ನಾಳೆ ನಾಲ್ಕನೇ ಟಿ-20 ಪಂದ್ಯ| ಗೆಲುವಿನ ಓಟ ಮುಂದುವರಿಸುವ ವಿಶ್ವಾಸದಲ್ಲಿ ಭಾರತ

Photo Credit : BCCI/X
ವಿಶಾಖಪಟ್ಟಣ, ಜ.27: ಸತತ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿ ಐದು ಪಂದ್ಯಗಳ ಟಿ-20 ಸರಣಿಯನ್ನು ವಶಪಡಿಸಿಕೊಂಡಿರುವ ಟೀಮ್ ಇಂಡಿಯಾ ಬುಧವಾರ ನ್ಯೂಝಿಲ್ಯಾಂಡ್ ವಿರುದ್ಧ ನಾಲ್ಕನೇ ಟಿ-20 ಪಂದ್ಯವನ್ನಾಡಲಿದ್ದು, ಗೆಲುವಿನ ಓಟ ಮುಂದುವರಿಸುವ ವಿಶ್ವಾಸದಲ್ಲಿದೆ.
ಟಿ-20 ವಿಶ್ವಕಪ್ಗೆ ಭಾರತ ತಂಡ ಪ್ರಕಟವಾದಾಗ ಇಶಾನ್ ಕಿಶನ್ ಅವರು ಸಂಜು ಸ್ಯಾಮ್ಸನ್ಗೆ ಬದಲಿಗೆ ಆಯ್ಕೆಯಾಗಿದ್ದರು. ತಿಲಕ್ ವರ್ಮಾ ಗಾಯಗೊಂಡ ಕಾರಣ ಕಿವೀಸ್ ವಿರುದ್ಧ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಆಡುವ ಅವಕಾಶ ಪಡೆದ ಕಿಶನ್ ಎರಡನೇ ಟಿ-20ಯಲ್ಲಿ 76 ರನ್ ಗಳಿಸಿ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡಿದ್ದಾರೆ. ಸ್ಯಾಮ್ಸನ್ ಮೊದಲ ಮೂರು ಟಿ-20 ಪಂದ್ಯಗಳಲ್ಲಿ 10, 6 ಹಾಗೂ 0 ರನ್ ಗಳಿಸಿದ್ದಾರೆ. ತಿಲಕ್ ಮರಳಿದಾಗ ಆಡುವ 11ರ ಬಳಗದಲ್ಲಿ ಸ್ಯಾಮ್ಸನ್ ಬದಲಿಗೆ ಕಿಶನ್ ಅವಕಾಶ ಪಡೆಯಲಿದ್ದಾರೆಯೇ ಎಂಬ ಚರ್ಚೆ ಆರಂಭವಾಗಿದೆ.
ತಿಲಕ್ ಗಾಯಗೊಂಡ ಕಾರಣ ಕಿಶನ್ಗೆ ಅವಕಾಶದ ಬಾಗಿಲು ತೆರೆದಿದೆ. ತಿಲಕ್ ಮರಳಿಕೆ ವಿಳಂಬವಾಗಿರುವ ಕಾರಣ ಸ್ಯಾಮ್ಸನ್ಗೆ ಸದ್ಯ ಜೀವದಾನ ಲಭಿಸಿದೆ.
ನ್ಯೂಝಿಲ್ಯಾಂಡ್ ತಂಡವು ಈಗಾಗಲೇ ಸರಣಿಯನ್ನು ಸೋತಿದೆ. ಜೇಮ್ಸ್ ನೀಶಾಮ್ ಹಾಗೂ ಲಾಕಿ ಫರ್ಗ್ಯುಸನ್ ತಂಡವನ್ನು ಸೇರಲಿದ್ದಾರೆ. ವಿಶ್ವಕಪ್ ತಂಡದಲ್ಲಿಲ್ಲದ ಟಿಮ್ ರಾಬಿನ್ಸನ್ ಹಾಗೂ ಕ್ರಿಸ್ಟಿಯನ್ ಕ್ಲಾರ್ಕ್ರನ್ನು ಬಿಡುಗಡೆ ಮಾಡಲಾಗಿದೆ.
ಭಾರತ ತಂಡದಲ್ಲಿ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಭರ್ಜರಿ ಫಾರ್ಮ್ನಲ್ಲಿದ್ದಾರೆ. 2025ರ ನಂತರ 24 ಟಿ-20 ಇನಿಂಗ್ಸ್ಗಳಲ್ಲಿ 45.95ರ ಸರಾಸರಿಯಲ್ಲಿ 1,011 ರನ್ ಗಳಿಸಿದ್ದು, ಎಂಟು ಬಾರಿ 50 ರನ್ ದಾಟಿದ್ದಾರೆ. ಟಿ-20 ಬ್ಯಾಟಿಂಗ್ ಮಿತಿಯನ್ನು ಮರು ವ್ಯಾಖ್ಯಾನಿಸಿದ್ದಾರೆ.







