ಅಫ್ಘಾನಿಸ್ತಾನ ಎ ತಂಡದ ವಿರುದ್ಧ ಭಾರತ ಎ ತಂಡಕ್ಕೆ ಸೋಲು

Photo: x.com/IExpressSports
ದಂಬುಲಾ : ಭಾರತ, ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ಎ ತಂಡಗಳ ನಡುವಿನ ತ್ರಿಕೋಣ ಸರಣಿಯ ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ಎ ತಂಡ ಭಾರತದ ವಿರುದ್ಧ ಅಚ್ಚರಿಯ ಜಯ ಸಾಧಿಸಿದೆ. ಗುರುವಾರ ದಂಬುಲಾದಲ್ಲಿ ಮಳೆಯಿಂದ ಬಾಧಿತವಾದ ಪಂದ್ಯದಲ್ಲಿ ಡೆಕ್ವರ್ತ್-ಲೂಯಿಸ್ ನಿಯಮದಡಿ ಭಾರತ ಎ ತಂಡ ಸೋಲು ಅನುಭವಿಸಿತು. 49 ಓವರ್ಗಳಿಗೆ ಸೀಮಿತಗೊಂಡ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ ಭಾರತ 9 ವಿಕೆಟ್ ನಷ್ಟಕ್ಕೆ 349 ರನ್ಗಳ ಬೃಹತ್ ಮೊತ್ತ ಕಲೆಹಾಕಿತು.
ಪ್ರಭುಸಿಮ್ರನ್ ಸಿಂಗ್ 69 ಎಸೆತಗಳಲ್ಲಿ 84 ರನ್ ಸಿಡಿಸಿದರೆ, ತಿಲಕ್ ವರ್ಮಾ (66) ಮತ್ತು ಋತುರಾಜ್ ಗಾಯಕ್ವಾಡ್ (66) ಅವರ ಭರ್ಜರಿ ಅರ್ಧಶತಕಗಳು ಭಾರತದ ಬೃಹತ್ ಮೊತ್ತಕ್ಕೆ ಕಾರಣವಾಯಿತು. ನಿರಂತರ ಮಳೆಯಿಂದ ಬಾಧಿತವಾದ ಪಂದ್ಯದಲ್ಲಿ ಅಫ್ಘಾನಿಸ್ತಾನಕ್ಕೆ 38 ಓವರ್ಗಳಲ್ಲಿ 294 ರನ್ಗಳ ಗೆಲುವಿನ ಗುರಿ ನಿಗದಿಪಡಿಸಲಾಯಿತು.
ನಾಯಕ ಇಮ್ರಾನ್ (70 ಎಸೆತಗಳಲ್ಲಿ ಅಜೇಯ 75) ಮತ್ತು ಹಸನ್ ಇಸಾಖಿ (29 ಎಸೆತಗಳಲ್ಲಿ 34) ಅವರ ಸ್ಫೋಟಕ ಆರಂಭದಿಂದ ಅಫ್ಘಾನಿಸ್ತಾನ ಮುನ್ನಡೆ ಸಾಧಿಸಿತು. ಈ ಹಂತದಲ್ಲಿ ಬಾಹಿರ್ ಶಾ (51) ಅವರು ಇಮ್ರಾನ್ಗೆ ಸಾಥ್ ನೀಡಿದರು. 25.5 ಓವರ್ಗಳಾದಾಗ ಮಳೆ ಪಂದ್ಯವನ್ನು ಮುಕ್ತಾಯಗೊಳಿಸಿತು. ಆಗ ಅಫ್ಘಾನ್ ತಂಡ 2 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿತ್ತು. ಗೆಲುವಿನ ರನ್ ಗುರಿಯ ಆಧಾರದಲ್ಲಿ ಅಫ್ಘಾನಿಸ್ತಾನ ಮುಂದಿದ್ದ ಹಿನ್ನೆಲೆಯಲ್ಲಿ ವಿಜಯಿ ಎಂದು ಘೋಷಿಸಲಾಯಿತು.
ಪ್ರಸಕ್ತ ವರ್ಷದ ಐಪಿಎಲ್ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಯುವ ಆಟಗಾರ ವೈಭವ್ ಸೂರ್ಯವಂಶಿ 22 ಎಸೆತಗಳಲ್ಲಿ ಒಂಬತ್ತು ಬೌಂಡರಿ ಸಹಿತ 44 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.






