ಟೆಸ್ಟ್ ಕ್ರಿಕೆಟ್ ಗೆ ಮುಹಮ್ಮದ್ ಶಮಿ ವಿದಾಯ
‘ಬಿಳಿ ಜೆರ್ಸಿಗೆ ವಿದಾಯ ಹೇಳುತ್ತಿದ್ದೇನೆ, ಅದರ ನೆನಪುಗಳಿಗಲ್ಲ’: ಭಾವನಾತ್ಮಕ ಸಂದೇಶ ಹಂಚಿಕೊಂಡ ಭಾರತದ ವೇಗದ ಬೌಲರ್

ಮುಹಮ್ಮದ್ ಶಮಿ | Photo Credit : PTI
ಹೊಸದಿಲ್ಲಿ: ಭಾರತದ ವೇಗದ ಬೌಲರ್ ಮುಹಮ್ಮದ್ ಶಮಿ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಪ್ರಸ್ತುತ ಭಾರತ ತಂಡದಲ್ಲಿ ಸ್ಥಾನ ಪಡೆಯದಿರುವ ಶಮಿ, ಶುಕ್ರವಾರ ಇನ್ಸ್ಟಾಗ್ರಾಮ್ ನಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಳ್ಳುವ ಮೂಲಕ ತಮ್ಮ ಟೆಸ್ಟ್ ಕ್ರಿಕೆಟ್ ಪಯಣಕ್ಕೆ ತೆರೆ ಎಳೆದಿದ್ದಾರೆ.
'ನಾನು ಬಿಳಿ ಜೆರ್ಸಿಗೆ ವಿದಾಯ ಹೇಳುತ್ತಿದ್ದೇನೆ. ಆದರೆ ಅದರೊಂದಿಗೆ ಬೆಸೆದುಕೊಂಡಿರುವ ನೆನಪುಗಳಿಗೆ ಎಂದಿಗೂ ವಿದಾಯ ಹೇಳುವುದಿಲ್ಲ' ಎಂದು ಅವರು ಬರೆದುಕೊಂಡಿದ್ದಾರೆ.
'ಮೊದಲ ಬಾರಿಗೆ ಭಾರತದ ಟೆಸ್ಟ್ ಜೆರ್ಸಿ ಧರಿಸಿದಾಗ ನನ್ನಲ್ಲಿದ್ದದ್ದು ಒಂದೇ ಕನಸು. ನನ್ನ ದೇಶಕ್ಕಾಗಿ ಏನಾದರೂ ಮಾಡಬೇಕು ಎಂಬುದಾಗಿತ್ತು. ಅಂದಿನಿಂದ ಪ್ರತಿಯೊಂದು ವಿಕೆಟ್, ಪ್ರತಿಯೊಂದು ಹೋರಾಟ, ಪ್ರತಿಯೊಂದು ಗಾಯ ಹಾಗೂ ಪ್ರತಿಯೊಂದು ಪುನರಾಗಮನವೂ ನನಗೆ ಹೊಸ ಪಾಠ ಕಲಿಸಿದೆ' ಎಂದು ತಮ್ಮ ಕ್ರಿಕೆಟ್ ಪಯಣದ ನೆನಪುಗಳನ್ನು ಹಂಚಿಕೊಂಡಿದ್ದಾರೆ.
'ನನ್ನ ಪಾಲಿಗೆ ಟೆಸ್ಟ್ ಕ್ರಿಕೆಟ್ ಕೇವಲ ಒಂದು ಮಾದರಿಯಾಗಿರಲಿಲ್ಲ. ಅದು ನನ್ನ ಜೀವನದ ಅತ್ಯಂತ ವಿಶೇಷ ಭಾಗವಾಗಿತ್ತು. ಇಂದು ಭಾರವಾದ ಹೃದಯ ಹಾಗೂ ಅಸಂಖ್ಯಾತ ಸುಂದರ ನೆನಪುಗಳೊಂದಿಗೆ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿಯಾಗುವ ನಿರ್ಧಾರ ಕೈಗೊಂಡಿದ್ದೇನೆ' ಎಂದು ತಿಳಿಸಿದ್ದಾರೆ.
ತಮ್ಮ ಕ್ರಿಕೆಟ್ ಪಯಣದಲ್ಲಿ ಬೆಂಬಲವಾಗಿ ನಿಂತ ಪ್ರತಿಯೊಬ್ಬ ಸಹ ಆಟಗಾರ, ತರಬೇತುದಾರ, ಕುಟುಂಬ ಸದಸ್ಯರು ಹಾಗೂ ಒಳ್ಳೆಯ ಮತ್ತು ಕಷ್ಟದ ಸಮಯಗಳೆರಡರಲ್ಲೂ ತಮ್ಮ ಮೇಲೆ ನಂಬಿಕೆ ಇಟ್ಟ ಲಕ್ಷಾಂತರ ಭಾರತೀಯರಿಗೆ ಶಮಿ ಹೃದಯಪೂರ್ವಕ ಧನ್ಯವಾದ ಸಲ್ಲಿಸಿದ್ದಾರೆ.
ತಮ್ಮ ಪ್ರತಿಭೆಯನ್ನು ನಂಬಿ, ಬೆಳೆಯಲು ಅವಕಾಶಗಳನ್ನು ನೀಡಿದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಹಾಗೂ ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ (CAB) ಸಂಸ್ಥೆಗಳಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಸಂಸ್ಥೆಗಳು ನೀಡಿದ ಬೆಂಬಲ ಮತ್ತು ತೋರಿದ ನಂಬಿಕೆ ಸದಾ ತಮ್ಮ ಪಾಲಿಗೆ ವಿಶೇಷವಾಗಿರಲಿದೆ ಎಂದು ಹೇಳಿದ್ದಾರೆ.






