ನಾಳೆ ಡಿ.6ರಂದು ಸರಣಿ ನಿರ್ಣಾಯಕ ಮೂರನೇ ಏಕದಿನ ಪಂದ್ಯ; ಟ್ರೋಫಿ ಗೆಲ್ಲಲು ಭಾರತ-ದಕ್ಷಿಣ ಆಫ್ರಿಕಾ ಹಣಾಹಣಿ

Photo Credit : PTI
ವಿಶಾಖಪಟ್ಟಣ, ಡಿ.5: ಭಾರತ ಹಾಗೂ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಗಳು ಶನಿವಾರ ಕೊನೆಯ ಏಕದಿನ ಪಂದ್ಯವನ್ನಾಡಲು ಸಜ್ಜಾಗಿದ್ದು, ಸದ್ಯ ಮೂರು ಪಂದ್ಯಗಳ ಸರಣಿಯು 1-1ರಿಂದ ಸಮಬಲದಲ್ಲಿದೆ. ವಿಶಾಖಪಟ್ಟಣದಲ್ಲಿ ನಡೆಯಲಿರುವ ಪಂದ್ಯವು ಸರಣಿ ವಿಜೇತರನ್ನು ನಿರ್ಧರಿಸಲಿದೆ. ಉಭಯ ತಂಡಗಳು ಈಗಾಗಲೇ ಆಡಿರುವ ಎರಡೂ ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದವು.
ರಾಂಚಿಯಲ್ಲಿ ನಡೆದಿದ್ದ ಸರಣಿಯ ಮೊದಲ ಪಂದ್ಯವನ್ನು ಭಾರತ ತಂಡ ಗೆದ್ದುಕೊಂಡಿತ್ತು. ರಾಯ್ಪುರದಲ್ಲಿ ನಡೆದಿದ್ದ ಎರಡನೇ ಏಕದಿನ ಪಂದ್ಯವನ್ನು ಜಯಿಸಿದ್ದ ದಕ್ಷಿಣ ಆಫ್ರಿಕಾ ಸರಣಿಯನ್ನು ಸಮಬಲಗೊಳಿಸಿತ್ತು.
ಮೊದಲೆರಡು ಪಂದ್ಯಗಳಲ್ಲಿ ರನ್ ಹೊಳೆಯೇ ಹರಿದಿದ್ದು, ಪಿಚ್ ಬ್ಯಾಟರ್ ಗಳ ಸ್ನೇಹಿಯಾಗಿತ್ತು. ಈ ಗರಿಷ್ಠ ಮೊತ್ತದ ಪಂದ್ಯಗಳಲ್ಲಿ ಹಲವು ದಾಖಲೆಗಳು ಪತನಗೊಂಡಿವೆ.
ದ್ವಿತೀಯ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು 359 ರನ್ ಗುರಿಯನ್ನು ಯಶಸ್ವಿಯಾಗಿ ಚೇಸ್ ಮಾಡಿತ್ತು. ಏಕದಿನ ಕ್ರಿಕೆಟ್ ನಲ್ಲಿ ಭಾರತ ವಿರುದ್ಧ ಮೊದಲ ಬಾರಿ ಈ ಸಾಧನೆ ಮಾಡಿತ್ತು. ಭಾರತ ತಂಡವು ಮೊದಲ ಪಂದ್ಯದಲ್ಲಿ 8 ವಿಕೆಟ್ ಗಳ ನಷ್ಟಕ್ಕೆ 349 ರನ್ ಗಳಿಸಿತ್ತು. ಈ ಮೂಲಕ ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಎರಡನೇ ಗರಿಷ್ಠ ಸ್ಕೋರ್ ಗಳಿಸಿತ್ತು. ಆ ನಂತರ 2ನೇ ಪಂದ್ಯದಲ್ಲಿ 5 ವಿಕೆಟ್ ಗಳ ನಷ್ಟಕ್ಕೆ 358 ರನ್ ಗಳಿಸಿ ಹೊಸ ದಾಖಲೆ ನಿರ್ಮಿಸಿತ್ತು.
ಭಾರತ ತಂಡವು 2021-22ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ದ್ವಿಪಕ್ಷೀಯ ಸರಣಿಯ ವೇಳೆ ಟೆಸ್ಟ್ ಹಾಗೂ ಏಕದಿನ ಸರಣಿ ಎರಡನ್ನೂ ಕಳೆದುಕೊಂಡಿತ್ತು. ಆದರೆ ಸ್ವದೇಶದಲ್ಲಿ 1986-87ರ ನಂತರ ಎರಡೂ ಸರಣಿಗಳನ್ನು ಸೋತಿಲ್ಲ. 1986-87ರಲ್ಲಿ ಪಾಕಿಸ್ತಾನ ತಂಡವು ಟೆಸ್ಟ್ನಲ್ಲಿ 1-0 ಹಾಗೂ ಏಕದಿನ ಪಂದ್ಯದಲ್ಲಿ 5-1 ಅಂತರದಿಂದ ಜಯ ಸಾಧಿಸಿತ್ತು.
ದಕ್ಷಿಣ ಆಫ್ರಿಕಾ ತಂಡವು ಅಪರೂಪದ ಡಬಲ್ ಸಾಧನೆಗೈಯುವ ಅದಮ್ಯ ವಿಶ್ವಾಸದೊಂದಿಗೆ ವಿಶಾಖಪಟ್ಟಣಕ್ಕೆ ಆಗಮಿಸಿದೆ. ಭಾರತದಲ್ಲಿ ನಡೆಯಲಿರುವ ಏಕದಿನ ಪಂದ್ಯದಲ್ಲಿ ಮಂಜಿನ ಹನಿಯು ಗೆಲುವು-ಸೋಲಿನಲ್ಲಿ ಪ್ರಮುಖ ಪಾತ್ರವಹಿಸಲಿದೆ.
ಸತತ 20 ಬಾರಿ ಟಾಸ್ ನಲ್ಲಿ ಸೋತಿರುವ ಭಾರತ ತಂಡವು ಈ ಬಾರಿ ಟಾಸ್ ಗೆಲ್ಲುವ ವಿಶ್ವಾಸದಲ್ಲಿದೆ. 2023ರ ಏಕದಿನ ವಿಶ್ವಕಪ್ ನ ಸೆಮಿ ಫೈನಲ್ ನಲ್ಲಿ ಕೊನೆಯ ಬಾರಿ ಟಾಸ್ ಗೆದ್ದಿತ್ತು.
►ಟೀಮ್ ನ್ಯೂಸ್
ಎರಡು ಬಾರಿ ಟಾಸ್ ಸೋತ ಹೊರತಾಗಿಯೂ ಮೊದಲ ಪಂದ್ಯವನ್ನು ಜಯಿಸಿ, ಎರಡನೇ ಪಂದ್ಯವನ್ನು ಕೂದಲೆಳೆ ಅಂತರದಿಂದ ಸೋತಿರುವ ಭಾರತ ತಂಡದ ಆಡುವ 11ರ ಬಳಗದಲ್ಲಿ ಯಾವುದೇ ಬದಲಾವಣೆಯಾಗುವ ಸಾಧ್ಯತೆಯಿಲ್ಲ. ಋತುರಾಜ್ ಗಾಯಕ್ವಾಡ್ ಎರಡನೇ ಏಕದಿನ ಪಂದ್ಯದಲ್ಲಿ ಶತಕ ಗಳಿಸಿ ನಾಲ್ಕನೇ ಕ್ರಮಾಂಕಕ್ಕೆ ನ್ಯಾಯ ಒದಗಿಸಿದ್ದಾರೆ. ಪ್ರಸಿದ್ಧ ಕೃಷ್ಣ ಎರಡನೇ ಏಕದಿನ ಪಂದ್ಯದಲ್ಲಿ ದುಬಾರಿ ಬೌಲರ್ ಆಗಿದ್ದರು. ಆದರೆ, ಭಾರತ ತಂಡದಲ್ಲಿ ಬದಲಿ ಬೌಲರ್ ಲಭ್ಯವಿಲ್ಲ. ಸ್ಪೆಷಲಿಷ್ಟ್ ಬೌಲರ್ ಬದಲಿಗೆ ಆಲ್ ರೌಂಡರ್ ರನ್ನು ಆಡಿಸುವ ಸಾಧ್ಯತೆ ಇಲ್ಲ.
ಎರಡನೇ ಏಕದಿನ ಪಂದ್ಯದ ವೇಳೆ ದಕ್ಷಿಣ ಆಫ್ರಿಕಾ ತಂಡದ ಇಬ್ಬರು ಆಟಗಾರರಾದ ನಾಂಡ್ರೆ ಬರ್ಗೆರ್ ಹಾಗೂ ಟೋನಿ ಡಿ ರೆರ್ಝಿ ಗಾಯಗೊಂಡಿದ್ದರು. ಈ ಇಬ್ಬರು ಮೂರನೇ ಪಂದ್ಯ ಆಡುವ ಸಾಧ್ಯತೆ ಇಲ್ಲ. ಈ ಇಬ್ಬರನ್ನು ಕಾಡುತ್ತಿರುವ ಮಂಡಿರಜ್ಜು ಸಮಸ್ಯೆ ಶೀಘ್ರ ಗುಣಮುಖವಾಗುವ ಸಾಧ್ಯತೆ ಇಲ್ಲ.ಹೀಗಾಗಿ ಬರ್ಗೆರ್ ಹಾಗೂ ಟೋನಿ ಡಿ ರೆರ್ಝಿ ಬದಲಿಗೆ ಒಟ್ನೀಲ್ ಬಾರ್ಟ್ಮನ್ ಹಾಗೂ ರಯಾನ್ ರಿಕೆಲ್ಟನ್ ಆಡುವ ನಿರೀಕ್ಷೆ ಇದೆ.
►ಪಿಚ್ ಹಾಗೂ ವಾತಾವರಣ
ವಿಶಾಖಪಟ್ಟಣದಲ್ಲಿ ನಡೆದ ಕಳೆದ ಎರಡು ಪಂದ್ಯಗಳಲ್ಲಿ ಭಾರತ ಏಕರೂಪದ ಪ್ರದರ್ಶನ ನೀಡಿಲ್ಲ. 2019ರ ಡಿಸೆಂಬರ್ ನಲ್ಲಿ ವೆಸ್ಟ್ಇಂಡೀಸ್ ವಿರುದ್ಧ 387 ರನ್ ಗಳಿಸಿದ್ದ ಭಾರತ ತಂಡವು 2023ರ ಮಾರ್ಚ್ ನಲ್ಲಿ ಆಸ್ಟ್ರೇಲಿಯ ತಂಡದ ಎದುರು 117 ರನ್ ಗೆ ಆಲೌಟಾಗಿತ್ತು. ವಿಶಾಖಪಟ್ಟಣದ ತಾಪಮಾನವು ರಾಂಚಿ ಹಾಗೂ ರಾಯ್ಪುರಕ್ಕಿಂತ ಹೆಚ್ಚಾಗಿದೆ. ಆದರೆ ಇದು ಕ್ರಿಕೆಟಿಗೆ ಆಹ್ಲಾದಕರವಾಗಿರಲಿದೆ.
►ತಂಡಗಳು
ಭಾರತ(ಸಂಭಾವ್ಯ): 1.ಯಶಸ್ವಿ ಜೈಸ್ವಾಲ್, 2. ರೋಹಿತ್ ಶರ್ಮಾ, 3. ವಿರಾಟ್ ಕೊಹ್ಲಿ, 4. ಋತುರಾಜ್ ಗಾಯಕ್ವಾಡ್, 5. ಕೆ.ಎಲ್.ರಾಹುಲ್(ನಾಯಕ, ವಿಕೆಟ್ ಕೀಪರ್), 6. ವಾಶಿಂಗ್ಟನ್ ಸುಂದರ್, 7. ರವೀಂದ್ರ ಜಡೇಜ, 8. ಹರ್ಷಿತ್ ರಾಣಾ, 9. ಕುಲದೀಪ ಯಾದವ್, 10. ಅರ್ಷದೀಪ ಸಿಂಗ್, 11. ಪ್ರಸಿದ್ಧ ಕೃಷ್ಣ
ದಕ್ಷಿಣ ಆಫ್ರಿಕಾ(ಸಂಭಾವ್ಯ): 1. ಏಡೆನ್ ಮರ್ಕ್ರಮ್, 2. ಕ್ವಿಂಟನ್ ಡಿಕಾಕ್(ವಿಕೆಟ್ ಕೀಪರ್),3. ಟೆಂಬಾ ಬವುಮಾ(ನಾಯಕ), 4. ಮ್ಯಾಥ್ಯೂ ಬ್ರೀಝ್ಕೆ, 5. ರಯಾನ್ ರಿಕೆಲ್ಟನ್, 6. ಡೆವಾಲ್ಡ್ ಬ್ರೆವಿಸ್, 7. ಮಾರ್ಕೊ ಜಾನ್ಸನ್, 8. ಕಾರ್ಬಿನ್ ಬಾಷ್, 9. ಕೇಶವ ಮಹಾರಾಜ್, 10.ಲುಂಗಿ ಗಿಡಿ, 11. ಒಟ್ನೀಲ್ ಬಾರ್ಟ್ಮನ್
ಪಂದ್ಯ ಆರಂಭದ ಸಮಯ: ಮಧ್ಯಾಹ್ನ 1:30







