ಪಡಿಸಿದರು. ಜೈನ್ ಟೆಸ್ಟ್ ಕ್ರಿಕೆಟ್ ನಲ್ಲಿ ತನ್ನ ಮೊದಲ ವಿಕೆಟ್ ಪಡೆದರು. ಶತಕವೀರ ದಿನುಶಾ ಅವರ ವಿಕೆಟ್ ಪಡೆದ ಜೈನ್ ಲಂಕಾದ ಮೊದಲ ಇನಿಂಗ್ಸ್ಗೆ ತೆರೆ ಎಳೆದರು.
ಎರಡನೇ ಇನಿಂಗ್ಸ್ ಆರಂಭಿಸಿದ ಲಂಕಾ ತಂಡವು ತನ್ನ ಕಳಪೆ ಆರಂಭವನ್ನು ಮುಂದುವರಿಸಿತು. 3.3 ಓವರ್ ಗಳಲ್ಲಿ ಮುಹಮ್ಮದ್ ಸಿರಾಜ್ ಅವರ ಬೌನ್ಸರ್ ಎಸೆತಕ್ಕೆ ಲಹಿರು ಉದಾರ ನಿರುತ್ತರವಾದರು. ಆಗ ಸೂರ್ಯಬಂಡಾರ ಹಾಗೂ ಮಿಶಾರ ಅವರು ಸ್ವೀಪಿಂಗ್, ರಿವರ್ಸ್ ಸ್ವೀಪಿಂಗ್ ಮೂಲಕ ಭಾರತದ ತ್ರಿವಳಿ ಸ್ಪಿನ್ನರ್ ಗಳನ್ನು ದಿಟ್ಟವಾಗಿ ಎದುರಿಸಿದರು. ಈ ಜೋಡಿಯು ಕೇವಲ 67 ಎಸೆತಗಳಲ್ಲಿ 58 ರನ್ ಸೇರಿಸಿ ತಂಡವನ್ನು ಆಧರಿಸಿತು. ರವೀಂದ್ರ ಜಡೇಜ ಅವರು ಮಿಶಾರ ಅವರನ್ನು ಎಲ್ಬಿಡಬ್ಲ್ಯು ಬಲೆಗೆ ಬೀಳಿಸಿದರು.
17 ರನ್ ಗಳಿಸಿದ್ದಾಗ ಜೀವದಾನ ಪಡೆದಿದ್ದ ಸೂರ್ಯಬಂಡಾರ ಅವರು ಕಮಿಂದು ಮೆಂಡಿಸ್ ಅವರೊಂದಿಗೆ ಮೂರನೇ ವಿಕೆಟ್ ಗೆ 172 ಎಸೆತಗಳಲ್ಲಿ 115 ರನ್ ಸೇರಿಸಿ ಶ್ರೀಲಂಕಾ ತಂಡ ಪ್ರತಿರೋಧ ಒಡ್ಡಲು ನೆರವಾದರು.
ಟೀ ವಿರಾಮದ ನಂತರ ಕಮಿಂದು ಮೆಂಡಿಸ್ ಹಾಗೂ ಸೂರ್ಯಬಂಡಾರ ಅವರ ವಿಕೆಟ್ ಗಳು ಉರುಳಿದ ನಂತರ ಲಂಕಾದ ಅಬ್ಬರ ಗಣನೀಯವಾಗಿ ಕುಸಿತ ಕಂಡಿತು. ನಾಯಕ ಧನಂಜಯ ಡಿಸಿಲ್ವಗೆ ಸುಥಾರ್ ಪೆವಿಲಿಯನ್ ಹಾದಿ ತೋರಿಸಿದರು.
ಭಾರತವು 5ನೇ ದಿನದಾಟದ ಆರಂಭದಲ್ಲೇ ಲಂಕಾವನ್ನು ಆಲೌಟ್ ಮಾಡುವಲ್ಲಿ ಎಡವಿದರೆ ಪಂದ್ಯವು ಡ್ರಾನಲ್ಲಿ ಕೊನೆಗೊಳ್ಳುವ ಸಾಧ್ಯತೆಯಿದೆ. ಹವಾಮಾನ ಇಲಾಖೆಯು ಗುರುವಾರ ಭಾರಿ ಮಳೆಯ ಮುನ್ಸೂಚನೆ ನೀಡಿರುವುದು ಇದಕ್ಕೆ ಕಾರಣವಾಗಿದೆ.
ಎರಡನೇ ಇನಿಂಗ್ಸ್ ನಲ್ಲಿ ಭಾರತದ ಪರ ಮಾನವ್ ಸುಥಾರ್ (2-81) ಯಶಸ್ವಿ ಬೌಲರ್ ಎನಿಸಿಕೊಂಡರು. ಮುಹಮ್ಮದ್ ಸಿರಾಜ್ (1-11), ಪ್ರಸಿದ್ಧ ಕೃಷ್ಣ (1-31), ರವೀಂದ್ರ ಜಡೇಜ (1-48) ಹಾಗೂ ಸಾರಾಂಶ್ ಜೈನ್ (1-55) ತಲಾ ಒಂದು ವಿಕೆಟ್ ಪಡೆದಿದ್ದಾರೆ.






