ನ.22ರಿಂದ ಭಾರತ-ದಕ್ಷಿಣ ಆಫ್ರಿಕ 2ನೇ ಟೆಸ್ಟ್ | ಗಾಯಾಳು ಶುಭಮನ್ ಗಿಲ್ ಹೊರಗೆ; ನಾಯಕನಾಗಿ ರಿಶಭ್ ಪಂತ್

ಶುಭಮನ್ ಗಿಲ್ , ರಿಶಭ್ ಪಂತ್ | Photo Credit : BCCI
ಗುವಾಹಟಿ, ನ. 21: ಭಾರತ ಮತ್ತು ಪ್ರವಾಸಿ ದಕ್ಷಿಣ ಆಫ್ರಿಕ ತಂಡಗಳ ನಡುವಿನ ಟೆಸ್ಟ್ ಸರಣಿಯ ಎರಡನೇ ಹಾಗೂ ಕೊನೆಯ ಪಂದ್ಯ ಗುವಾಹಟಿಯ ಬರ್ಸಪಾರ ಸ್ಟೇಡಿಯಮ್ ನಲ್ಲಿ ಶನಿವಾರ ಆರಂಭಗೊಳ್ಳಲಿದೆ. ಆದರೆ, ಭಾರತ ತಂಡದ ನಾಯಕ ಶುಭಮನ್ ಗಿಲ್ ಗಾಯಾಳುವಾಗಿ ಈ ಪಂದ್ಯದಿಂದ ಹೊರಬಿದ್ದಿದ್ದಾರೆ. ನಾಯಕನಾಗಿ ಅವರ ಸ್ಥಾನವನ್ನು ರಿಶಭ್ ಪಂತ್ ವಹಿಸಿಕೊಳ್ಳಲಿದ್ದಾರೆ.
ಕೋಲ್ಕತಾದಲ್ಲಿ ನಡೆದ ಮೊದಲ ಟೆಸ್ಟ್ನ ವೇಳೆ ಗಿಲ್ ಕುತ್ತಿಗೆ ನೋವಿಗೆ ಒಳಗಾಗಿದ್ದರು. ಬಳಿಕ ಅವರನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿ ನಿಗಾದಲ್ಲಿ ಇಡಲಾಗಿತ್ತು.
ಅವರು ಬುಧವಾರ ತಂಡದೊಂದಿಗೆ ಗುವಾಹಟಿಗೆ ಪ್ರಯಾಣಿಸಿದ್ದರು. ಆದರೆ, ಗುರುವಾರ ಅಲ್ಲಿನ ಬರ್ಸಪಾರ ಸ್ಟೇಡಿಯಮ್ ನಲ್ಲಿ ನಡೆದ ಭಾರತದ ಹೊರಾಂಗಣ ನೆಟ್ ಅಭ್ಯಾಸದಲ್ಲಿ ಅವರು ಭಾಗವಹಿಸಿರಲಿಲ್ಲ. ಅವರು ಶುಕ್ರವಾರ ಮುಂಬೈಗೆ ಪ್ರಯಾಣಿಸಿದರು. ಅವರು 2-3 ದಿನಗಳ ಕಾಲ ಮುಂಬೈಯಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ ಎನ್ನಲಾಗಿದೆ.
ಆಡುವ ಹನ್ನೊಂದರ ತಂಡದಲ್ಲಿ, ಶುಭಮನ್ ಗಿಲ್ರ ಸ್ಥಾನವನ್ನು ಯಾರು ತುಂಬುತ್ತಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಪಂತ್, ‘‘ತಂಡ ಸಂಯೋಜನೆಯನ್ನು ನಾವು ನಾಳೆ ಪ್ರಕಟಿಸಲಿದ್ದೇವೆ. ಅವರ ಸ್ಥಾನವನ್ನು ತುಂಬುವ ಆಟಗಾರನ ಬಗ್ಗೆ ನಾವು ಈಗಾಗಲೇ ಬಹುತೇಕ ನಿರ್ಧರಿಸಿದ್ದೇವೆ ಮತ್ತು ಆ ಆಟಗಾರನೊಂದಿಗೆ ಮಾತನಾಡಿದ್ದೇವೆ’’ ಎಂದು ಹೇಳಿದರು.
ಕೋಲ್ಕತಾದಲ್ಲಿ ನಡೆದ ಮೊದಲ ಪಂದ್ಯವನ್ನು ದಕ್ಷಿಣ ಆಫ್ರಿಕ 30 ರನ್ಗಳಿಂದ ಗೆದ್ದಿದ್ದು, ಸರಣಿಯಲ್ಲಿ 1-0 ಅಂತರದಿಂದ ಮುಂದಿದೆ. ಹಾಗಾಗಿ, ಸರಣಿಯನ್ನು ಸಮಬಲಗೊಳಿಸಲು ಭಾರತ ಉತ್ಸುಕವಾಗಿದೆ.
ದಕ್ಷಿಣ ಆಫ್ರಿಕ ತಂಡವೂ ಗಾಯಾಳು ಸಮಸ್ಯೆಯಿಂದ ಬಳಲುತ್ತಿದೆ. ಸರಣಿ ಪೂರ್ವ ಅಭ್ಯಾಸದ ವೇಳೆ ಪಕ್ಕೆಲುಬು ಗಾಯಕ್ಕೆ ಒಳಗಾಗಿದ್ದ ತಂಡದ ಮುಂಚೂಣಿ ವೇಗಿ ಕಗಿಸೊ ರಬಡ ಇನ್ನೂ ಚೇತರಿಸಿಕೊಂಡಿಲ್ಲ. ಹಾಗಾಗಿ, ಎರಡನೇ ಪಂದ್ಯಕ್ಕೂ ಅವರು ಲಭಿಸುವುದಿಲ್ಲ.
►ಪಿಚ್ ವರದಿ
ಗುವಾಹಟಿ ಪಿಚ್ಚನ್ನು ಸಾಮಾನ್ಯವಾಗಿ ಬ್ಯಾಟಿಂಗ್ಸ್ನೇಹಿ ಎಂಬುದಾಗಿ ಪರಿಗಣಿಸಲಾಗಿದೆ. ಇಲ್ಲಿನ ಪಂದ್ಯಗಳಲ್ಲಿ ಹೆಚ್ಚು ರನ್ಗಳು ದಾಖಲಾಗುತ್ತಿವೆ. ಮುಂಜಾನೆಯ ತೇವಾಂಶ ಮತ್ತು ಶೀತಲ ವಾತಾವರಣವು ವೇಗದ ಬೌಲರ್ ಗಳಿಗೆ, ಮುಖ್ಯವಾಗಿ ಮೊದಲ ಕೆಲವು ಗಂಟೆಗಳಲ್ಲಿ ಸ್ವಿಂಗ್ ಒದಗಿಸಬಹುದು. ಎರಡೂ ತಂಡಗಳಲ್ಲಿ ಉತ್ತಮ ವೇಗದ ಬೌಲರ್ ಗಳು ಇರುವುದರಿಂದ ಅಗ್ರ ಕ್ರಮಾಂಕದ ಬ್ಯಾಟರ್ ಗಳು ಹೊಸ ಚೆಂಡನ್ನು ಎದುರಿಸುವಾಗ ಸವಾಲು ಎದುರಿಸಬಹುದು.
ಬೌಲರ್ ಗಳಿಗೆ ಚೆಂಡಿನಲ್ಲಿ ಹೆಚ್ಚುವರಿ ಚಲನೆ ಸಿಗಬಹುದು. ಇದು ಅವರಿಗೆ ಬೇಗನೇ ವಿಕೆಟ್ ಗಳನ್ನು ಉರುಳಿಸಲು ನೆರವು ನೀಡಬಹುದು.
►ಹವಾಮಾನ ಮುನ್ಸೂಚನೆ
ಗುವಾಹಟಿಯಲ್ಲಿ ನವೆಂಬರ್ ತಿಂಗಳು ಆಹ್ಲಾದಕರವಾಗಿರುತ್ತದೆ. ಹಗಲಿನ ಸರಾಸರಿ ಉಷ್ಣತೆ 27 ಡಿಗ್ರಿ ಸೆಲ್ಸಿಯಸ್ ಇದ್ದರೆ, ರಾತ್ರಿಯ ಉಷ್ಣತೆ 18 ಡಿಗ್ರಿ ಸೆಲ್ಸಿಯಸ್ವರೆಗೆ ಕುಸಿಯಬಹುದು.
ಮಳೆ ವಿರಳವಾಗಿರುತ್ತದೆ ಮತ್ತು ದಿನಕ್ಕೆ ಒಂದು ಮಳೆ ಬರುವ ಸಾಧ್ಯತೆಯಿರುತ್ತದೆ. ತೇವಾಂಶವು 82 ಶೇಕಡದಷ್ಟಿದ್ದು, ಪರಿಸ್ಥಿತಿಯು ಸಾಮಾನ್ಯವಾಗಿ ಕ್ರಿಕೆಟ್ಗೆ ಸೂಕ್ತವಾಗಿರುತ್ತದೆ.
ಇಲ್ಲಿ ದಿನದಾಟವು ಸಾಮಾನ್ಯಕ್ಕಿಂತ ಅರ್ಧ ಗಂಟೆ ಮುಂಚಿತವಾಗಿ, ಅಂದರೆ ಬೆಳಗ್ಗೆ 9 ಗಂಟೆಗೆ ಆರಂಭವಾಗುತ್ತದೆ. ಆ ಮೂಲಕ ಆಟಗಾರರು ಸಹಜ ಬೆಳಕನ್ನು ಪರಿಣಾಮಕಾರಿಯಾಗಿ ಬಳಸಬಹುದಾಗಿದೆ.
►ಸಂಭಾವ್ಯ ಆಡುವ 11ರ ತಂಡಗಳು
ದಕ್ಷಿಣ ಆಫ್ರಿಕ: ಏಡನ್ ಮರ್ಕ್ರಾಮ್, ರಯಾನ್ ರಿಕೆಲ್ಟನ್, ವಿಯಾನ್ ಮಲ್ಡರ್, ಟೋನಿ ಡಿ ರೊರ್ಝಿ, ಟೆಂಬ ಬವುಮ (ನಾಯಕ), ಡೆವಾಲ್ಡ್ ಬ್ರೆವಿಸ್, ಟ್ರೈಸ್ಟನ್ ಸ್ಟಬ್ಸ್, ಕೈಲ್ ವೆರೇನ್ (ವಿಕೆಟ್ ಕೀಪರ್), ಕೇಶವ ಮಹಾರಾಜ, ಸೈಮನ್ ಹಾರ್ಮರ್, ಮಾರ್ಕೊ ಜಾನ್ಸನ್.
ಭಾರತ: ಯಶಸ್ವಿ ಜೈಸ್ವಾಲ್, ಕೆ.ಎಲ್. ರಾಹುಲ್, ಸಾಯಿ ಸುದರ್ಶನ್, ರಿಶಭ್ ಪಂತ್ (ನಾಯಕ ಹಾಗೂ ವಿಕೆಟ್ ಕೀಪರ್), ರವೀಂದ್ರ ಜಡೇಜ, ಧ್ರುವ ಜೂರೆಲ್, ವಾಶಿಂಗ್ಟನ್ ಸುಂದರ್, ನಿತೀಶ್ ರಾಣಾ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮುಹಮ್ಮದ್ ಸಿರಾಜ್.







