ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯ: 265 ರನ್ ಗುರಿ ನೀಡಿದ ಭಾರತ

Photo credit: X/BCCI
ಅಡಿಲೇಡ್: ಇಲ್ಲಿನ ಓವಲ್ ಮೈದಾನದಲ್ಲಿ ಆಸ್ಟ್ರೇಲಿಯ ತಂಡದ ವಿರುದ್ಧ ನಡೆಯುತ್ತಿರುವ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತ ತಂಡವು ಆರಂಭಿಕ ಆಟಗಾರ ರೋಹಿತ್ ಶರ್ಮ (73), ಮಧ್ಯಮ ಕ್ರಮಾಂಕದ ಆಟಗಾರರಾದ ಶ್ರೇಯಸ್ ಅಯ್ಯರ್ (61) ಮತ್ತು ಅಕ್ಷರ್ ಪಟೇಲ್ (44) ಉಪಯುಕ್ತ ಆಟದ ನೆರವಿನಿಂದ ನಿಗದಿತ 50 ಓವರ್ ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 264 ರನ್ ಗಳಿಸುವ ಮೂಲಕ, ಆಸ್ಟ್ರೇಲಿಯ ತಂಡಕ್ಕೆ 265 ರನ್ ಗಳ ಗುರಿ ನೀಡಿದೆ.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ ತಂಡವು ನಾಯಕ ಶುಭಮನ್ ಗಿಲ್ (9) ಹಾಗೂ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (0) ವೈಫಲ್ಯದಿಂದ ಮತ್ತೆ ಆರಂಭಿಕ ಕುಸಿತ ಕಂಡಿತು. ಶುಭಮನ್ ಗಿಲ್ ನಿರ್ಗಮನದ ಕ್ರೀಸಿಗೆ ಬಂದ ವಿರಾಟ್ ಕೊಹ್ಲಿ, ನಾಲ್ಕು ಬಾಲ್ ಎದುರಿಸಿದರೂ ಯಾವುದೇ ರನ್ ಗಳಿಸಲಾಗದೆ, ಕ್ಸೇವಿಯರ್ ಬಾರ್ಟ್ಗೇಟ್ ಬೌಲಿಂಗ್ ನಲ್ಲಿ ಎಲ್ಬಿಡಬ್ಲ್ಲೂ ಬಲೆಗೆ ಬಿದ್ದರು. ಇದು ಅವರ ಸತತ ಎರಡನೆ ಶೂನ್ಯ ಸಂಪಾದನೆಯಾಗಿದೆ. ಆಗ ಭಾರತ ತಂಡದ ಮೊತ್ತ ಎರಡು ವಿಕೆಟ್ ನಷ್ಟಕ್ಕೆ ಕೇವಲ 17 ರನ್ ಆಗಿತ್ತು.
ಈ ಹಂತದಲ್ಲಿ ಜೊತೆಯಾದ ಆರಂಭಿಕ ಆಟಗಾರ ರೋಹಿತ್ ಶರ್ಮ (73) ಹಾಗೂ ಮಧ್ಯಮ ಕ್ರಮಾಂಕದ ಶ್ರೇಯಸ್ ಅಯ್ಯರ್ (61) ನಡುವಿನ ಶತಕದ ಜೊತೆಯಾಟ ಭಾರತ ತಂಡಕ್ಕೆ ಅಗತ್ಯವಿದ್ದ ಚೇತರಿಕೆ ನೀಡಿತ್ತು. ರಕ್ಷಣೆ ಮಿಶ್ರಿತ ಆಕ್ರಮಣಕಾರಿ ಆಟ ಪ್ರದರ್ಶಿಸಿದ ರೋಹಿತ್ ಶರ್ಮಾ ತಮ್ಮ ಪ್ರಥಮ ಪಂದ್ಯದ ವೈಫಲ್ಯದಿಂದ ಹೊರ ಬಂದು, ಸಹಜ ಆಟ ಪ್ರದರ್ಶಿಸಿದರು. 97 ಬಾಲ್ ಗಳನ್ನು ಎದುರಿಸಿದ ರೋಹಿತ್ ಶರ್ಮ, ಏಳು ಬೌಂಡರಿ ಹಾಗೂ ಎರಡು ಸಿಕ್ಸರ್ ಗಳನ್ನು ಬಾರಿಸಿದರು.
ರೋಹಿತ್ ಶರ್ಮಗೆ ಉತ್ತಮ ಬೆಂಬಲ ನೀಡಿದ ಶ್ರೇಯಸ್ ಅಯ್ಯರ್ ಕೂಡಾ, 77 ಬಾಲ್ ಗಳನ್ನೆದುರಿಸಿ, 7 ಬೌಂಡರಿಗಳನ್ನು ಸಿಡಿಸಿದರು. ರೋಹಿತ್ ಶರ್ಮ ಹಾಗೂ ಶ್ರೇಯಸ್ ಅಯ್ಯರ್ ಜೋಡಿ 136 ಬಾಲ್ ಗಳನ್ನು ಎದುರಿಸಿ 118 ರನ್ ಕಲೆ ಹಾಕಿತು.







