ಸತತ 13ನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತ ಭಾರತ
ಅಂತರ್ಜಾಲದಲ್ಲಿ ಹರಿದಾಡಿದ ಮೀಮ್ಸ್

PC : X
ಹೊಸದಿಲ್ಲಿ: ಟಾಸ್ ಪ್ರಕ್ರಿಯೆಯಲ್ಲಿ ಭಾರತ ಕ್ರಿಕೆಟ್ ತಂಡದ ದುರಾದೃಷ್ಟ ಮುಂದುವರಿದಿದ್ದು, ರವಿವಾರ ಅದು ಸತತ 13ನೇ ಬಾರಿ ಟಾಸ್ ಸೋತಿದೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ‘ಎ’ ಗುಂಪಿನಲ್ಲಿ ತನ್ನ ಕೊನೆಯ ಪಂದ್ಯವನ್ನು ಆಡಿದ ಭಾರತ ತಂಡವು ನ್ಯೂಝಿಲ್ಯಾಂಡ್ ತಂಡವನ್ನು ಎದುರಿಸಿದ್ದು, ಮತ್ತೊಮ್ಮೆ ಟಾಸ್ ಗೆಲ್ಲುವಲ್ಲಿ ವಿಫಲವಾಯಿತು.
ನ್ಯೂಝಿಲ್ಯಾಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್ ಟಾಸ್ ಜಯಿಸಿ ಮೊದಲು ಬೌಲಿಂಗ್ ಆಯ್ದುಕೊಂಡರು.
ಭಾರತ ತಂಡವು 2023ರಲ್ಲಿ ಮುಂಬೈನ ವಾಂಖೆಡೆ ಸ್ಟೇಡಿಯಮ್ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿ ಫೈನಲ್ ಪಂದ್ಯದಲ್ಲಿ ಕೊನೆಯ ಬಾರಿ ಟಾಸ್ ಜಯಿಸಿತ್ತು. ಆನಂತರ ನಾಯಕ ರೋಹಿತ್ ಸತತ 10 ಟಾಸ್ಗಳಲ್ಲಿ ಸೋತಿದ್ದರು. ಕೆ.ಎಲ್.ರಾಹುಲ್ ಕೂಡ ಮೂರು ಬಾರಿ ಟಾಸ್ ಸೋತಿದ್ದರು. ಪುರುಷರ ಏಕದಿನ ಕ್ರಿಕೆಟ್ನಲ್ಲಿ ಬ್ರಿಯಾನ್ ಲಾರಾ(1998 ಹಾಗೂ 1999ರಲ್ಲಿ 12) ಹಾಗೂ ಪೀಟರ್ ಬೊರ್ರೆನ್(2011 ಹಾಗೂ 2013ರ ನಡುವೆ 11)10ಕ್ಕಿಂತ ಹೆಚ್ಚು ಬಾರಿ ಟಾಸ್ ಸೋತ ಇನ್ನಿಬ್ಬರು ನಾಯಕರಾಗಿದ್ದಾರೆ.
ಅಭಿಮಾನಿಗಳು ಅಂತರ್ಜಾಲದಲ್ಲಿ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದು, ಭಾರತದ ದುರಾದೃಷ್ಟಕ್ಕೆ ಬೇಸರ ವ್ಯಕ್ತಪಡಿಸಿದರು.ಎಕ್ಸ್ನಂತಹ ವೇದಿಕೆಗಳಲ್ಲಿ ಮೀಮ್ಸ್ ಹಾಗೂ ಹಾಸ್ಯದ ಮಹಾಪೂರವೇ ಹರಿದು ಬಂದಿದೆ. ನಾಯಕ ರೋಹಿತ್ ಶರ್ಮಾಗೆ ಟೂರ್ನಿಯ ನಾಕೌಟ್ ಹಂತದಲ್ಲಿ ಟಾಸ್ನಲ್ಲಿ ಅದೃಷ್ಟ ಲಭಿಸಲಿ ಎಂದು ಕೆಲವರು ಹಾರೈಸಿದರೆ, ಇನ್ನು ಕೆಲವರು ಕಹಿಯನ್ನು ನಗುವಿನೊಂದಿಗೆ ನುಂಗಿದರು.
ಇಂದು ಭಾರತ ತಂಡವು ಟಾಸ್ ಸೋತಿದ್ದರೂ ಬ್ಯಾಟಿಂಗ್ ಸರದಿಯಲ್ಲಿ ಒಂದು ಬದಲಾವಣೆ ಮಾಡಿದೆ. ಹರ್ಷಿತ್ ರಾಣಾಗೆ ವಿಶ್ರಾಂತಿ ನೀಡಿ ಸ್ಪಿನ್ನರ್ ವರುಣ್ ಚಕ್ರವರ್ತಿಗೆ ಅವಕಾಶ ನೀಡಿದೆ.
ಇದೇ ವೇಳೆ ನ್ಯೂಝಿಲ್ಯಾಂಡ್ ತಂಡ ಕೂಡ ಒಂದು ಬದಲಾವಣೆ ಮಾಡಿದ್ದು, ಡೆವೊನ್ ಕಾನ್ವೆ ಬದಲಿಗೆ ಡ್ಯಾರಿಲ್ ಮಿಚೆಲ್ ಆಯ್ಕೆಯಾಗಿದ್ದಾರೆ.







