Asian Games 2026 | ವೈಯಕ್ತಿಕ ವಿಭಾಗದಲ್ಲಿ ಭಾರತಕ್ಕೆ ಮೊದಲ ಚಿನ್ನ: ಟ್ರ್ಯಾಪ್ ಶೂಟಿಂಗ್ ನಲ್ಲಿ ನೀರು ಧಂಡಾ ಐತಿಹಾಸಿಕ ಸಾಧನೆ

ಭಾರತದ ಶೂಟರ್ ನೀರು ಧಂಡಾ (Photo: Rediff)
ಹೊಸದಿಲ್ಲಿ / ನಗೋಯಾ: ಏಷ್ಯನ್ ಗೇಮ್ಸ್ನಲ್ಲಿ ಮಂಗಳವಾರ ಇತಿಹಾಸ ನಿರ್ಮಿಸಿದ ಭಾರತದ ಶೂಟರ್ ನೀರು ಧಂಡಾ, ಮಹಿಳೆಯರ ಟ್ರ್ಯಾಪ್ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ನೀರು ಧಂಡಾ ಅವರು 2026ರ ಏಷ್ಯನ್ ಗೇಮ್ಸ್ನಲ್ಲಿ ಭಾರತಕ್ಕೆ ಮೊದಲ ವೈಯಕ್ತಿಕ ಚಿನ್ನದ ಪದಕ ಗೆದ್ದಿದ್ದಾರೆ.
ಹರಿಯಾಣದ ಜಿಂದ್ ಜಿಲ್ಲೆಯ ಸೇನೆಯಲ್ಲಿ ನಾಯಬ್ ಸುಬೇದಾರ್ ಆಗಿರುವ ನೀರು, ಜುಲೈನಲ್ಲಿ ಇಟಲಿಯಲ್ಲಿ ನಡೆದ ಶಾಟ್ಗನ್ ವಿಶ್ವಕಪ್ನಲ್ಲಿ ಟ್ರ್ಯಾಪ್ ವಿಭಾಗದಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಸಾಧನೆ ಮಾಡಿದ್ದರು.
ಇದೀಗ ಏಷ್ಯನ್ ಗೇಮ್ಸ್ನಲ್ಲೂ 28 ಅಂಕಗಳೊಂದಿಗೆ ಚಿನ್ನ ಗೆದ್ದಿರುವ ನೀರು, ಈ ಮೂಲಕ ಹಿಂದಿನ 24 ಅಂಕಗಳ ಏಷ್ಯನ್ ದಾಖಲೆಯನ್ನು ಮೀರಿಸಿದ್ದಾರೆ.
ರವಿವಾರದ ಮೊದಲ ಎರಡು ಸುತ್ತುಗಳಲ್ಲಿ ತಲಾ 24 ಅಂಕ ಗಳಿಸಿದ್ದ ನೀರು, ಸೋಮವಾರದ ಮೂರನೇ ಹಾಗೂ ನಾಲ್ಕನೇ ಸುತ್ತಿನಲ್ಲಿ ಕ್ರಮವಾಗಿ 24 ಮತ್ತು 23 ಅಂಕ ಗಳಿಸಿದ್ದರು. ನಾಲ್ಕು ಸುತ್ತುಗಳ ಬಳಿಕ 95 ಅಂಕಗಳೊಂದಿಗೆ ಕತಾರ್ನ ಬಸಿಲ್ ರೇಗಿಂತ ಒಂದು ಅಂಕ ಮುನ್ನಡೆಯಲ್ಲಿದ್ದರು.
ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಟ್ರ್ಯಾಪ್ ಅಥವಾ ಸ್ಕೀಟ್ ವೈಯಕ್ತಿಕ ವಿಭಾಗದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಶೂಟರ್ ಎಂಬ ಐತಿಹಾಸಿಕ ಸಾಧನೆಯನ್ನು ನೀರು ಮಾಡಿದ್ದಾರೆ.
ಇದು ಒಂದೇ ದಿನದಲ್ಲಿ ನೀರು ಗೆದ್ದ ಎರಡನೇ ಪದಕವಾಗಿದೆ. ಇದಕ್ಕೂ ಮುನ್ನ ಮಹಿಳೆಯರ ಟ್ರ್ಯಾಪ್ ತಂಡ ಸ್ಪರ್ಧೆಯಲ್ಲಿ ನೀರು, ಆಶಿಮಾ ಅಹ್ಲಾವತ್ ಹಾಗೂ ಮನೀಷಾ ಕೀರ್ ಅವರ ತಂಡ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟಿತ್ತು.
ತಂಡ ಸ್ಪರ್ಧೆಯಲ್ಲಿ ನೀರು 118, ಆಶಿಮಾ 106 ಹಾಗೂ ಮನೀಷಾ 104 ಅಂಕ ಗಳಿಸಿದ್ದು, ಮೂವರ ಒಟ್ಟು 328 ಅಂಕಗಳೊಂದಿಗೆ ಭಾರತ ಎರಡನೇ ಸ್ಥಾನ ಪಡೆದಿತ್ತು. 346 ಅಂಕಗಳೊಂದಿಗೆ ಚೀನಾ ಚಿನ್ನದ ಪದಕ ಗೆದ್ದಿತ್ತು.






