ಮೊದಲ ಟೆಸ್ಟ್: 471 ರನ್ಗೆ ಭಾರತ ಆಲೌಟ್ | ದಿಢೀರ್ ಕುಸಿತ ಕಂಡ ಗಿಲ್ ಬಳಗ, ಪಂತ್ 134 ರನ್

PC : X
ಲೀಡ್ಸ್: ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಶತಕದ(134 ರನ್, 178 ಎಸೆತ, 12 ಬೌಂಡರಿ, 6 ಸಿಕ್ಸರ್)ಹೊರತಾಗಿಯೂ ಭಾರತ ಕ್ರಿಕೆಟ್ ತಂಡವು ಇಂಗ್ಲೆಂಡ್ ವಿರುದ್ಧ ಇಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ತನ್ನ ಮೊದಲ ಇನಿಂಗ್ಸ್ ನಲ್ಲಿ ದಿಢೀರ್ ಕುಸಿತಕ್ಕೆ ಒಳಗಾಗಿ 471 ರನ್ಗೆ ಆಲೌಟಾಯಿತು.
3 ವಿಕೆಟ್ಗಳ ನಷ್ಟಕ್ಕೆ 359 ರನ್ನಿಂದ ತನ್ನ ಬ್ಯಾಟಿಂಗ್ ಮುಂದುವರಿಸಿದ ಭಾರತ ತಂಡದ ಪರ ನಾಯಕ ಶುಭಮನ್ ಗಿಲ್ ಹಾಗೂ ರಿಷಭ್ ಪಂತ್ 4ನೇ ವಿಕೆಟ್ ಗೆ 301 ಎಸೆತಗಳಲ್ಲಿ 209 ರನ್ ಜೊತೆಯಾಟ ನಡೆಸಿದರು. ಆದರೆ ಈ ಇಬ್ಬರು ಬೇರ್ಪಟ್ಟ ನಂತರ ಭಾರತವು ಭಾರೀ ಕುಸಿತ ಕಂಡಿತು. ಗಿಲ್ (147 ರನ್, 227 ಎಸೆತ, 19 ಬೌಂಡರಿ, 1 ಸಿಕ್ಸರ್) ವಿಕೆಟನ್ನು ಉರುಳಿಸಿದ ಸ್ಪಿನ್ನರ್ ಶುಐಬ್ ಬಶೀರ್ ದ್ವಿಶತಕದ ಜೊತೆಯಾಟಕ್ಕೆ ತೆರೆ ಎಳೆದರು.
ಗಿಲ್ ಔಟಾದ ಬೆನ್ನಲ್ಲೇ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ಕರುಣ್ ನಾಯರ್ ಪೆವಿಲಿಯನ್ ಸೇರಿದರು. 8 ವರ್ಷಗಳ ನಂತರ ಟೀಮ್ ಇಂಡಿಯಾಕ್ಕೆ ವಾಪಸಾಗಿರುವ ನಾಯರ್ ಶೂನ್ಯಕ್ಕೆ ಔಟಾಗಿ ನಿರಾಸೆಗೊಳಿಸಿದರು.
ಆಲ್ರೌಂಡರ್ ರವೀಂದ್ರ ಜಡೇಜ(11 ರನ್), ಶಾರ್ದುಲ್ ಠಾಕೂರ್(1), ಬುಮ್ರಾ(0) ಹಾಗೂ ಪ್ರಸಿದ್ಧ ಕೃಷ್ಣ(1 ರನ್)ಪೆವಿಲಿಯನ್ ಗೆ ಪರೇಡ್ ನಡೆಸಿದರು.
ಭಾರತ ತಂಡವು ಕೊನೆಯ 7 ವಿಕೆಟ್ಗಳನ್ನು ಕೇವಲ 41 ರನ್ಗೆ ಕಳೆದುಕೊಂಡು ದಿಢೀರ್ ಕುಸಿತ ಕಂಡಿತು. ಬೆನ್ ಸ್ಟೋಕ್ಸ್(4-66)ಹಾಗೂ ಜೋಶ್ ಟಂಗ್(4-86)ತಲಾ 4 ವಿಕೆಟ್ಗಳನ್ನು ಉರುಳಿಸಿದರು.
ವನ್ ಮ್ಯಾನ್ ಶೋ ಮೂಲಕ ಮಿಂಚಿದ ಪಂತ್ ಅವರು ಸ್ಪಿನ್ನರ್ ಬಶೀರ್ ಬೌಲಿಂಗ್ ನಲ್ಲಿ ಸಿಕ್ಸರ್ ಸಿಡಿಸುವ ಮೂಲಕ 146ನೇ ಎಸೆತದಲ್ಲಿ ತನ್ನ 7ನೇ ಶತಕ ಪೂರೈಸಿದರು.
ಮೂವರು ಬ್ಯಾಟರ್ ಗಳು ಶತಕ ಗಳಿಸಿದ ನಂತರ ಭಾರತವು ಕನಿಷ್ಠ ಮೊತ್ತಕ್ಕೆ(471 ರನ್)ಆಲೌಟಾಗಿದೆ. ಈ ಹಿಂದೆ ಸೆಂಚೂರಿಯನ್ನಲ್ಲಿ ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ 475 ರನ್ ಗಳಿಸಿತ್ತು.







