ಚಾಂಪಿಯನ್ಸ್ ಟ್ರೋಫಿ ಹೊಸ ವಿವಾದ | ಪಾಕಿಸ್ತಾನದ ಹೆಸರಿರುವ ಜೆರ್ಸಿ ಧರಿಸಲು ಟೀಂ ಇಂಡಿಯಾ ವಿರೋಧ; ವರದಿ

ರೋಹಿತ್ ಶರ್ಮಾ (PTI)
ಮುಂಬೈ: ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ಬಗ್ಗೆ ಹೊಸ ವಿವಾದ ಭುಗಿಲೆದ್ದಿದ್ದು, ಪಾಕಿಸ್ತಾನದ ಹೆಸರು ಇರುವ ಜೆರ್ಸಿ ಧರಿಸುವುದನ್ನು ಟೀಂ ಇಂಡಿಯಾ ಬಯಸುತ್ತಿಲ್ಲ ಎಂದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ ಎಂದು The Times Of India ವರದಿ ಮಾಡಿದೆ.
ಫೆಬ್ರವರಿ ಮತ್ತು ಮಾರ್ಚ್ ನಲ್ಲಿ ಪಾಕಿಸ್ತಾನ ಮತ್ತು ಯುಎಇಯಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ನಡೆಯಲಿದೆ. ಟೀಂ ಇಂಡಿಯಾ ಆಟಗಾರರು ಆತಿಥೇಯ ರಾಷ್ಟ್ರವಾದ ಪಾಕಿಸ್ತಾನದ ಹೆಸರಿನ ಜೆರ್ಸಿ ಧರಿಸುವುದನ್ನು ಬಯಸುವುದಿಲ್ಲ ಎಂದು ವರದಿಯಾಗಿದೆ.
ಚಾಂಪಿಯನ್ಸ್ ಟ್ರೋಫಿಯ ಸಂಪೂರ್ಣ ಆತಿಥ್ಯವನ್ನು ವಹಿಸುವ ಅವಕಾಶವನ್ನು ಪಾಕಿಸ್ತಾನ ಹೊಂದಿತ್ತು. ಇದಲ್ಲದೆ ಪತ್ರಿಕಾಗೋಷ್ಠಿ ಮತ್ತು ಫೋಟೋ ಶೂಟ್ ಕೂಡಾ ಪಾಕಿಸ್ತಾನದಲ್ಲಿ ನಡೆಯಲಿದೆ. ಆದರೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಪತ್ರಿಕಾಗೋಷ್ಠಿ ಮತ್ತು ಫೋಟೋ ಶೂಟ್ ಗೆ ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಬಿಸಿಸಿಐ ದೃಢಪಡಿಸಿದೆ.
ಟೂರ್ನಿಗಳನ್ನು ಪಾಕಿಸ್ತಾನದಿಂದ ದುಬೈಗೆ ಸ್ಥಳಾಂತರಿಸುವಂತೆ ಮಂಡಳಿಯು ಐಸಿಸಿಯನ್ನು ಕೋರಿತ್ತು. ಪಾಕಿಸ್ತಾನದಲ್ಲಿ ಟೀಂ ಇಂಡಿಯಾಗೆ ಪಂದ್ಯಗಳನ್ನು ನಿಗದಿಪಡಿಸದಂತೆ ಭಾರತದ ಮನವಿಯನ್ನು ಐಸಿಸಿ ಈಗಾಗಲೇ ಒಪ್ಪಿಕೊಂಡಿದೆ. ಬಿಸಿಸಿಐ ನಿರ್ಧಾರದಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತೀವ್ರ ಅಸಮಾಧಾನಗೊಂಡಿದ್ದು, ಐಸಿಸಿ ಮಧ್ಯಪ್ರವೇಶಿಸುವಂತೆ ಆಗ್ರಹಿಸಿದೆ. ಬಿಸಿಸಿಐ ಕ್ರಿಕೆಟ್ ನಲ್ಲಿ ರಾಜಕೀಯವನ್ನು ತರುತ್ತಿದೆ, ಇದು ಆಟಕ್ಕೆ ಒಳ್ಳೆಯದಲ್ಲ. ಅವರು ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದರು. ಉದ್ಘಾಟನಾ ಸಮಾರಂಭಕ್ಕೆ ಟೀಂ ಇಂಡಿಯಾ ನಾಯಕನನ್ನು ಕಳುಹಿಸಲು ಅವರು ಬಯಸುವುದಿಲ್ಲ. ಈಗ ಅವರು ತಮ್ಮ ಜೆರ್ಸಿಯ ಮೇಲೆ ಆತಿಥೇಯ ರಾಷ್ಟ್ರದ (ಪಾಕಿಸ್ತಾನ) ಹೆಸರನ್ನು ಮುದ್ರಿಸಲು ಬಯಸುವುದಿಲ್ಲ ಎಂಬ ವರದಿಗಳಿವೆ. ಐಸಿಸಿ ಇದಕ್ಕೆ ಅವಕಾಶ ನೀಡದು ಎಂದು ನಾವು ನಂಬುತ್ತೇವೆ ಎಂದು ಪಿಸಿಬಿ ಮೂಲಗಳು ತಿಳಿಸಿರುವ ಬಗ್ಗೆ The Times Of India ವರದಿ ಮಾಡಿದೆ.







