ನಾಳೆ ಭಾರತ-ಇಂಗ್ಲೆಂಡ್ ಮೊದಲ ಏಕದಿನ ಪಂದ್ಯ
ಪ್ರಮುಖ ಆಟಗಾರರ ಫಾರ್ಮ್, ದೈಹಿಕ ಕ್ಷಮತೆಯೇ ಆತಿಥೇಯರ ಕಳವಳ

ನಾಗಪುರ: ಭಾರತದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಸಿದ್ಧತೆಯ ಅಂತಿಮ ಹಂತ ಎಂಬುದಾಗಿ ಪರಿಗಣಿಸಲಾಗಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯ ಗುರುವಾರ ನಾಗಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಮ್ ನಲ್ಲಿ ನಡೆಯಲಿದೆ.
ಅನುಭವಿ ತಾರೆಗಳ ಫಾರ್ಮ್ ಮತ್ತು ದೈಹಿಕ ಕ್ಷಮತೆ ಭಾರತೀಯ ತಂಡದ ಪ್ರಮುಖ ಕಳವಳವಾಗಿದೆ. ಕೆಲವು ನಿರ್ದಿಷ್ಟ ಕ್ರಮಾಂಕಗಳಿಗೆ ಸರಿಯಾದ ಸಾಮರ್ಥ್ಯಗಳುಳ್ಳ ಆಟಗಾರರನ್ನು ನಿಯೋಜಿಸುವುದು ಭಾರತೀಯ ತಂಡದ ಮುಂದಿರುವ ಸವಾಲಾಗಿದೆ. ಟೆಸ್ಟ್ ಸರಣಿಯಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿರುವ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಉತ್ತಮ ನಿರ್ವಹಣೆ ನೀಡಬೇಕಾದ ಅಗಾಧ ಒತ್ತಡದಲ್ಲಿದ್ದಾರೆ ಮತ್ತು ಅವರ ನಿರ್ವಹಣೆಯ ಮೇಲೆ ತೀವ್ರ ನಿಗಾ ಇಡಲಾಗಿದೆ.
ಈ ಇಬ್ಬರು ತಾರಾ ಆಟಗಾರರು ಇತ್ತೀಚೆಗೆ ರಣಜಿ ಪಂದ್ಯಗಳಲ್ಲಿ ಆಡಿರುವರಾದರೂ ನಿರಾಶಾದಾಯಕ ಪ್ರದರ್ಶನವನ್ನೇ ನೀಡಿದರು. ಹಾಗಾಗಿ, ಹಲವು ವರ್ಷಗಳಿಂದ ಪ್ರಾಬಲ್ಯ ಸಾಧಿಸಿಕೊಂಡು ಬಂದಿರುವ ಈ ಮಾದರಿಯ ಕ್ರಿಕೆಟ್ನಲ್ಲಿ ಮತ್ತೊಮ್ಮೆ ಪ್ರಬಲ ನಿರ್ವಹಣೆ ನೀಡುವುದನ್ನು ಅವರು ಎದುರು ನೋಡುತ್ತಿದ್ದಾರೆ.
2023ರ ಏಕದಿನ ವಿಶ್ವಕಪ್ನಲ್ಲಿ ಕೊಹ್ಲಿ ಮತ್ತು ರೋಹಿತ್ ಗರಿಷ್ಠ ರನ್ ಗಳಿಕೆದಾರರಾಗಿದ್ದಾರೆ. ಕೊಹ್ಲಿ 765 ರನ್ಗಳನ್ನು ಸಿಡಿಸಿದ್ದರೆ, ರೋಹಿತ್ 597 ರನ್ಗಳನ್ನು ಗಳಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯು, ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಮುನ್ನ ಭಾರತದ ಏಕೈಕ ಸಿದ್ಧತಾ ಪಂದ್ಯಾವಳಿಯಾಗಿದೆ. ಚಾಂಪಿಯನ್ಸ್ ಟ್ರೋಫಿಯು ಫೆಬ್ರವರಿ 19ರಿಂದ ಪಾಕಿಸ್ತಾನ ಮತ್ತು ದುಬೈಯಲ್ಲಿ ನಡೆಯಲಿದೆ.
► ವಿಕೆಟ್ಕೀಪರ್ ಯಾರು?
ವಿಕೆಟ್ಕೀಪರ್ ಸ್ಥಾನವೂ ಚರ್ಚೆಯ ವಿಷಯವಾಗಿದೆ. ಕೆ.ಎಲ್. ರಾಹುಲ್ ಮತ್ತು ರಿಶಭ್ ಪಂತ್- ಈ ಇಬ್ಬರ ಪೈಕಿ ಆಡುವ ಹನ್ನೊಂದರ ಬಳಗದಲ್ಲಿ ಯಾರು ಸ್ಥಾನ ಪಡೆಯುತ್ತಾರೆ ಎನ್ನುವುದು ಕುತೂಹಲದ ವಿಷಯವಾಗಿದೆ. 2023ರ ವಿಶ್ವಕಪ್ನಲ್ಲಿ ಪಂತ್ರ ಅನುಪಸ್ಥಿತಿಯಲ್ಲಿ ವಿಕೆಟ್ಕೀಪಿಂಗ್ ಮಾಡಿದ್ದ ರಾಹುಲ್ ಉತ್ತಮ ನಿರ್ವಹಣೆ ನೀಡಿದ್ದರು. 452 ರನ್ಗಳನ್ನು ಗಳಿಸಿದ್ದ ಅವರು, ಭಾರತದ ಅತ್ಯಂತ ಸ್ಥಿರ ನಿರ್ವಹಣೆಯ ಮಧ್ಯಮ ಸರದಿಯ ಬ್ಯಾಟರ್ಗಳ ಪೈಕಿ ಒಬ್ಬರಾಗಿದ್ದರು. ಆದರೆ, ಮಧ್ಯಮ ಓವರ್ಗಳಲ್ಲಿ ಅವರ ಸ್ಟ್ರೈಕ್ ಬದಲಾವಣೆ ಕಳವಳದ ವಿಷಯವಾಗಿದೆ.
ಅದೇ ವೇಳೆ, ಎಡಗೈ ದಾಂಡಿಗ ಪಂತ್, ಭಾರತದ ಬಲಗೈ ಆಟಗಾರರೇ ತುಂಬಿರುವ ಅಗ್ರ ಕ್ರಮಾಂಕಕ್ಕೆ ಕೊಂಚ ವೈವಿಧ್ಯತೆಯನ್ನು ನೀಡುತ್ತಾರೆ.
►ಶಮಿ, ಕುಲದೀಪ್ ಲಭ್ಯರೇ?
ಹಿರಿಯ ವೇಗಿ ಮುಹಮ್ಮದ್ ಶಮಿ ಮತ್ತು ಸ್ಪಿನ್ನರ್ ಕುಲದೀಪ್ ಯಾದವ್ರ ಲಭ್ಯತೆಯೂ ಈ ಸರಣಿಯಲ್ಲಿ ನಿರ್ಧಾರವಾಗಲಿದೆ. ಅವರಿಬ್ಬರೂ ಗಾಯದ ಸಮಸ್ಯೆಗಳಿಂದಾಗಿ ಇತ್ತೀಚಿನ ದಿನಗಳಲ್ಲಿ ತಂಡದಿಂದ ಹೊರಗಿದ್ದಾರೆ. ಅವರ ದೈಹಿಕ ಕ್ಷಮತೆಯು ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಯಶಸ್ಸಿಗೆ ಮುಖ್ಯವಾಗಿದೆ.
ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ವೇಗಿ ಜಸ್ಪ್ರೀತ್ ಬುಮ್ರಾ ಈ ಸರಣಿಯಿಂದ ಹೊರಗಿದ್ದಾರೆ. ಫಾರ್ಮ್ನಲ್ಲಿರುವ ‘‘ಮಾಯಾ’’ ಸ್ಪಿನ್ನರ್ ವರುಣ್ ಚಕ್ರವರ್ತಿ ತನ್ನ ಚೊಚ್ಚಲ ಏಕದಿನ ಅಂತರರಾಷ್ಟ್ರೀಯ ಪಂದ್ಯವನ್ನು ಆಡುವ ನಿರೀಕ್ಷೆಯಿದೆ. ಅವರು ಟಿ20 ಪಂದ್ಯಗಳಲ್ಲಿ ಇಂಗ್ಲೆಂಡ್ ಬ್ಯಾಟರ್ಗಳನ್ನು ಕಾಡಿದ್ದರು. ಅದಕ್ಕೂ ಮೊದಲು, ಕಳೆದ ವರ್ಷದ ಅಕ್ಟೋಬರ್ನಲ್ಲಿ ಭಾರತದಲ್ಲಿ ನಡೆದ ಟಿ20 ಪಂದ್ಯಗಳಲ್ಲಿ ಬಾಂಗ್ಲಾದೇಶದ ಬ್ಯಾಟರ್ಗಳನ್ನು ಗೊಂದಲಕ್ಕೆ ಸಿಲುಕಿಸಿದ್ದರು.
ಸ್ಪಿನ್ ಆಲ್ರೌಂಡರ್ಗಳ ಸ್ಥಾನಕ್ಕೆ ಆಟಗಾರರನ್ನು ಆಯ್ಕೆ ಮಾಡುವಾಗಲೂ ಆಯ್ಕೆಗಾರರು ಕಠಿಣ ಸವಾಲನ್ನು ಎದುರಿಸುತ್ತಿದ್ದಾರೆ. ರವೀಂದ್ರ ಜಡೇಜ, ಅಕ್ಷರ್ ಪಟೇಲ್ ಮತ್ತು ವಾಶಿಂಗ್ಟನ್ ಸುಂದರ್ ಸ್ಪರ್ಧೆಯಲ್ಲಿದ್ದಾರೆ.
► ಇಂಗ್ಲೆಂಡ್ಗೆ ಪ್ರಬಲ ಸವಾಲು ನೀಡಲು ಸಾಧ್ಯವಾಗುವುದೇ?
ಇನ್ನೊಂದೆಡೆ, ತನ್ನ ಲೋಪದೋಷಗಳನ್ನು ಸರಿಪಡಿಸಿಕೊಂಡು ಭಾರತಕ್ಕೆ ಪ್ರಬಲ ಸವಾಲೊಡ್ಡುವುದನ್ನು ಪ್ರವಾಸಿ ಇಂಗ್ಲೆಂಡ್ ತಂಡ ಎದುರು ನೋಡುತ್ತಿದೆ. ಆದರೆ, ಅದು ಅಷ್ಟು ಸುಲಭವಿಲ್ಲ ಎಂಬಂತೆ ಕಾಣುತ್ತದೆ. ಯಾಕೆಂದರೆ ಇಂಗ್ಲೆಂಡ್ ಬೆನ್ನು ಬೆನ್ನಿಗೆ ಆಸ್ಟ್ರೇಲಿಯ (ಸೆಪ್ಟಂಬರ್ನಲ್ಲಿ) ಮತ್ತು ವೆಸ್ಟ್ ಇಂಡಿಸ್ (ನವೆಂಬರ್ನಲ್ಲಿ) ವಿರುದ್ಧದ 50 ಓವರ್ಗಳ ಸರಣಿಗಳಲ್ಲಿ ಸೋಲನುಭವಿಸಿದೆ.
ಅದರ ಬ್ಯಾಟಿಂಗ್ ಸರದಿಗೆ ಸೇರ್ಪಡೆಯಾಗಿರುವ ಏಕೈಕ ಆಟಗಾರನೆಂದರೆ ಜೋ ರೂಟ್. ಉಳಿದಂತೆ ಟಿ20 ಸರಣಿಯಲ್ಲಿ ಪರದಾಡಿದ ಬ್ಯಾಟರ್ಗಳೇ ಏಕದಿನ ತಂಡದಲ್ಲೂ ಇದ್ದಾರೆ.
ಮೀನಖಂಡದ ಗಾಯದಿಂದ ಬಳಲುತ್ತಿರುವ ವಿಕೆಟ್ಕೀಪರ್ ಜೇಮೀ ಸ್ಮಿತ್ ಮೊದಲ ಎರಡು ಏಕದಿನ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆಯಿದೆ.
ತಂಡಗಳು
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್ (ವಿಕೆಟ್ಕೀಪರ್), ರಿಶಭ್ ಪಂತ್ (ವಿಕೆಟ್ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ವಾಶಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಹರ್ಷಿತ್ ರಾಣಾ, ಮುಹಮ್ಮದ್ ಶಮಿ, ಅರ್ಶದೀಪ್ ಸಿಂಗ್, ವರುಣ್ ಚಕ್ರವರ್ತಿ.
ಇಂಗ್ಲೆಂಡ್: ಜೋಸ್ ಬಟ್ಲರ್ (ನಾಯಕ), ಹ್ಯಾರಿ ಬ್ರೂಕ್, ಬೆನ್ ಡಕೆಟ್, ಜೋ ರೂಟ್, ಫಿಲಿಪ್ ಸಾಲ್ಟ್, ಜೇಮೀ ಸ್ಮಿತ್, ಜಾಕೋಬ್ ಬೆತೆಲ್, ಬ್ರೈಡನ್ ಕಾರ್ಸ್, ಲಿಯಮ್ ಲಿವಿಂಗ್ಸ್ಟೋನ್, ಜೇಮೀ ಓವರ್ಟನ್, ಜೋಪ್ರಾ ಆರ್ಚರ್, ಗಸ್ ಆ್ಯಟ್ಕಿನ್ಸನ್, ಸಾಕಿಬ್ ಮಹ್ಮೂದ್, ಆದಿಲ್ ರಶೀದ್ ಮತ್ತು ಮಾರ್ಕ್ ವುಡ್.
ಪಂದ್ಯ ಆರಂಭ: ಮಧ್ಯಾಹ್ನ 1:30