ಐಎಸ್ಎಸ್ಎಫ್ ಜೂನಿಯರ್ ವಿಶ್ವಕಪ್ : ಮಹಿಳೆಯರ 50ಮೀ. ರೈಫಲ್ ಪ್ರೋನ್ ಸ್ಪರ್ಧೆಯಲ್ಲಿ ಕ್ಲೀನ್ಸ್ವೀಪ್ ಸಾಧಿಸಿದ ಭಾರತ

Photo : X/@OfficialNRAI
ಹೊಸದಿಲ್ಲಿ, ಸೆ.25: ಮಹಿಳೆಯರ 50ಮೀ. ರೈಫಲ್ ಪ್ರೋನ್ ಸ್ಪರ್ಧೆಯಲ್ಲಿ ಎಲ್ಲ 3 ಪದಕಗಳನ್ನು ಜಯಿಸಿ ಕ್ಲೀನ್ಸ್ವೀಪ್ ಸಾಧಿಸಿದ ಭಾರತ ತಂಡವು ಐಎಸ್ಎಸ್ಎಫ್ ಜೂನಿಯರ್ ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಆರಂಭ ಪಡೆದಿದೆ.
ಗುರುವಾರ ಡಾ.ಕರ್ಣಿ ಸಿಂಗ್ ಶೂಟಂಗ್ ರೇಂಜ್ನಲ್ಲಿ ಮೊದಲ ದಿನದ ಸ್ಪರ್ಧೆಯಲ್ಲಿ ಪುರುಷರ ಸ್ಪರ್ಧೆಯಲ್ಲೂ ಭಾರತವು 2 ಪದಕಗಳನ್ನು ಗೆದ್ದುಕೊಂಡಿದೆ. ಈ ಮೂಲಕ ಭಾರತವು ಒಂದೇ ದಿನ 50 ಮೀ.ರೈಫಲ್ ಪ್ರೋನ್ ಸ್ಪರ್ಧೆಯ ಮಹಿಳೆಯರ ಹಾಗೂ ಪುರುಷರ ವಿಭಾಗದಲ್ಲಿ 6 ಪದಕಗಳ ಪೈಕಿ 5 ಪದಕಗಳನ್ನು ಗೆದ್ದಿದೆ.
ಕಝಕ್ಸ್ತಾನದಲ್ಲಿ ನಡೆದ ಏಶ್ಯನ್ ಚಾಂಪಿಯನ್ಶಿಪ್ನಲ್ಲಿ 50 ಮೀ. ರೈಫಲ್3 ಪೊಸಿಶನ್ಸ್ನಲ್ಲಿ
ಜೂನಿಯರ್ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದ ಅನುಷ್ಕಾ ಥೋಕುರ್ ತನ್ನ ಶ್ರೇಷ್ಠ ಪ್ರದರ್ಶನ ಮುಂದುವರಿಸಿ 621.6 ಅಂಕ ಗಳಿಸಿ ಮೊದಲ ಸ್ಥಾನ ಪಡೆದರು.
18ರ ವಯಸ್ಸಿನ ಆಶಿಕಾ ಅವರು 619.2 ಅಂಕ ಗಳಿಸಿ ಬೆಳ್ಳಿ ಜಯಿಸಿದರೆ, 20ರ ವಯಸ್ಸಿನ ಆಧ್ಯಾ ಅಗರ್ವಾಲ್ 615.9 ಅಂಕ ಗಳಿಸಿ ಕಂಚಿನ ಪದಕ ಗೆದ್ದುಕೊಂಡರು.
2025ರ ಆವೃತ್ತಿಯ ಐಎಸ್ಎಸ್ಎಫ್ ಜೂನಿಯರ್ ವಿಶ್ವಕಪ್ನಲ್ಲಿ 208 ಯುವ ಶೂಟರ್ಗಳು ಭಾಗವಹಿಸಿದ್ದಾರೆ.
ಪುರುಷರ 50 ಮೀ. ರೈಫಲ್ ಪ್ರೋನ್ ಸ್ಪರ್ಧೆಯಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕವನ್ನು ಜಯಿಸಿರುವ ದೀಪೇಂದ್ರ ಸಿಂಗ್ ಹಾಗೂ ರೋಹಿತ್ ಕನ್ಯನ್ ತಮ್ಮ ಮೊದಲ ಅಂತಾರಾಷ್ಟ್ರೀಯ ಪದಕಗಳನ್ನು ತನ್ನದಾಗಿಸಿಕೊಂಡರು. ಏಶ್ಯನ್ ಚಾಂಪಿಯನ್ಶಿಪ್ನಲ್ಲೂ ಸ್ಪರ್ಧಿಸಿದ್ದ ದೀಪೇಂದ್ರ ಅವರು ಇಂದು 617.9 ಹಾಗೂ ರೋಹಿತ್ 616.3 ಅಂಕ ಗಳಿಸಿದ್ದರು.
ನೂರಿಯಾಖ್ಮೆಟೋವ್(618.9 ಅಂಕ)ಅವರು ದೀಪೇಂದ್ರ ಅವರನ್ನು 1 ಪಾಯಿಂಟ್ನಿಂದ ಸೋಲಿಸಿ ಚಿನ್ನ ಗೆದ್ದರು.
ಕಝಕ್ಸ್ತಾನದಲ್ಲಿ ಕಂಚಿನ ಪದಕ ಜಯಿಸಿದ್ದ ನಿತಿನ್ ವಾಗ್ಮೋರೆ(615.6) ಐದನೇ ಸ್ಥಾನ ಪಡೆದರೆ, ಕುಶಾಗ್ರ ಸಿಂಗ್(611.6) ಹಾಗೂ ಕುನಾಲ್ ಶರ್ಮಾ(590.9)ಕ್ರಮವಾಗಿ 8ನೇ ಹಾಗೂ 11ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.
ಶುಕ್ರವಾರ ಪುರುಷರ ಹಾಗೂ ಮಹಿಳೆಯರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಗಳು ಆರಂಭವಾಗಲಿದ್ದು, ಇವೆರಡೂ ಒಲಿಂಪಿಕ್ಸ್ನಲ್ಲಿ ಒಳಗೊಂಡಿದೆ.







