ಭಾರತ-ನ್ಯೂಝಿಲ್ಯಾಂಡ್ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ನಿರ್ಧರಿಸಲಿರುವ ಐದು ಅಂಶಗಳು

ಹೊಸದಿಲ್ಲಿ: ಭಾರತ ಹಾಗೂ ನ್ಯೂಝಿಲ್ಯಾಂಡ್ ಕ್ರಿಕೆಟ್ ತಂಡಗಳು ರವಿವಾರ ದುಬೈನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದು, ಈ ಪಂದ್ಯವು 8 ದೇಶಗಳು ಭಾಗವಹಿಸಿರುವ ಏಕದಿನ ಪಂದ್ಯಾವಳಿಯ ವಿಜೇತರನ್ನು ನಿರ್ಧರಿಸಲಿದೆ.
ಪ್ರಶಸ್ತಿ ವಿಜೇತರನ್ನು ನಿರ್ಧರಿಸಲಿರುವ ಪ್ರಮುಖ ಐದು ಅಂಶಗಳನ್ನು ಎಎಫ್‌ಪಿ ಸುದ್ದಿಸಂಸ್ಥೆ ಪಟ್ಟಿ ಮಾಡಿದ್ದು, ಅವುಗಳು ಇಂತಿವೆ..
ಮ್ಯಾಚ್ ಹೆನ್ರಿ ಆರಂಭಿಕ ಬೌಲಿಂಗ್:
ನ್ಯೂಝಿಲ್ಯಾಂಡ್‌ನ ವೇಗದ ಬೌಲರ್ ಮ್ಯಾಚ್ ಹೆನ್ರಿ ಪ್ರಸಕ್ತ 50 ಓವರ್ ಪಂದ್ಯಾವಳಿಯಲ್ಲಿ ಒಟ್ಟು 10 ವಿಕೆಟ್‌ಗಳನ್ನು ಉರುಳಿಸಿ ಉತ್ತಮ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಭಾರತ ವಿರುದ್ಧದ ಗ್ರೂಪ್ ಪಂದ್ಯದಲ್ಲಿ ಹೆನ್ರಿ ಒಟ್ಟು 5 ವಿಕೆಟ್‌ಗಳನ್ನು ಪಡೆದಿದ್ದರು.
ದುಬೈನಲ್ಲಿ ನಡೆದಿದ್ದ ಗ್ರೂಪ್ ಪಂದ್ಯದಲ್ಲಿ ಹೆನ್ರಿ ಅವರು ಶುಭಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ವಿಕೆಟ್‌ಗಳನ್ನು ಉರುಳಿಸಿದ್ದರು. ಪರಿಣಾಮವಾಗಿ ಭಾರತವು 30 ರನ್‌ಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೆ ಮಧ್ಯಮ ಸರದಿ ಸಿಡಿದೆದ್ದ ಕಾರಣ ರೋಹಿತ್ ಬಳಗವು 9 ವಿಕೆಟ್‌ಗಳ ನಷ್ಟಕ್ಕೆ 249 ರನ್ ಗಳಿಸುವಲ್ಲಿ ಶಕ್ತವಾಗಿತ್ತು.
ಗ್ರೂಪ್ ಪಂದ್ಯದಲ್ಲಿ ವೇಗ ಹಾಗೂ ಉತ್ತಮ ಸೀಮ್‌ನೊಂದಿಗೆ ದಾಳಿ ನಡೆಸಿದ್ದ ಹೆನ್ರಿ 42 ರನ್‌ಗೆ 5 ವಿಕೆಟ್‌ಗಳನ್ನು ಪಡೆದಿದ್ದರು. ಆದರೆ ಕಿವೀಸ್ ಪಡೆ ಈ ಪಂದ್ಯದಲ್ಲಿ ಸೋಲನುಭವಿಸಿತ್ತು.
ಫೈನಲ್ ಪಂದ್ಯದಲ್ಲಿ ಹೆನ್ರಿ ಅವರ ಆರಂಭಿಕ ಬೌಲಿಂಗ್ ನ್ಯೂಝಿಲ್ಯಾಂಡ್ ಮೇಲುಗೈ ಸಾಧಿಸುವಲ್ಲಿ ಅತ್ಯಂತ ಮುಖ್ಯವಾಗಿದೆ. ಹೆನ್ರಿ ಸೆಮಿ ಫೈನಲ್ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ಭುಜನೋವಿಗೆ ಒಳಗಾಗಿದ್ದು, ಸರಿಯಾದ ಸಮಯಕ್ಕೆ ಚೇತರಿಸಿಕೊಳ್ಳಲಿದ್ದಾರೆ ಎಂದು ಕೋಚ್ ಸ್ಟಿಡ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚಕ್ರವರ್ತಿ ಅವರ ನಿಗೂಢ ಸ್ಪಿನ್ ಬೌಲಿಂಗ್:
ಸ್ಪಿನ್ನರ್ ವರುಣ್ ಚಕ್ರವರ್ತಿ ಕೊನೆಯ ಕ್ಷಣದಲ್ಲಿ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು. 42 ರನ್‌ಗೆ 5 ವಿಕೆಟ್ ಗೊಂಚಲು ಪಡೆದು ನ್ಯೂಝಿಲ್ಯಾಂಡ್ ಬ್ಯಾಟರ್‌ಗಳನ್ನು ಇನ್ನಿಲ್ಲದಂತೆ ಕಾಡಿದ್ದರು.
ಇದು ಪಂದ್ಯಾವಳಿಯಲ್ಲಿ ಚಕ್ರವರ್ತಿ ಆಡಿರುವ ಮೊದಲ ಪಂದ್ಯವಾಗಿತ್ತು ಹಾಗೂ ಏಕದಿನ ಕ್ರಿಕೆಟ್‌ನಲ್ಲಿ 2ನೇ ಪಂದ್ಯವಾಗಿತ್ತು. ಚಕ್ರವರ್ತಿ ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧ ತನ್ನ ಮೊದಲ ಏಕದಿನ ಪಂದ್ಯ ಆಡಿದ್ದರು.
ಸ್ಪಿನ್ನರ್‌ಗಳಿಗೆ ನೆರವಾಗುವ ಪಿಚ್‌ಗಳಲ್ಲಿ ಚಕ್ರವರ್ತಿ ಒಂದು ವೇಳೆ ಆಡುವ 11ರ ಬಳಗದಲ್ಲಿ ಕಾಣಿಸಿಕೊಂಡರೆ ಭಾರತ ಮೇಲುಗೈ ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸುವ ನಿರೀಕ್ಷೆ ಇದೆ.
ಭಾರತಕ್ಕೆ ರವೀಂದ್ರ, ವಿಲಿಯಮ್ಸನ್ ಬ್ಯಾಟಿಂಗ್ ಭೀತಿ?:
ಉದಯೋನ್ಮುಖ ಸ್ಟಾರ್ ರಚಿನ್ ರವೀಂದ್ರ ಹಾಗೂ ಹಿರಿಯ ಆಟಗಾರ ಕೇನ್ ವಿಲಿಯಮ್ಸನ್ ಲಾಹೋರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಶತಕಗಳನ್ನು ಗಳಿಸಿ ಫೈನಲ್ ಪಂದ್ಯಕ್ಕೆ ಕಾಲಿಟ್ಟಿದ್ದಾರೆ.
ಎಡಗೈ ಬ್ಯಾಟರ್ ರವೀಂದ್ರ ಹಾಗೂ ವಿಲಿಯಮ್ಸನ್ ಸೆಮಿ ಫೈನಲ್ ಪಂದ್ಯದಲ್ಲಿ 164 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದ್ದು, ಭಾರತೀಯ ಸ್ಪಿನ್ನರ್‌ಗಳನ್ನು ದಿಟ್ಟವಾಗಿ ಎದುರಿಸುವ ಸಾಮರ್ಥ್ಯ ಹೊಂದಿದ್ದಾರೆ.
34ರ ವಯಸ್ಸಿನ ವಿಲಿಯಮ್ಸನ್ ಭಾರತ ವಿರುದ್ಧ ಗ್ರೂಪ್ ಪಂದ್ಯದಲ್ಲಿ 81 ರನ್ ಗಳಿಸಿದ್ದರು. 25ರ ವಯಸ್ಸಿನ ರವೀಂದ್ರ ಮಂದಗತಿಯ ಪಿಚ್‌ನಲ್ಲಿ ಭಾರತ ತಂಡಕ್ಕೆ ಗಂಭೀರ ಸವಾಲಾಗುವ ಸಾಧ್ಯತೆಯಿದೆ.
‘‘ವಿಲಿಯಮ್ಸನ್ ಹಾಗೂ ರವೀಂದ್ರ ಅವರ ಬ್ಯಾಟಿಂಗ್ ಬೌಲರ್‌ಗಳ ಕೆಲಸವನ್ನು ಸುಲಭಗೊಳಿಸುತ್ತದೆ’’ ಎಂದು ಕಿವೀಸ್ ನಾಯಕ ಹಾಗೂ ಎಡಗೈ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಹೇಳಿದ್ದಾರೆ.
ರೋಹಿತ್‌ರ ಬಿರುಸಿನ ಆರಂಭ:
ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಪಂದ್ಯಾವಳಿಯಲ್ಲಿ ಈ ತನಕ ದೊಡ್ಡ ಸ್ಕೋರ್ ಗಳಿಸಿಲ್ಲ. ಬಾಂಗ್ಲಾದೇಶ ವಿರುದ್ದ ಆರಂಭಿಕ ಪಂದ್ಯದಲ್ಲಿ ತನ್ನ ಗರಿಷ್ಠ ಸ್ಕೋರ್(41)ಗಳಿಸಿದ್ದಾರೆ.
ಪಾಕಿಸ್ತಾನ ಹಾಗೂ ಆಸ್ಟ್ರೇಲಿಯ ವಿರುದ್ಧ 20ಕ್ಕೂ ಅಧಿಕ ರನ್ ಗಳಿಸಿದ್ದರೂ ಭಾರತಕ್ಕೆ ಬಿರುಸಿನ ಆರಂಭ ಒದಗಿಸುವಲ್ಲಿ ಶಕ್ತರಾಗಿದ್ದರು.
ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿಸುವಲ್ಲಿ ವಿಫಲವಾಗುತ್ತಿರುವ ಆರಂಭಿಕ ಬ್ಯಾಟರ್ ರೋಹಿತ್ ಟೀಕೆಗಳನ್ನು ಎದುರಿಸುತ್ತಿದ್ದಾರೆ.
‘‘ನೀವು ರನ್‌ಗಳ ಮೂಲಕ ಮೌಲ್ಯ ಮಾಪನ ಮಾಡಿದರೆ ನಾವು ‘ಪ್ರಭಾವ’ ವನ್ನು ಮೌಲ್ಯ ಮಾಪನ ಮಾಡುತ್ತೇವೆ. ನಮಗೆ ರನ್‌ಗಿಂತ ‘ಪ್ರಭಾವ’ ನಿರ್ಣಾಯಕವಾಗಿದೆ. ಇದುವೇ ನಮ್ಮ-ನಿಮ್ಮ ನಡುವಿನ ವ್ಯತ್ಯಾಸ’’ ಎಂದು ರೋಹಿತ್‌ರ ಫಾರ್ಮ್‌ಬಗ್ಗೆ ಕೇಳಿದ ಪ್ರಶ್ನೆಗೆ ಮುಖ್ಯ ಕೋಚ್ ಗೌತಮ್ ಗಂಭೀರ್ ತಿರುಗೇಟು ನೀಡಿದ್ದಾರೆ.
ಪಿಚ್ ಫ್ಯಾಕ್ಟರ್:
ರಾಜಕೀಯ ಕಾರಣಗಳಿಂದಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದ ನಂತರ ಭಾರತ ತಂಡವು ತನ್ನ ಎಲ್ಲಾ ಪಂದ್ಯಗಳನ್ನು ಒಂದೇ ಕ್ರೀಡಾಂಗಣದಲ್ಲಿ ಆಡುವ ಅವಕಾಶ ಪಡೆದಿದ್ದು, ದುಬೈ ಇಂಟರ್‌ನ್ಯಾಶನಲ್ ಕ್ರಿಕೆಟ್ ಕ್ರೀಡಾಂಗಣ ಸದ್ಯ ಚರ್ಚೆಯ ಕೇಂದ್ರಬಿಂದುವಾಗಿದೆ.
ದುಬೈ ಕ್ರೀಡಾಂಗಣದ ಪಿಚ್ ಮಂದಗತಿಯಲ್ಲಿ ವರ್ತಿಸುತ್ತಿದ್ದು, ಇದು ಸ್ಪಿನ್ನರ್‌ಗಳಿಗೆ ಹೆಚ್ಚು ಸಹಕರಿಸುತ್ತಿದೆ. ಈ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯ ತಂಡ ದುಬೈನಲ್ಲಿ ಗರಿಷ್ಠ ಮೊತ್ತ(264)ಗಳಿಸಿತ್ತು. ಭಾರತ ತಂಡವು ಇನ್ನೂ 11 ಎಸೆತಗಳು ಬಾಕಿ ಇರುವಾಗಲೇ ಈ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿತ್ತು.
ಪಾಕಿಸ್ತಾನದಲ್ಲಿರುವ ಪಿಚ್ ಬ್ಯಾಟರ್‌ಗಳ ಸ್ನೇಹಿಯಾಗಿದ್ದು, ಲಾಹೋರ್‌ನಲ್ಲಿ ನಡೆದಿದ್ದ 2ನೇ ಸೆಮಿ ಫೈನಲ್‌ನಲ್ಲಿ ನ್ಯೂಝಿಲ್ಯಾಂಡ್ ತಂಡವು ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಗರಿಷ್ಠ ಸ್ಕೋರ್(362/6)ಗಳಿಸಿದೆ. ನಂತರ ದಕ್ಷಿಣ ಆಫ್ರಿಕಾ ತಂಡವನ್ನು 9 ವಿಕೆಟ್ ನಷ್ಟಕ್ಕೆ 312 ರನ್‌ಗೆ ನಿಯಂತ್ರಿಸಿದೆ.
ಭಾರತ ತಂಡವು ಫೈನಲ್ ಪಂದ್ಯಕ್ಕಾಗಿ ದುಬೈನಲ್ಲಿ ಬೀಡುಬಿಟ್ಟಿರುವ ಕುರಿತು ಪ್ರತಿಕ್ರಿಯಿಸಿರುವ ನ್ಯೂಝಿಲ್ಯಾಂಡ್ ಆಟಗಾರ ರವೀಂದ್ರ, ‘‘ನಮ್ಮ ಮುಂದೆ ಇರುವ ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಂಡು ,ಆಡುವುದಕ್ಕೆ ನಾವು ಹೆಮ್ಮೆ ಪಡುತ್ತೇವೆ’’ ಎಂದರು.







