ಎಫ್ಐಎಚ್ ಹಾಕಿ ಪ್ರೊ ಲೀಗ್ | ಭಾರತ-ಪಾಕ್ ಮುಖಾಮುಖಿ

PC: @indianhockey
ಹೊಸದಿಲ್ಲಿ, ಆ. 28: ಎಫ್ಐಎಚ್ ಹಾಕಿ ಪ್ರೊ ಲೀಗ್ 2025-26 ಋತುವಿನಲ್ಲಿ, ನ್ಯೂಝಿಲ್ಯಾಂಡ್ ನ ಸ್ಥಾನದಲ್ಲಿ ಆಡುವಂತೆ ಅಂತರ್ರಾಷ್ಟ್ರೀಯ ಹಾಕಿ ಫೆಡರೇಶನ್ (ಎಫ್ಐಎಚ್) ನೀಡಿರುವ ಆಹ್ವಾನವನ್ನು ಪಾಕಿಸ್ತಾನ ಒಪ್ಪಿಕೊಂಡಿದೆ. ಹಾಗಾಗಿ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಈ ಪಂದ್ಯಾವಳಿಯಲ್ಲಿ ಎರಡು ಬಾರಿ ಮುಖಾಮುಖಿಯಾಗಲಿವೆ.
ಈ ವರ್ಷದ ಆರಂಭದಲ್ಲಿ ಮಲೇಶ್ಯದಲ್ಲಿ ನಡೆದ ಎಫ್ಐಎಚ್ ನೇಶನ್ಸ್ ಕಪ್ ನ ಫೈನಲ್ನಲ್ಲಿ ನ್ಯೂಝಿಲ್ಯಾಂಡ್ ಪಾಕಿಸ್ತಾನವನ್ನು ಸೋಲಿಸಿತ್ತು. ಹಾಗಾಗಿ, ಅದರ ಆಧಾರದಲ್ಲಿ 2025-26 ಋತುವಿನ ಪ್ರೊ ಲೀಗ್ನಲ್ಲಿ ಆಡುವ ಅರ್ಹತೆಯನ್ನು ಅದು ಪಡೆದಿತ್ತು. ಆದರೆ, ಈ ಪಂದ್ಯಾವಳಿಯಲ್ಲಿ ಆಡುವಂತೆ ಬಂದಿರುವ ಆಹ್ವಾನವನ್ನು ಸ್ವೀಕರಿಸದಿರಲು ಈಗ ಹಾಕಿ ನ್ಯೂಝಿಲ್ಯಾಂಡ್ ನಿರ್ಧರಿಸಿದೆ.
ಹಾಗಾಗಿ, ನಿಯಮಾವಳಿಗಳಪ್ರಕಾರ, ರನ್ನರ್ಸ್-ಅಪ್ ಪಾಕಿಸ್ತಾನಕ್ಕೆ ಎಫ್ಐಎಚ್ ಆಹ್ವಾನಿ ನೀಡಿದೆ ಮತ್ತು ಅದನ್ನು ಪಾಕಿಸ್ತಾನ ಸ್ವೀಕರಿಸಿದೆ.
ಮುಂಬರುವ ಪುರುಷರ ಏಳನೇ ಆವೃತ್ತಿಯ ಎಫ್ಐಎಚ್ ಹಾಕಿ ಪ್ರೊ ಲೀಗ್ ನಲ್ಲಿ ಅರ್ಜೆಂಟೀನ, ಆಸ್ಟ್ರೇಲಿಯ, ಬೆಲ್ಜಿಯಮ್, ಇಂಗ್ಲೆಂಡ್, ಜರ್ಮನಿ, ಭಾರತ, ನೆದರ್ಲ್ಯಾಂಡ್ಸ್, ಸ್ಪೇನ್ ಮತ್ತು ಪಾಕಿಸ್ತಾನ ತಂಡಗಳು ಪಾಲ್ಗೊಳ್ಳಲಿವೆ.





