ನಾಳೆ(ಅ.19)ಯಿಂದ ಮೊದಲ ಏಕದಿನ: ಭಾರತ-ಆಸ್ಟ್ರೇಲಿಯ ಹಣಾಹಣಿ

Photo Credit : PTI
ಪರ್ತ್, ಅ.18: ಆಸ್ಟ್ರೇಲಿಯ ತಂಡದ ವಿರುದ್ಧ ಒಪ್ಟಸ್ ಸ್ಟೇಡಿಯಂನಲ್ಲಿ ರವಿವಾರ ನಡೆಯಲಿರುವ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆಡಲಿರುವ ಭಾರತ ತಂಡ ಶುಭಾರಂಭದ ನಿರೀಕ್ಷೆಯಲ್ಲಿದೆ. ಈ ಪಂದ್ಯದ ಮೂಲಕ ಹಿರಿಯ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಪುನರಾಗಮನಗೈಯಲಿದ್ದು, ಶುಭಮನ್ ಗಿಲ್ ಏಕದಿನ ಅಂತರರಾಷ್ಟ್ರೀಯ ಪಂದ್ಯದಲ್ಲಿ ಮೊದಲ ಬಾರಿ ಪೂರ್ಣಕಾಲಿಕ ನಾಯಕನಾಗಿ ಭಾರತೀಯ ತಂಡವನ್ನು ಮುನ್ನಡೆಸಲಿದ್ದಾರೆ.
*ಕೊಹ್ಲಿ-ರೋಹಿತ್ ವಾಪಸ್: ಮಾರ್ಚ್ನಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ಫೈನಲ್ ನಂತರ ಕೊಹ್ಲಿ ಹಾಗೂ ರೋಹಿತ್ ಮೊದಲ ಬಾರಿ ಏಕದಿನ ಪಂದ್ಯವನ್ನು ಆಡಲು ಸಜ್ಜಾಗಿದ್ದಾರೆ. ಈ ಇಬ್ಬರು ಆಟಗಾರರು 9 ವರ್ಷಗಳ ಹಿಂದೆ ನ್ಯೂಝಿಲ್ಯಾಂಡ್ ವಿರುದ್ಧ ಪಂದ್ಯದಲ್ಲಿ ಬೇರೆ ನಾಯಕನ ಅಡಿ ಕೊನೆಯ ಬಾರಿ ಆಡಿದ್ದರು.
ಕೊಹ್ಲಿ ಹಾಗೂ ರೋಹಿತ್ ತಂಡಕ್ಕೆ ಪುನರಾಗಮನಗೈಯ್ಯಲು ತೀವ್ರ ಕಸರತ್ತು ನಡೆಸಿದ್ದಾರೆ. ರೋಹಿತ್ ಬೆಂಗಳೂರಿನಲ್ಲಿ ತರಬೇತಿ ನಡೆಸಿದರೆ, ಕೊಹ್ಲಿ ಅವರು ಲಂಡನ್ ನಲ್ಲಿ ತನ್ನ ಲಯ ಕಂಡುಕೊಳ್ಳಲು ಯತ್ನಿಸಿದ್ದರು.
ಐಪಿಎಲ್ ನಲ್ಲಿ ಕೊನೆಯ ಬಾರಿ ಸ್ಪರ್ಧಾತ್ಮಕ ಪಂದ್ಯವನ್ನು ಆಡಿದ್ದ ಈ ಇಬ್ಬರು ಆಟಗಾರರಿಗೆ ಬೇಗನೆ ಫಾರ್ಮ್ ಗೆ ಮರಳುವುದು ಸವಾಲಿನ ವಿಚಾರವಾಗಿದೆ. ರೋಹಿತ್ ಸೀನಿಯರ್ ಆಟಗಾರನಾಗಿ ಆಡಲಿದ್ದು, ನಾಯಕತ್ವದ ಹೊರೆ ಇಳಿಸಿಕೊಂಡಿದ್ದಾರೆ.
ಸರಣಿಯ ನಂತರ ಈ ಇಬ್ಬರ ಪ್ರದರ್ಶನವನ್ನು ಮ್ಯಾನೇಜ್ಮೆಂಟ್ ವಿಮರ್ಶಿಸಲಿದೆ ಎಂದು ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಹೇಳಿದ್ದಾರೆ.
*ಗಿಲ್ ಗೆ ಮೊದಲ ಪರೀಕ್ಷೆ: 26ರ ಹರೆಯದ ಗಿಲ್ ಗೆ ಈಗಾಗಲೇ ಟೆಸ್ಟ್ ತಂಡವನ್ನು ಮುನ್ನಡೆಸಿದ ಅನುಭವವಿದ್ದರೂ ರೋಹಿತ್ ಹಾಗೂ ಕೊಹ್ಲಿಯ ಮಾರ್ಗದರ್ಶನದ ನಿರೀಕ್ಷೆಯಲ್ಲಿದ್ದಾರೆ. ವಿದೇಶಿ ವಾತಾವರಣದಲ್ಲಿ ಬ್ಯಾಟರ್ ಆಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಇದೀಗ ನಾಯಕತ್ವದ ಪರೀಕ್ಷೆ ಎದುರಿಸಲಿದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ ಭಾರತವು ರೋಹಿತ್ ನಾಯಕತ್ವದಲ್ಲಿ ಶೇ.75ರಷ್ಟು ಗೆಲುವಿನ ದಾಖಲೆ ಹೊಂದಿದೆ.
ಮಿಚೆಲ್ ಮಾರ್ಷ್ ನೇತೃತ್ವದ ಆಸ್ಟ್ರೇಲಿಯ ತಂಡವು ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲಿ ಆಡುತ್ತಿದ್ದರೂ ಭಾರತಕ್ಕೆ ಕಠಿಣ ಸವಾಲೊಡ್ಡುವ ವಿಶ್ವಾಸದಲ್ಲಿದೆ.
*ಟೀಮ್ ನ್ಯೂಸ್: ಗಿಲ್-ರೋಹಿತ್ ಆರಂಭಿಕ ಜೋಡಿಯಾಗಿ ಮುಂದುವರಿಯುವ ನಿರೀಕ್ಷೆ ಇದೆ. ಯಶಸ್ವಿ ಜೈಸ್ವಾಲ್ ಮೀಸಲು ಆಟಗಾರನಾಗಿದ್ದಾರೆ. ಕೊಹ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರೆ, ಆ ನಂತರ ಶ್ರೇಯಸ್ ಅಯ್ಯರ್ ಹಾಗೂ ವಿಕೆಟ್ ಕೀಪರ್ ಕೆ.ಎಲ್.ರಾಹುಲ್ ಬ್ಯಾಟಿಂಗ್ ಗೆ ಇಳಿಯಲಿದ್ದಾರೆ. ಹಾರ್ದಿಕ ಪಾಂಡ್ಯ ಅನುಪಸ್ಥಿತಿಯಲ್ಲಿ ನಿತೀಶ್ ಕುಮಾರ್ ರೆಡ್ಡಿ ಚೊಚ್ಚಲ ಏಕದಿನ ಪಂದ್ಯ ಆಡುವ ಸಾಧ್ಯತೆಯಿದೆ.
8ನೇ ಕ್ರಮಾಂಕದಲ್ಲಿ ಯಾರು ಆಡುತ್ತಾರೆಂಬ ಕುತೂಹಲವಿದೆ. ವಾಷಿಂಗ್ಟನ್ ಸುಂದರ್ ರನ್ನು ಆಡಿಸುವ ಮೂಲಕ ಭಾರತವು ಬ್ಯಾಟಿಂಗ್ ಗೆ ಬಲ ತುಂಬುವ ಯೋಚನೆಯಲ್ಲಿದೆ.
ಹರ್ಷಿತ್ ರಾಣಾ ಹಾಗೂ ಪ್ರಸಿದ್ಧ ಕೃಷ್ಣ ಅವರು ಮುಹಮ್ಮದ್ ಸಿರಾಜ್ ಹಾಗೂ ಅರ್ಷದೀಪ್ ಗೆ ಸಾಥ್ ನೀಡಬಹುದು. ಅಕ್ಷರ್ ಪಟೇಲ್ ಹಾಗೂ ಕುಲದೀಪ್ ಯಾದವ್ ಸ್ಪಿನ್ ವಿಭಾಗವನ್ನು ನಿಭಾಯಿಸುವ ನಿರೀಕ್ಷೆ ಇದೆ.
ಆಸ್ಟ್ರೇಲಿಯ ತಂಡವು ಮಾರ್ಷ್ ಹಾಗೂ ಟ್ರಾವಿಸ್ ಹೆಡ್ ಗೆ ಬೆಂಬಲ ನೀಡಲು ಕೂಪರ್ ಕೊನೊಲ್ಲಿ, ಮಾರ್ನಸ್ ಲ್ಯಾಬುಶೇನ್ ಹಾಗೂ ಮ್ಯಾಥ್ಯೂ ರೆನ್ಶಾರನ್ನು ಅವಲಂಬಿಸಿದೆ.
ಮಧ್ಯಮ ಸರದಿಯ ಬ್ಯಾಟರ್ ಗಳಾದ ಮ್ಯಾಟ್ ರೆನ್ಶಾ ಹಾಗೂ ಮಿಚೆಲ್ ಓವನ್ ತಮ್ಮ ಚೊಚ್ಚಲ ಏಕದಿನ ಪಂದ್ಯವನ್ನಾಡಲು ಸಜ್ಜಾಗಿದ್ದಾರೆ. ಜೋಶ್ ಫಿಲಿಪ್ 2021ರ ನಂತರ ಏಕದಿನ ಪಂದ್ಯವನ್ನಾಡುವ ಸಾಧ್ಯತೆಯಿದೆ. ಝಂಪಾ ಬದಲಿಗೆ ಆಡಲಿರುವ ಎಡಗೈ ಸ್ಪಿನ್ನರ್ ಮ್ಯಾಟ್ ಕುಹ್ನೆಮನ್ ಸ್ವದೇಶದಲ್ಲಿ ಮೊದಲ ಬಾರಿ ಆಡುವ ವಿಶ್ವಾಸದಲ್ಲಿದ್ದಾರೆ.
*ಪಿಚ್ ಪರಿಸ್ಥಿತಿ: ಒಪ್ಟಸ್ ಸ್ಟೇಡಿಯಂ ಇತ್ತೀಚೆಗಿನ ದಿನಗಳಲ್ಲಿ ಬ್ಯಾಟರ್ ಗಳಿಗೆ ಹೆಚ್ಚು ನೆರವು ನೀಡುತ್ತಿಲ್ಲ. ಈ ಮೈದಾನದಲ್ಲಿ ನಡೆದ ಹಿಂದಿನ 2 ಪಂದ್ಯಗಳಲ್ಲಿ ಆಸ್ಟ್ರೇಲಿಯ ತಂಡವು 152 ಹಾಗೂ 140 ರನ್ಗೆ ಆಲೌಟಾಗಿದೆ. ಈ ಮೈದಾನದಲ್ಲಿ 6 ವರ್ಷಗಳಲ್ಲಿ ಆಡಿರುವ ಎಲ್ಲ 3 ಏಕದಿನ ಪಂದ್ಯಗಳನ್ನು ಆಸ್ಟ್ರೇಲಿಯ ಸೋತಿದೆ. ಹವಾಮಾನ ಇಲಾಖೆಯು ಹಗಲಿನಲ್ಲಿ ಮಳೆ ಸುರಿಯುವ ಮುನ್ಸೂಚನೆ ನೀಡಿದೆ.
ಅಂಕಿ-ಅಂಶ
► ಕೊಹ್ಲಿ ಹಾಗೂ ರೋಹಿತ್ 9 ವರ್ಷಗಳ ಹಿಂದೆ ನ್ಯೂಝಿಲ್ಯಾಂಡ್ ವಿರುದ್ಧ ಬೇರೆ ನಾಯಕನ ಅಡಿಯಲ್ಲಿ ಆಡಿದ್ದರು.
► ಆಸ್ಟ್ರೇಲಿಯ ತಂಡ ಪರ್ತ್ನ ಒಪ್ಟಸ್ ಸ್ಟೇಡಿಯಂನಲ್ಲಿ ಈ ತನಕ ಆಡಿರುವ ಎಲ್ಲ 3 ಪಂದ್ಯಗಳನ್ನು ಸೋತಿದೆ.
► ಏಕದಿನ ಕ್ರಿಕೆಟ್ ನಲ್ಲಿ 3,000 ರನ್ ಪೂರೈಸಲು ಟ್ರಾವಿಸ್ ಹೆಡ್ ಗೆ 58 ರನ್ ಅಗತ್ಯವಿದೆ.
► ಮಿಚೆಲ್ ಸ್ಟಾರ್ಕ್ 2024ರ ನಂತರ ಪರ್ತ್ನಲ್ಲಿ ಮೊದಲ ಏಕದಿನ ಪಂದ್ಯವನ್ನಾಡಲಿದ್ದಾರೆ.
ಭಾರತ(ಸಂಭಾವ್ಯ): 1.ರೋಹಿತ್ ಶರ್ಮಾ, 2. ಶುಭಮನ್ ಗಿಲ್(ನಾಯಕ), 3. ವಿರಾಟ್ ಕೊಹ್ಲಿ, 4.ಶ್ರೇಯಸ್ ಅಯ್ಯರ್, 5. ಕೆ.ಎಲ್.ರಾಹುಲ್(ವಿಕೆಟ್ ಕೀಪರ್), 6. ಅಕ್ಷರ್ ಪಟೇಲ್, 7. ನಿತೀಶ್ ರೆಡ್ಡಿ, 8. ಸುಂದರ್/ಕುಲದೀಪ್ ಯಾದವ್, 9. ಹರ್ಷಿತ್ ರಾಣಾ, 10. ಮುಹಮ್ಮದ್ ಸಿರಾಜ್, 11.ಪ್ರಸಿದ್ಧ ಕೃಷ್ಣ/ಅರ್ಷದೀಪ್ ಸಿಂಗ್.
ಆಸ್ಟ್ರೇಲಿಯ(ಸಂಭಾವ್ಯ): 1. ಟ್ರಾವಿಸ್ ಹೆಡ್, 2. ಮಿಚೆಲ್ ಮಾರ್ಷ್(ನಾಯಕ), 3. ಮ್ಯಾಟ್ ಶಾರ್ಟ್, 4. ಮ್ಯಾಟ್ ರೆನ್ಶಾ, 5. ಜೋಶ್ ಫಿಲಿಪ್(ವಿಕೆಟ್ ಕೀಪರ್), 6.ಮಿಚೆಲ್ ಓವನ್, 7. ಕೂಪರ್ ಕೊನೊಲ್ಲಿ, 8. ಮಿಚೆಲ್ ಸ್ಟಾರ್ಕ್, 9. ನಾಥನ್ ಎಲ್ಲಿಸ್, 10. ಮ್ಯಾಟ್ ಕುಹ್ನೆಮನ್, 11.ಜೋಶ್ ಹೇಝಲ್ವುಡ್.
*ಪಂದ್ಯ ಆರಂಭದ ಸಮಯ: ಬೆಳಗ್ಗೆ 9:00
(ಭಾರತೀಯ ಕಾಲಮಾನ)







