ಇಂಡಿಯಾ ಓಪನ್: ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟ ಸಾತ್ವಿಕ್-ಚಿರಾಗ್ ಶೆಟ್ಟಿ

Photo Credit: SHIV KUMAR PUSHPAKAR
ಹೊಸದಿಲ್ಲಿ: ಭಾರತದ ಸ್ಟಾರ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಇಂಡಿಯಾ ಓಪನ್ ಸೂಪರ್ 750 ಟೂರ್ನಮೆಂಟ್ ನಲ್ಲಿ ರವಿವಾರ ನಡೆದ ಫೈನಲ್ ನಲ್ಲಿ ಆಘಾತಕಾರಿ ಸೋಲನುಭವಿಸಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು.
ರಾಷ್ಟ್ರೀಯ ರಾಜಧಾನಿಯಲ್ಲಿ ಕೆ.ಡಿ. ಜಾಧವ್ ಒಳಾಂಗಣ ಕ್ರೀಡಾಂಗಣದಲ್ಲಿ 65 ನಿಮಿಷಗಳ ಕಾಲ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಏಶ್ಯನ್ ಗೇಮ್ಸ್ ಚಾಂಪಿಯನ್ ಸಾತ್ವಿಕ್-ಚಿರಾಗ್ ವಿಶ್ವ ಚಾಂಪಿಯನ್ ಗಳಾದ ಕಾಂಗ್ ಮಿನ್ ಹಿಯುಕ್ ಹಾಗೂ ಸೆವೊ ಸಾಂಗ್ ವಿರುದ್ಧ 21-15, 11-21, 18-21 ಗೇಮ್ ಗಳ ಅಂತರದಿಂದ ಸೋತಿದ್ದಾರೆ.
ಸಾತ್ವಿಕ್ ಹಾಗೂ ಚಿರಾಗ್ ಜೋಡಿ ಕಳೆದ ವರ್ಷ ಇಂಡಿಯಾ ಓಪನ್ ಪ್ರಶಸ್ತಿ ಜಯಿಸಿದ್ದರು. ಆದರೆ ಈ ವರ್ಷ ರನ್ನರ್ಸ್ ಅಪ್ ಗೆ ತೃಪ್ತರಾಗಿದ್ದಾರೆ.
ಕೊರಿಯಾ ಎದುರಾಳಿಗಳ ಎದುರು ಸಾತ್ವಿಕ್ ಹಾಗೂ ಚಿರಾಗ್ ಯಾವಾಗಲೂ ಕಠಿಣ ಪಂದ್ಯಗಳನ್ನು ಎದುರಿಸುತ್ತಾರೆ. ರವಿವಾರದ ಪಂದ್ಯಕ್ಕಿಂತ ಮೊದಲು ಕಾಂಗ್ ಹಾಗೂ ಸೆವೊ ವಿರುದ್ಧ ಆಡಿರುವ 5 ಪಂದ್ಯಗಳಲ್ಲಿ 4ರಲ್ಲಿ ಜಯ ಸಾಧಿಸಿ ಹೆಡ್-ಟು-ಹೆಡ್ ದಾಖಲೆಯಲ್ಲಿ ಮುನ್ನಡೆಯಲ್ಲಿದ್ದರು.
ಸಾತ್ವಿಕ್ ಹಾಗೂ ಚಿರಾಗ್ ಮೊದಲ ಸೆಟನ್ನು 21-15 ಅಂತರದಿಂದ ಗೆದ್ದುಕೊಂಡು ಶುಭಾರಂಭ ಮಾಡಿದ್ದರು. ಎರಡನೇ ಗೇಮ್ ನಲ್ಲಿ ಭಾರತದ ಜೋಡಿ ಕಳಪೆ ಆರಂಭ ಪಡೆಯಿತು. 2ನೇ ಸೆಟ್ ನಲ್ಲಿ 21-11ರಿಂದ ಜಯ ಸಾಧಿಸಿದ ಕೊರಿಯನ್ನರು ತಿರುಗೇಟು ನೀಡಿದರು.
ನಿರ್ಣಾಯಕ 3ನೇ ಗೇಮ್ ನಲ್ಲೂ ಕೊರಿಯಾ ಆಟಗಾರರು ಆರಂಭದಲ್ಲಿ 9-5 ಮುನ್ನಡೆ ಪಡೆದರು. ಕೊರಿಯನ್ನರು ಭಾರತೀಯರು ಆಕ್ರಮಣಕಾರಿ ಗೇಮ್ ಆಡಲು ಅವಕಾಶ ನೀಡಲಿಲ್ಲ. 3ನೇ ಗೇಮ್ ಅನ್ನು 21-18 ಅಂತರದಿಂದ ರೋಚಕವಾಗಿ ಗೆದ್ದುಕೊಂಡರು.







