ಟಿ-20 ಕ್ರಿಕೆಟ್ ವಿಶ್ವಕಪ್ನಲ್ಲಿ ಭಾರತ-ಪಾಕಿಸ್ತಾನ ಪಂದ್ಯ ನಡೆಯದಿದ್ದರೆ ನಷ್ಟ ಎಷ್ಟು?

Photo Credit : PTI
ಹೊಸದಿಲ್ಲಿ: ಐಸಿಸಿ ಪಂದ್ಯಾವಳಿಗಳಲ್ಲಿ ಭಾರತ-ಪಾಕಿಸ್ತಾನ ಪಂದ್ಯವೊಂದು 2,200 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಆದಾಯವನ್ನು ಗಳಿಸುತ್ತದೆ. ಆದರೆ, ಮುಂಬರುವ ಐಸಿಸಿ ಟಿ20 ವಿಶ್ವಕಪ್ನಲ್ಲಿ ಈ ಪಂದ್ಯಗಳ ಅನುಪಸ್ಥಿತಿಯು ದೊಡ್ಡ ನಷ್ಟಕ್ಕೆ ಕಾರಣವಾಗಬಹುದು ಎಂಬ ಭೀತಿಯು ಸಂಘಟಕರನ್ನು ಕಾಡುತ್ತಿದೆ ಎಂದು ವರದಿಯಾಗಿದೆ.
ನೆರೆಹೊರೆಯ ದೇಶಗಳ ನಡುವಿನ ರಾಜಕೀಯ ಸಂಬಂಧ ಹದಗೆಟ್ಟಿರುವುದರಿಂದ, ಉಭಯ ದೇಶಗಳ ಕ್ರಿಕೆಟ್ ತಂಡಗಳು ಬಹುದೇಶಗಳು ಭಾಗವಹಿಸುವ ಪಂದ್ಯಾವಳಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತವೆ. ಭಾರತ-ಪಾಕ್ ಪಂದ್ಯಗಳು ವಾಣಿಜ್ಯಾತ್ಮಕವಾಗಿ ಎಷ್ಟು ಪ್ರಭಾವಶಾಲಿಯೆಂದರೆ, ಜಾಗತಿಕ ಪಂದ್ಯಾವಳಿಗಳಲ್ಲಿ ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯು ಈ ತಂಡಗಳನ್ನು ಒಂದೇ ಗುಂಪಿನಲ್ಲಿ ಆಡಿಸುತ್ತದೆ.
ಫೆಬ್ರವರಿ 15ರಂದು ಕೊಲಂಬೊದಲ್ಲಿ ಭಾರತದ ವಿರುದ್ಧ ನಡೆಯಲು ನಿಗದಿಯಾಗಿರುವ ಪಾಕಿಸ್ತಾನದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ ಸರಕಾರ ರವಿವಾರ ಘೋಷಿಸಿದೆ. ತನ್ನ ಈ ನಿರ್ಧಾರಕ್ಕೆ ಪಾಕಿಸ್ತಾನ ಅಂಟಿಕೊಂಡರೆ, ಅದು ಕೋಟ್ಯಂತರ ರೂಪಾಯಿ ಹಣವನ್ನು ಕಳೆದುಕೊಳ್ಳುತ್ತದೆ. ಅದೇ ವೇಳೆ, ಈ ಪಂದ್ಯ ನಡೆಯದಿದ್ದರೆ ಐಸಿಸಿ ಮತ್ತು ಭಾರತದ ಮಾಧ್ಯಮ ಹಕ್ಕುಗಳನ್ನು ಹೊಂದಿರುವ ಜಿಯೋಸ್ಟಾರ್ ಮೇಲೂ ಗಣನೀಯ ಪ್ರಮಾಣದ ಆರ್ಥಿಕ ಹೊಡೆತ ಬೀಳುತ್ತದೆ.
ಜಿಯೋಸ್ಟಾರ್ 200ರಿಂದ 250 ಕೋಟಿ ರೂ. ಜಾಹೀರಾತು ನಷ್ಟವನ್ನು ಅನುಭವಿಸಬಹುದಾಗಿದೆ. ಭಾರತ-ಪಾಕ್ ಐಸಿಸಿ ಪಂದ್ಯಗಳ ವೇಳೆ 10 ಸೆಕೆಂಡ್ಗಳ ಒಂದು ಜಾಹೀರಾತಿನ ಬೆಲೆ ಸುಮಾರು 40 ಲಕ್ಷ ರೂ.ಯಷ್ಟು ಆಗುತ್ತದೆ.
ಈ ವಾಕೋವರ್ನಿಂದ ಭಾರತಕ್ಕೆ ಪೂರ್ಣ ಅಂಕಗಳು ಸಿಗುತ್ತದೆಯಾದರೂ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮೇಲೆ ಆರ್ಥಿಕ ದಂಡವನ್ನು ವಿಧಿಸುವ ಅಧಿಕಾರ ಐಸಿಸಿಗೆ ಈಗಲೂ ಇದೆ.
ಭಾರತ-ಪಾಕ್ ಪಂದ್ಯ ರದ್ದತಿಯ ಪರಿಣಾಮಗಳು
ಭಾರತ-ಪಾಕಿಸ್ತಾನ ಐಸಿಸಿ ಪಂದ್ಯವೊಂದು ತರುವ ಆದಾಯ: 2,200 ಕೋಟಿ ರೂ.ಗೂ ಅಧಿಕ
ನೇರಪ್ರಸಾರಕರ ಜಾಹೀರಾತು ನಷ್ಟ: ಸುಮಾರು 200- 250 ಕೋಟಿ ರೂ.
ಪಂದ್ಯದ ವೇಳೆ 10 ಸೆಕೆಂಡ್ ಜಾಹೀರಾತೊಂದರ ದರ: ಸುಮಾರು 40 ಲಕ್ಷ ರೂ.
ಜಾಗತಿಕ ವೀಕ್ಷಕರ ಸಂಖ್ಯೆ: 100 ಕೋಟಿಗೂ ಅಧಿಕ
ಪಾಕ್ ನಿರ್ಧಾರವು ಕ್ರೀಡೆಯ ಆಶಯವನ್ನು ಕಡೆಗಣಿಸುತ್ತದೆ: ಐಸಿಸಿ
ಐಸಿಸಿ ಪಂದ್ಯಾವಳಿಗಳಲ್ಲಿ ಆಯ್ದ ಪಾಲ್ಗೊಳ್ಳುವಿಕೆಯು ಕ್ರೀಡೆಯ ಆಶಯಗಳನ್ನು ಕಡೆಗಣಿಸುತ್ತದೆ ಎಂದು ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸೋಮವಾರ ಹೇಳಿದೆ.
ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ಪಾಕಿಸ್ತಾನ ಕ್ರಿಕೆಟ್ ತಂಡದ ನಿರ್ಧಾರಕ್ಕೆ ಐಸಿಸಿ ಈ ಪ್ರತಿಕ್ರಿಯೆ ನೀಡಿದೆ.
‘‘ಈ ಆಯ್ದ ಪಾಲ್ಗೊಳ್ಳುವಿಕೆಯು ಜಾಗತಿಕ ಕ್ರೀಡಾ ಕೂಟವೊಂದರ ಪ್ರಾಥಮಿಕ ಆಶಯಕ್ಕೆ ಹೊಂದಿಕೊಳ್ಳುವುದಿಲ್ಲ. ಇಂಥ ಕ್ರೀಡಾಕೂಟಗಳಲ್ಲಿ ಎಲ್ಲಾ ಅರ್ಹ ತಂಡಗಳು ವೇಳಾಪಟ್ಟಿಯಂತೆ ಸಮಾನ ನೆಲೆಯಲ್ಲಿ ಸ್ಪರ್ಧಿಸಬೇಕೆಂದು ನಿರೀಕ್ಷಿಸಲಾಗುತ್ತದೆ’’ ಎಂದು ಅದು ಹೇಳಿದೆ.
‘‘ಕ್ರೀಡಾ ನೈತಿಕತೆ, ಸ್ಪರ್ಧಾತ್ಮಕತೆ, ಸ್ಥಿರತೆ ಮತ್ತು ನ್ಯಾಯಪರತೆಯ ಆಧಾರದಲ್ಲಿ ಐಸಿಸಿ ಪಂದ್ಯಾವಳಿಗಳನ್ನು ರೂಪಿಸಲಾಗಿದೆ. ಆಯ್ದ ಪಾಲ್ಗೊಳ್ಳುವಿಕೆಯು ಸ್ಪರ್ಧೆಗಳ ಆಶಯ ಮತ್ತು ಪಾವಿತ್ರ್ಯತೆಯನ್ನು ಕಡೆಗಣಿಸುತ್ತದೆ’’ ಎಂದು ಅದು ಅಭಿಪ್ರಾಯಪಟ್ಟಿದೆ.







