U19 ವಿಶ್ವಕಪ್ | ಸೂಪರ್ ಸಿಕ್ಸ್ ಪಂದ್ಯದಲ್ಲಿ ಭಾರತಕ್ಕೆ ಸುಲಭ ತುತ್ತಾದ ಝಿಂಬಾಬ್ವೆ

Photo Credit : @ICC
ಬುಲಾವಯೊ, ಜ.27: ಅಂಡರ್-19 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಸೂಪರ್ ಸಿಕ್ಸ್ ಹಂತದಲ್ಲಿ ಆಡಿದ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ ಆತಿಥೇಯ ಝಿಂಬಾಬ್ವೆ ತಂಡವನ್ನು 204 ರನ್ ಗಳ ಅಂತರದಿಂದ ಹೀನಾಯವಾಗಿ ಸೋಲಿಸಿತು.
ಈ ಭರ್ಜರಿ ಗೆಲುವಿನೊಂದಿಗೆ ಭಾರತ ತಂಡ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.
ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಗೆಲ್ಲಲು 353 ರನ್ ಗಳ ಗುರಿ ಪಡೆದಿದ್ದ ಝಿಂಬಾಬ್ವೆ ಅಂಡರ್-19 ತಂಡವು ಲೀರಾಯ್ ಚಿವಾಲಾ (62 ರನ್, 77 ಎಸೆತ) ಅವರ ಏಕಾಂಗಿ ಹೋರಾಟದ ಹೊರತಾಗಿಯೂ 37.4 ಓವರ್ ಗಳಲ್ಲಿ 148 ರನ್ ಗಳಿಗೆ ಆಲೌಟಾಯಿತು.
ಮೊದಲ ಓವರ್ ನ ಎರಡನೇ ಎಸೆತದಲ್ಲೇ ನಥಾನಿಲ್ ವಿಕೆಟ್ ಕಳೆದುಕೊಂಡ ಝಿಂಬಾಬ್ವೆ ಕಳಪೆ ಆರಂಭ ಪಡೆದಿತು. ಇನ್ನೋರ್ವ ಆರಂಭಿಕ ಧ್ರುವ ಪಟೇಲ್ (8 ರನ್) ಕೂಡ ಕ್ರೀಸ್ ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಲೀರಾಯ್ ಹಾಗೂ ಕಿಯಾನ್ ಬ್ಲಿಗ್ನೆಟ್ (37 ರನ್) ನಾಲ್ಕನೇ ವಿಕೆಟ್ಗೆ 69 ರನ್ ಗಳ ಜೊತೆಯಾಟ ನಡೆಸಿ ತಂಡವನ್ನು ಆಧರಿಸಲು ಯತ್ನಿಸಿದರು.
ಐದು ವಿಕೆಟ್ ಗಳ ನಷ್ಟಕ್ಕೆ 142 ರನ್ ಗಳಿಸಿದ್ದ ಝಿಂಬಾಬ್ವೆ, ಕೇವಲ ಆರು ರನ್ ಸೇರಿಸುವಷ್ಟರಲ್ಲಿ ಕೊನೆಯ ಆರು ವಿಕೆಟ್ ಗಳನ್ನು ಕಳೆದುಕೊಂಡಿತು.
ಭಾರತದ ಪರ ವೇಗಿಗಳಾದ ಉದ್ಧವ್ ಮೋಹನ್ (3-20) ಹಾಗೂ ಆರ್.ಎಸ್. ಅಂಬರೀಶ್ (2-19) ಐದು ವಿಕೆಟ್ ಗಳನ್ನು ಹಂಚಿಕೊಂಡರು. ನಾಯಕ ಆಯುಷ್ ಮ್ಹಾತ್ರೆ (3-14) ಕೊನೆಯಲ್ಲಿ ಮೂರು ವಿಕೆಟ್ ಗಳನ್ನು ಉರುಳಿಸಿ ಯಶಸ್ವಿ ಪ್ರದರ್ಶನ ನೀಡಿದರು.
►ಭಾರತ ಅಂಡರ್-19 ತಂಡ: 352/8
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಭಾರತ ತಂಡವು ವಿಹಾನ್ ಮಲ್ಹೋತ್ರಾ ಅವರ ಆಕರ್ಷಕ ಶತಕ (ಔಟಾಗದೆ 109 ರನ್, 107 ಎಸೆತ, 7 ಬೌಂಡರಿ), ಅಭಿಜ್ಞಾನ್ ಕುಂಡು (61 ರನ್, 62 ಎಸೆತ, 5 ಬೌಂಡರಿ, 1 ಸಿಕ್ಸರ್) ಹಾಗೂ ವೈಭವ್ ಸೂರ್ಯವಂಶಿ (52 ರನ್, 30 ಎಸೆತ, 4 ಬೌಂಡರಿ, 4 ಸಿಕ್ಸರ್) ಅವರ ಅರ್ಧಶತಕದ ಕೊಡುಗೆಯ ಸಹಾಯದಿಂದ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ಗಳ ನಷ್ಟಕ್ಕೆ 352 ರನ್ ಗಳಿಸಿತು.
ಇನಿಂಗ್ಸ್ ಆರಂಭಿಸಿದ ವೈಭವ್ ಹಾಗೂ ಆ್ಯರನ್ ಜಾರ್ಜ್ (23 ರನ್, 16 ಎಸೆತ) ಮೊದಲ ವಿಕೆಟ್ಗೆ 44 ರನ್ ಸೇರಿಸಿ ಸಾಧಾರಣ ಆರಂಭ ಒದಗಿಸಿದರು.
ಜಾರ್ಜ್ ಔಟಾದ ನಂತರ ವೈಭವ್ ಹಾಗೂ ನಾಯಕ ಆಯುಷ್ ಮ್ಹಾತ್ರೆ (21 ರನ್, 19 ಎಸೆತ) ಎರಡನೇ ವಿಕೆಟ್ಗೆ 56 ರನ್ ಗಳ ಜೊತೆಯಾಟ ನಡೆಸಿದರು.
14 ವರ್ಷದ ವೈಭವ್ 4 ಬೌಂಡರಿ ಹಾಗೂ 4 ಸಿಕ್ಸರ್ ಗಳ ಸಹಾಯದಿಂದ ಕೇವಲ 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಎಡಗೈ ಬ್ಯಾಟರ್ ವೈಭವ್ ಪಂದ್ಯಾವಳಿಯಲ್ಲಿ ಎರಡನೇ ಅರ್ಧಶತಕ ದಾಖಲಿಸಿದರು. ಅವರು ಬಾಂಗ್ಲಾದೇಶ ವಿರುದ್ಧ 72 ರನ್ ಗಳಿಸಿದ್ದರು. 41.50ರ ಸರಾಸರಿಯಲ್ಲಿ 166 ರನ್ ಗಳಿಸಿರುವ ವೈಭವ್ ಪಂದ್ಯಾವಳಿಯಲ್ಲಿ ಅಗ್ರ ಸ್ಕೋರರ್ ಆಗಿದ್ದಾರೆ.
ಭಾರತ ತಂಡವು 130 ರನ್ಗೆ ನಾಲ್ಕು ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ವಿಹಾನ್ ಹಾಗೂ ಅಭಿಜ್ಞಾನ್ ಐದನೇ ವಿಕೆಟ್ ಗೆ 115 ಎಸೆತಗಳಲ್ಲಿ 113 ರನ್ ಗಳ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು.
ಅಭಿಜ್ಞಾನ್ ಹಾಗೂ ಕನಿಷ್ಕ್ ಚೌಹಾಣ್ (3 ರನ್) ಬೆನ್ನುಬೆನ್ನಿಗೆ ಔಟಾದ ನಂತರ ವಿಹಾನ್ ಹಾಗೂ ಅಂಬರೀಶ್ (21 ರನ್, 28 ಎಸೆತ) ಏಳನೇ ವಿಕೆಟ್ಗೆ 50 ಎಸೆತಗಳಲ್ಲಿ 52 ರನ್ ಸೇರಿಸಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು.
ವಿಹಾನ್ ಪಂದ್ಯಾವಳಿಯಲ್ಲಿ ಮೊದಲ ಬಾರಿ 50ಕ್ಕೂ ಅಧಿಕ ರನ್ ಗಳಿಸಿದರು. ಕುಂಡು ಸತತ ಎರಡನೇ ಬಾರಿ ಅರ್ಧಶತಕ ಗಳಿಸಿದರು.
ಖಿಲನ್ ಪಟೇಲ್ (30 ರನ್, 12 ಎಸೆತ, 1 ಬೌಂಡರಿ, 3 ಸಿಕ್ಸರ್) ಇನಿಂಗ್ಸ್ ಅಂತ್ಯದಲ್ಲಿ ಅಬ್ಬರಿಸಿದರು. ಖಿಲನ್ ಕೊನೆಯ ಓವರ್ ನಲ್ಲಿ ವಿಕೆಟ್ ಒಪ್ಪಿಸಿದರು.
ಝಿಂಬಾಬ್ವೆ ತಂಡದ ಪರ ಟಟೆಂಡ ಚಿಮುಗೊರೊ (3-49) ಯಶಸ್ವಿ ಪ್ರದರ್ಶನ ನೀಡಿದರು. ಸಿಂಬರಶೆ (2-51) ಹಾಗೂ ಪನಾಶೆ ಮಝೈ (2-86) ತಲಾ ಎರಡು ವಿಕೆಟ್ ಗಳನ್ನು ಕಬಳಿಸಿದರು.
►ಸಂಕ್ಷಿಪ್ತ ಸ್ಕೋರ್
ಭಾರತ ಅಂಡರ್-19 ತಂಡ: 50 ಓವರ್ ಗಳಲ್ಲಿ 352/8
(ವಿಹಾನ್ ಮಲ್ಹೋತ್ರಾ ಔಟಾಗದೆ 109, ಅಭಿಜ್ಞಾನ್ ಕುಂಡು 61, ವೈಭವ್ ಸೂರ್ಯವಂಶಿ 52, ಖಿಲನ್ ಪಟೇಲ್ 30; ಟಟೆಂಡ 3-49, ಸಿಂಬರಶೆ 2-51, ಪನಾಶೆ ಮಝೈ 2-86)
ಝಿಂಬಾಬ್ವೆ ಅಂಡರ್-19 ತಂಡ: 37.4 ಓವರ್ ಗಳಲ್ಲಿ 148 ರನ್ ಗಳಿಗೆ ಆಲೌಟ್
(ಲೀರಾಯ್ 62, ಕಿಯಾನ್ 37; ಆಯುಷ್ ಮ್ಹಾತ್ರೆ 3-14, ಉದ್ಧವ್ ಮೋಹನ್ 3-20, ಅಂಬರೀಶ್ 2-19)
ಪಂದ್ಯಶ್ರೇಷ್ಠ: ವಿಹಾನ್ ಮಲ್ಹೋತ್ರಾ







