12 ವರ್ಷಗಳ ಬಳಿಕ ಭಾರತಕ್ಕೆ ʼಚಾಂಪಿಯನ್ಸ್ʼ ಮುಕುಟ
ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಅಜೇಯ ಓಟ

Photo : x/@ICC
ದುಬೈ: ಇಲ್ಲಿನ ದುಬೈ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ರವಿವಾರ ಭಾರತ ನ್ಯೂಝಿಲ್ಯಾಂಡ್ ನಡುವೆ ನಡೆದ ಚಾಂಪಿಯನ್ಸ್ ಟ್ರೋಫಿಯ ರೋಚಕ ಫೈನಲ್ ಪಂದ್ಯದಲ್ಲಿ, ಭಾರತವು ನ್ಯೂಝಿಲ್ಯಾಂಡ್ ತಂಡವನ್ನು ಸೋಲಿಸಿ 12 ವರ್ಷಗಳ ಬಳಿಕ ಮತ್ತೆ ಚಾಂಪಿಯನ್ಸ್ ಟ್ರೋಫಿಗೆ ಮುತ್ತಿಕ್ಕಿದೆ.
ನಾಯಕ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಶತಕದ ಜೊತೆಯಾಟ ಹಾಗೂ ಕುಲದೀಪ್ ಯಾದವ್(2-40) ನೇತೃತ್ವದ ಬೌಲರ್ಗಳ ಶಿಸ್ತುಬದ್ಧ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ಕ್ರಿಕೆಟ್ ತಂಡವು ನ್ಯೂಝಿಲ್ಯಾಂಡ್ ತಂಡವನ್ನು 4 ವಿಕೆಟ್ಗಳ ಅಂತರದಿಂದ ಮಣಿಸಿ ಮೂರನೇ ಬಾರಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
ಪಂದ್ಯದಲ್ಲಿ ಗೆಲ್ಲಲು 252 ರನ್ ಗುರಿ ಬೆನ್ನಟ್ಟಿದ ಭಾರತ 49 ಓವರ್ಗಳಲ್ಲಿ 6 ವಿಕೆಟ್ಗಳ ನಷ್ಟಕ್ಕೆ 254 ರನ್ ಗಳಿಸಿತು. ಕೆ.ಎಲ್.ರಾಹುಲ್(ಔಟಾಗದೆ 34, 33 ಎಸೆತ, 1 ಬೌಂಡರಿ, 1 ಸಿಕ್ಸರ್)ಹಾಗೂ ರವೀಂದ್ರ ಜಡೇಜ(ಔಟಾಗದೆ 9) ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ತಂಡಕ್ಕೆ ಗೆಲುವು ತಂದುಕೊಟ್ಟರು.
ಈ ಹಿಂದೆ 2002 ಹಾಗೂ 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಜಯಿಸಿದ್ದ ಭಾರತ ತಂಡವು ಇದೀಗ 3ನೇ ಬಾರಿ ಪ್ರಶಸ್ತಿಗೆ ಮುತ್ತಿಕ್ಕಿದೆ.
►17 ರನ್ಗೆ 3 ವಿಕೆಟ್ ಪತನ:
ಶುಭಮನ್ ಗಿಲ್, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ವಿಕೆಟ್ಗಳನ್ನು ಪಡೆದ ನ್ಯೂಝಿಲ್ಯಾಂಡ್ ಸ್ಪಿನ್ನರ್ಗಳು ಭಾರತದ ಉತ್ತಮ ಆರಂಭಕ್ಕೆ ತಡೆಯೊಡ್ಡಿದರು.
ಗೆಲ್ಲಲು 252 ರನ್ ಚೇಸಿಂಗ್ಗೆ ತೊಡಗಿದ್ದ ಭಾರತ ತಂಡಕ್ಕೆ ನಾಯಕ ರೋಹಿತ್ ಶರ್ಮಾ(76 ರನ್, 83 ಎಸೆತ, 7 ಬೌಂಡರಿ, 3 ಸಿಕ್ಸರ್)ಹಾಗೂ ಗಿಲ್(31 ರನ್, 50 ಎಸೆತ, 1 ಸಿಕ್ಸರ್)ಮೊದಲ ವಿಕೆಟ್ಗೆ 105 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಮೊದಲ ವಿಕೆಟ್ನಲ್ಲಿ ದಾಖಲಾದ 3ನೇ ಶತಕದ ಜೊತೆಯಾಟ ಇದಾಗಿದೆ.
ನ್ಯೂಝಿಲ್ಯಾಂಡ್ ನಾಯಕ ಸ್ಯಾಂಟ್ನರ್ 19ನೇ ಓವರ್ನಲ್ಲಿ ಗಿಲ್ ವಿಕೆಟನ್ನು ಪಡೆದು ಮೊದಲ ಮೇಲುಗೈ ಒದಗಿಸಿದರು. ಗ್ಲೆನ್ ಫಿಲಿಪ್ಸ್ ಒಂದೇ ಕೈಯಲ್ಲಿ ಅದ್ಭುತ ಕ್ಯಾಚ್ ಪಡೆದು ಗಿಲ್ರನ್ನು ಪೆವಿಲಿಯನ್ಗೆ ಕಳುಹಿಸಿದರು.
ಮುಂದಿನ ಓವರ್ನಲ್ಲಿ ಮೈಕಲ್ ಬ್ರೆಸ್ವೆಲ್ ಅವರು ವಿರಾಟ್ ಕೊಹ್ಲಿ(1) ಅವರನ್ನು ಎಲ್ಬಿಡಬ್ಲ್ಯು ಬಲೆಗೆ ಬೀಳಿಸಿದರು.
ರಚಿನ್ ರವೀಂದ್ರ 27ನೇ ಓವರ್ನಲ್ಲಿ ಭಾರತದ ನಾಯಕ ರೋಹಿತ್ ಇನಿಂಗ್ಸ್ಗೆ ತೆರೆ ಎಳೆದರು. ರೋಹಿತ್ ಅವರು ರವೀಂದ್ರ ಬೌಲಿಂಗ್ನಲ್ಲಿ ಮುನ್ನುಗ್ಗಲು ಆಡಲು ಹೋಗಿ ಸ್ಟಂಪ್ ಔಟಾದರು.
18.3 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 105 ರನ್ ಗಳಿಸಿದ್ದ ಭಾರತವು 26.1 ಓವರ್ಗಳಲ್ಲಿ 122 ರನ್ಗೆ 3 ವಿಕೆಟ್ ಕಳೆದುಕೊಂಡು ನ್ಯೂಝಿಲ್ಯಾಂಡ್ ಮರು ಹೋರಾಡಲು ಅವಕಾಶ ನೀಡಿತು.
ಆಗ 4ನೇ ವಿಕೆಟ್ಗೆ 61 ರನ್ ಜೊತೆಯಾಟ ನಡೆಸಿದ ಶ್ರೇಯಸ್ ಅಯ್ಯರ್(48 ರನ್, 62 ಎಸೆತ)ಹಾಗೂ ಅಕ್ಷರ್ ಪಟೇಲ್(29 ರನ್, 40 ಎಸೆತ)ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಹಾರ್ದಿಕ್ ಪಾಂಡ್ಯ 18 ರನ್ ಗಳಿಸಿ ಔಟಾದರು. ರಾಹುಲ್ ಹಾಗೂ ಜಡೇಜ ತಂಡವನ್ನು ಗೆಲುವಿನ ದಡ ಸೇರಿಸಿದರು.
ನ್ಯೂಝಿಲ್ಯಾಂಡ್ ಪರ ಬ್ರೆಸ್ವೆಲ್(2-28) ಹಾಗೂ ಸ್ಯಾಂಟ್ನರ್(2-46) ತಲಾ ಎರಡು ವಿಕೆಟ್ಗಳನ್ನು ಪಡೆದರು.
ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಮೊದಲ ವಿಕೆಟ್ನಲ್ಲಿ ಗರಿಷ್ಠ ವಿಕೆಟ್ ಜೊತೆಯಾಟ (105 ರನ್) ನಡೆಸಿದ ಭಾರತದ 2ನೇ ಆರಂಭಿಕ ಜೋಡಿಯಾಗಿದೆ. 2000ರಲ್ಲಿ ನೈರೋಬಿಯಲ್ಲಿ ನ್ಯೂಝಿಲ್ಯಾಂಡ್ ವಿರುದ್ಧದ ಫೈನಲ್ನಲ್ಲಿ ಸೌರವ್ ಗಂಗುಲಿ ಹಾಗೂ ಸಚಿನ್ ತೆಂಡುಲ್ಕರ್ ಮೊದಲ ವಿಕೆಟ್ಗೆ 141 ರನ್ ಜೊತೆಯಾಟ ನಡೆಸಿದ್ದರು.
ಐಸಿಸಿ ನಾಕೌಟ್ ಪಂದ್ಯದಲ್ಲಿ(ವಿಶ್ವಕಪ್ ಅಥವಾ ಚಾಂಪಿಯನ್ಸ್ ಟ್ರೋಫಿ)ಉಭಯ ತಂಡಗಳು ಮೊದಲ ವಿಕೆಟ್ಗೆ 50ಕ್ಕೂ ಅಧಿಕ ರನ್ ಗಳಿಸಿದ್ದು ಇದು ಎರಡನೇ ದೃಷ್ಟಾಂತ. ಸರಿಯಾಗಿ 29 ವರ್ಷಗಳ ಹಿಂದೆ 1996ರ ಮಾ.9ರಂದು ಬೆಂಗಳೂರಿನಲ್ಲಿ ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ನಡೆದಿದ್ದ ವಿಶ್ವಕಪ್ ಸೆಮಿ ಫೈನಲ್ನಲ್ಲಿ ಮೊದಲ ಬಾರಿ ಈ ರೀತಿ ಆಗಿತ್ತು.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಇದು ಎರಡನೇ ದೃಷ್ಟಾಂತವಾಗಿದೆ. 2009ರಲ್ಲಿ ಜೋಹಾನ್ಸ್ಬರ್ಗ್ನಲ್ಲಿ ನ್ಯೂಝಿಲ್ಯಾಂಡ್ ಹಾಗೂ ಶ್ರೀಲಂಕಾ ನಡುವಿನ ಪಂದ್ಯದಲ್ಲಿ ಮೊದಲ ಬಾರಿ ಈ ದೃಷ್ಟಾಂತ ಕಂಡುಬಂದಿತ್ತು.







