ಇಂಗ್ಲೆಂಡ್ ಲಯನ್ಸ್ ವಿರುದ್ಧದ 2ನೇ ಅನಧಿಕೃತ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯ

PC | X
ನಾರ್ತ್ಹ್ಯಾಂಪ್ಟನ್: ಭಾರತ ತಂಡ ಹಾಗೂ ಇಂಗ್ಲೆಂಡ್ ಲಯನ್ಸ್ ತಂಡಗಳ ನಡುವಿನ ಎರಡನೇ ಅನಧಿಕೃತ ಟೆಸ್ಟ್ ಪಂದ್ಯ ಸೋಮವಾರ ಡ್ರಾದಲ್ಲಿ ಅಂತ್ಯಗೊಂಡಿತು. ನಾರ್ತ್ಹ್ಯಾಂಪ್ಟನ್ ಕೌಂಟಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ ಎ ತಂಡ ಬೃಹತ್ ಮುನ್ನಡೆ ಗಳಿಸಿದರೂ, ಎರಡನೇ ಇನಿಂಗ್ಸ್ ನಲ್ಲಿ ಇಂಗ್ಲೆಂಡ್ ತಂಡ 3 ವಿಕೆಟ್ ನಷ್ಟಕ್ಕೆ 32 ರನ್ ಗಳಿಸಿ, ಸೋಲು ತಪ್ಪಿಸಿಕೊಂಡಿತು.
ಭಾರತ ಎ ತಂಡ ಮೊದಲ ಇನಿಂಗ್ಸ್ ನಲ್ಲಿ 348 ರನ್ ಗಳಿಸಿದ ಬಳಿಕ ಅತಿಥೇಯ ತಂಡದ ವಿರುದ್ಧ 21 ರನ್ಗಳ ಮುನ್ನಡೆ ಪಡೆಯಿತು. ಎರಡನೇ ಇನಿಂಗ್ಸ್ ನಲ್ಲಿ ಭರ್ಜರಿ ಪ್ರದರ್ಶನ ತೋರಿದ ಭಾರತೀಯ ಬ್ಯಾಟ್ಸ್ ಮನ್ಗಳು ಏಳು ವಿಕೆಟ್ ನಷ್ಟಕ್ಕೆ 417 ರನ್ ಕಲೆಹಾಕಿ, ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು. ನಾಲ್ಕನೇ ದಿನ ಉಳಿದ ಅಲ್ಪ ಅವಧಿಯಲ್ಲಿ ಭಾರತೀಯ ಬೌಲರ್ ಗಳು 3 ವಿಕೆಟ್ಗಳನ್ನು ಕಿತ್ತರು.
ಇಂಗ್ಲೆಂಡ್ ವಿರುದ್ಧ ಈ ತಿಂಗಳ 20ರಿಂದ ಆರಂಭವಾಗುವ ಐದು ಟೆಸ್ಟ್ ಗಳ ಸರಣಿಯ ಅಭ್ಯಾಸಕ್ಕಾಗಿ ಎರಡು ಅನಧಿಕೃತ ಟೆಸ್ಟ್ ಗಳನ್ನು ಆಯೋಜಿಸಲಾಗಿತ್ತು. ಭಾರತ ತಂಡದ ಪ್ರಮುಖ ಆಟಗಾರರಾದ ಕೆ.ಎಲ್.ರಾಹುಲ್, ಅಭಿಮನ್ಯು ಈಶ್ವರನ್, ಶಾರ್ದೂಲ್ ಠಾಕೂರ್, ನಿತೀಶ್ ಕುಮಾರ್ ರೆಡ್ಡಿ ಹಾಗೂ ಧ್ರುವ್ ಜುರೇಲ್ ಎರಡನೇ ಟೆಸ್ಟ್ ನಲ್ಲಿ ಆಡಿದರು.
ಮೊದಲ ಇನಿಂಗ್ಸ್ ನಲ್ಲಿ 116 ರನ್ ಸಿಡಿಸಿದ್ದ ರಾಹುಲ್ 2ನೇ ಇನಿಂಗ್ಸ್ನಲ್ಲಿ 51 ರನ್ ಗಳಿಸಿದರು. ಅಭಿಮನ್ಯು ಈಶ್ವರನ್ ಎರಡು ಇನಿಂಗ್ಸ್ ಗಳಲ್ಲಿ ಕ್ರಮವಾಗಿ 11 ಹಾಗೂ 80 ರನ್ ಪಡೆದರು. ಶಾರ್ದೂಲ್ ಠಾಕೂರ್ (19 ಮತ್ತು 34) ಮತ್ತು ನಿತೀಶ್ ಕುಮಾರ್ ರೆಡ್ಡಿ (42 ಮತ್ತು 34) ಅವರು ವೇಗದ ಬೌಲಿಂಗ್ ಮತ್ತು ಆಲ್ರೌಂಡರ್ ಜಾಗಕ್ಕೆ ಸ್ಪರ್ಧಿಗಳು. ಇಬ್ಬರ ಪೈಕಿ ರೆಡ್ಡಿ ಮಾತ್ರ ಮೊದಲ ಇನಿಂಗ್ಸ್ ನಲ್ಲಿ ಒಂದು ವಿಕೆಟ್ ಪಡೆದರು. ವಿಕೆಟ್ ಕೀಪರ್ ಧ್ರುವ್ ಜುರೆಲ್ ಕ್ರಮವಾಗಿ 52 ಹಾಗೂ 28 ಗನ್ ಗಳಿಸಿದರು.
ಉಳಿದಂತೆ ಭಾರತ ಪರ ಎರಡನೇ ಇನಿಂಗ್ಸ್ ನಲ್ಲಿ ತನುಷ್ ಕೋಟ್ಯಾನ್ (ನಾಟೌಟ್ 90) ಹಾಗೂ ಅಂಶುಲ್ ಕಾಂಭೋಜ್ (ನಾಟೌಟ್ 51) ಗಣನೀಯ ಪ್ರದರ್ಶ ತೋರಿದರು. ಎಡಗೈ ಬೌಲರ್ ಖಲೀಲ್ ಅಹ್ಮದ್ ಮೊದಲ ಇನಿಂಗ್ಸ್ ನಲ್ಲಿ 4 ವಿಕೆಟ್ ಕಿತ್ತರೆ, ಕಾಂಬೋಜ್ ಹಾಗೂ ತುಷಾರ್ ದೇಶಪಾಂಡೆ ತಲಾ ಮೂರು ವಿಕೆಟ್ ಗೊಂಚಲು ಪಡೆದರು.