ಭಾರತ-ನ್ಯೂಝಿಲೆಂಡ್ ಟೆಸ್ಟ್ ಸರಣಿ: ಗುರ್ನೂರ್ ಬ್ರಾರ್ ಇನ್, ಕುಲ್ ದೀಪ್ ಯಾದವ್ ಔಟ್!

Photo: Cricinfo
ವೆಲ್ಲಿಂಗ್ಟನ್: ನ. 19ರಿಂದ ವೆಲ್ಲಿಂಗ್ಟನ್ ನಲ್ಲಿ ಪ್ರಾರಂಭಗೊಳ್ಳಲಿರುವ ಭಾರತ ಮತ್ತು ನ್ಯೂಝಿಲೆಂಡ್ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಮಧ್ಯಮ ವೇಗಿ ಗುರ್ನೂರ್ ಬ್ರಾರ್ ರನ್ನು ಭಾರತ ತಂಡಕ್ಕೆ ಸೇರ್ಪಡೆ ಮಾಡಲಾಗಿದೆ. ಇದೇ ವೇಳೆ ಎಡಗೈ ಸ್ಪಿನ್ನರ್ ಕುಲ್ ದೀಪ್ ಯಾದವ್ ರನ್ನು ತಂಡದಿಂದ ಕೈಬಿಡಲಾಗಿದೆ. ಅವರನ್ನು ದೇಶೀಯ ಕ್ರಿಕೆಟ್ ನಲ್ಲಿ ಆಡಲು ತಂಡದಿಂದ ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದೆ.
ಗುರ್ನೂರ್ ಬ್ರಾರ್ ಭಾರತೀಯ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿರುವುದರಿಂದ, ರವಿವಾರ ನಡೆಯಲಿರುವ ಐದನೆ ಹಾಗೂ ಅಂತಿಮ ಏಕದಿನ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಈ ಪಂದ್ಯಕ್ಕೆ ಗುರ್ನೂರ್ ಬ್ರಾರ್ ಬದಲಿಗೆ ಬೇರೆ ಆಟಗಾರರನ್ನು ಹೆಸರಿಸುವುದಿಲ್ಲ ಎಂದು ಬಿಸಿಸಿಐ ಹೇಳಿದೆ.
ಈ ನಡುವೆ, ಐದನೆ ಏಕದಿನ ಪಂದ್ಯದಲ್ಲಿ ಆಡಿದ ಬಳಿಕ ಭಾರತಕ್ಕೆ ಮರಳಲಿರುವ ಕುಲ್ ದೀಪ್ ಯಾದವ್, ದೇಶೀಯ ಕ್ರಿಕೆಟ್ ಪಂದ್ಯಗಳಲ್ಲಿ ಭಾಗವಹಿಸಲಿದ್ದಾರೆ.
“ಭಾರತದಲ್ಲಿ ನಡೆಯುತ್ತಿರುವ ದೇಶೀಯ ಕ್ರಿಕೆಟ್ ನಲ್ಲಿ ಪಾಲ್ಗೊಳ್ಳಲು ಕುಲ್ ದೀಪ್ ಯಾದವ್ ಅವರನ್ನು ಟೆಸ್ಟ್ ತಂಡದಿಂದ ಬಿಡುಗಡೆಗೊಳಿಸಲಾಗಿದೆ” ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಐದನೆ ಏಕದಿನ ಪಂದ್ಯಕ್ಕೂ ಮುನ್ನ, ಮೀಸಲು ಆಟಗಾರರಾಗಿ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಕೂಡಾ ಭಾರತೀಯ ತಂಡಕ್ಕೆ ಸೇರ್ಪಡೆಯಾಗಿದ್ದಾರೆ ಎಂದೂ ಬಿಸಿಸಿಐ ಪ್ರಕಟಣೆಯಲ್ಲಿ ಹೇಳಿದೆ.
ಗುರ್ನೂರ್ ಬ್ರಾರ್ ಇನ್ನಷ್ಟೇ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಬೇಕಿದೆ. ಆದರೆ, ಅವರು ಈಗಾಗಲೇ 13 ಏಕದಿನ ಪಂದ್ಯಗಳನ್ನು ಆಡಿದ್ದು, 23 ವಿಕೆಟ್ ಗಳನ್ನು ಕಬಳಿಸಿದ್ದಾರೆ. ವೆಲ್ಲಿಂಗ್ಟನ್ ನಲ್ಲಿ ನ್ಯೂಝಿಲೆಂಡ್ ವಿರುದ್ಧ ನಡೆದ ಎರಡನೆ ಏಕದಿನ ಪಂದ್ಯದಲ್ಲಿ 30 ರನ್ ಗಳನ್ನು ನೀಡಿ, ನಾಲ್ಕು ವಿಕೆಟ್ ಪಡೆದದ್ದು ಅವರ ಇಲ್ಲಿವರೆಗಿನ ಶ್ರೇಷ್ಠ ಪ್ರದರ್ಶನವಾಗಿದೆ.






