ಏಶ್ಯ ಕಪ್ಗೆ ಭಾರತೀಯ ತಂಡ ಪ್ರಕಟ: 17 ಸದಸ್ಯರ ತಂಡಕ್ಕೆ ಮರಳಿದ ರಾಹುಲ್, ಶ್ರೇಯಸ್ ಅಯ್ಯರ್
ರೋಹಿತ್ ಶರ್ಮ ನಾಯಕ, ಹಾರ್ದಿಕ್ ಪಾಂಡ್ಯ ಉಪನಾಯಕ

Photo: PTI
ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಸೋಮವಾರ ಏಕದಿನ ಏಶ್ಯ ಕಪ್ ಪಂದ್ಯಾವಳಿಗಾಗಿ 17 ಸದಸ್ಯರ ಭಾರತೀಯ ತಂಡವನ್ನು ಪ್ರಕಟಿಸಿದೆ. ಗಾಯದಿಂದ ಬಳಲುತ್ತಿದ್ದ ಬ್ಯಾಟರ್ಗಳಾದ ಕೆ.ಎಲ್. ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ತಂಡಕ್ಕೆ ವಾಪಸಾಗಿದ್ದಾರೆ.
ಅದೇ ವೇಳೆ, ಐರ್ಲ್ಯಾಂಡ್ನಲ್ಲಿ ನಡೆಯುತ್ತಿರುವ ದ್ವಿಪಕ್ಷೀಯ ಟ್ವೆಂಟಿ20 ಸರಣಿಯಲ್ಲಿ ಪ್ರವಾಸಿ ಭಾರತ ತಂಡದ ನಾಯಕತ್ವ ವಹಿಸಿರುವ ಜಸ್ಪ್ರೀತ್ ಬುಮ್ರಾ ಕೂಡ 50 ಓವರ್ ಗಳ ಕ್ರಿಕೆಟ್ ಮಾದರಿಗೆ ಮರಳಿದ್ದಾರೆ. ಐರ್ಲ್ಯಾಂಡ್ ವಿರುದ್ಧದ ಎರಡು ಪಂದ್ಯಗಳಲ್ಲಿ ತನ್ನ ದೈಹಿಕ ಕ್ಷಮತೆಯನ್ನು ಬುಮ್ರಾ ಸಾಬೀತುಪಡಿಸಿದ ಆಯ್ಕೆಗಾರರು ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದಾರೆ.
ಮುಖ್ಯಸ್ಥ ಅಜಿತ್ ಅಗರ್ಕರ್ ನೇತೃತ್ವದಲ್ಲಿ ಹೊಸದಿಲ್ಲಿಯಲ್ಲಿ ಆಯ್ಕೆಗಾರರ ಮಂಡಳಿಯ ಸಭೆ ನಡೆದ ಬಳಿಕ ತಂಡವನ್ನು ಪ್ರಕಟಿಸಲಾಯಿತು.
ಸಭೆಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಗರ್ಕರ್ ಮತ್ತು ತಂಡದ ನಾಯಕ ರೋಹಿತ್ ಶರ್ಮ ತಂಡವನ್ನು ಪ್ರಕಟಿಸಿದರು.
ತೊಡೆಯ ಗಾಯದಿಂದಾಗಿ ಮೂರು ತಿಂಗಳ ಕಾಲ ತಂಡದಿಂದ ಹೊರಗಿದ್ದ ರಾಹುಲ್ ತಂಡಕ್ಕೆ ಮರಳಿರುವರಾದರೂ, ಅವರ ಗಾಯ ಸಂಪೂರ್ಣವಾಗಿ ಗುಣವಾಗಿಲ್ಲ. ಹಾಗಾಗಿ ಅವರು ಆಡುವ 11ರ ತಂಡದಲ್ಲಿ ಸ್ಥಾನ ಪಡೆಯುವುದು ಖಚಿತವಾಗಿಲ್ಲ.
ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರವಾಗಿ ಆಡಿ ಮಿಂಚಿದ್ದ ತಿಲಕ್ ವರ್ಮ ಮತ್ತು ಪ್ರಸಿದ್ಧ ಕೃಷ್ಣ 17ರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಸಂಜು ಸ್ಯಾಮ್ಸನ್ರನ್ನು ಬದಲಿ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ರಾಹುಲ್ರ ಗಾಯಗ ಬಗ್ಗೆ ಮಾತನಾಡಿದ ಅಗರ್ಕರ್, “ಈಗ ಅವರಲ್ಲಿರುವುದು ಮೂಲ ಗಾಯವಲ್ಲ. ಸಣ್ಣ ನೋವು ಅಷ್ಟೆ. ಅದಕ್ಕಾಗಿಯೇ ಸಂಜು ಶ್ರೀಲಂಕಾಗೆ ಹೋಗುತ್ತಿದ್ದಾರೆ. ರಾಹುಲ್ ಕ್ಷಮತೆ ಹೊಂದುತ್ತಾರೆ ಎಂದು ನಾವು ಭಾವಿಸಿದ್ದೇವೆ. ಏಶ್ಯ ಕಪ್ನ ಮೊದಲ ಪಂದ್ಯಕ್ಕೆ ಅವರು ಲಭ್ಯರಾಗದಿದ್ದರೂ, ಎರಡು ಅಥವಾ ಮೂರನೇ ಪಂದ್ಯಕ್ಕೆ ಅವರು ಲಭ್ಯರಾಗಬಹುದು. ಶ್ರೇಯಸ್ ಅಯ್ಯರ್ ಸಂಪೂರ್ಣವಾಗಿ ದೈಹಿಕ ಕ್ಷಮತೆ ಹೊಂದಿದ್ದಾರೆ’’ ಎಂದು ಹೇಳಿದರು.
ಏಶ್ಯ ಕಪ್ ಪಂದ್ಯಾವಳಿಯು ಆಗಸ್ಟ್ 30ರಂದು ಪಾಕಿಸ್ತಾನದಲ್ಲಿ ಆರಂಭಗೊಳ್ಳಲಿದೆ. ಮೊದಲ ಪಂದ್ಯವು ಮುಲ್ತಾನ್ನಲ್ಲಿ ಪಾಕಿಸ್ತಾನ ಮತ್ತು ನೇಪಾಳ ತಂಡಗಳ ನಡುವೆ ನಡೆಯಲಿದೆ.
ಭಾರತವು ತನ್ನ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ. ಅದರ ಮೊದಲ ಪಂದ್ಯವು ಸೆಪ್ಟಂಬರ್ 2ರಂದು ಕ್ಯಾಂಡಿಯಲ್ಲಿ ನಡೆಯಲಿದೆ.
‘ಎ’ ಗುಂಪಿನಲ್ಲಿ ಭಾರತ, ಪಾಕಿಸ್ತಾನ ಮತ್ತು ನೇಪಾಳ ತಂಡಗಳಿದ್ದರೆ, ‘ಬಿ’ ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ತಂಡಗಳಿವೆ.
ಭಾರತ ತಂಡ: ರೋಹಿತ್ ಶರ್ಮ(ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್, ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜ, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಮುಹಮ್ಮದ್ ಸಿರಾಜ್, ಮುಹಮ್ಮದ್ ಶಮಿ, ಇಶಾನ್ ಕಿಶನ್, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮ ಮತ್ತು ಪ್ರಸಿದ್ಧ ಕೃಷ್ಣ.
ಅಶ್ವಿನ್, ಚಾಹಲ್ ಹೊರಗೆ
ಏಶ್ಯ ಕಪ್ನಲ್ಲಿ ಆಡುವ ಭಾರತೀಯ ತಂಡದಿಂದ ಹಿರಿಯ ಸ್ಪಿನ್ನರ್ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ಯುಝ್ವೇಂದ್ರ ಚಾಹಲ್ರನ್ನು ಹೊರಗಿಡಲಾಗಿದೆ.
ಅವರ ಬದಲಿಗೆ, ಆಯ್ಕೆಗಾರರು ಎಡಗೈ ಸ್ಪಿನ್ನರ್ಗಳಾದ ಅಕ್ಷರ್ ಪಟೇಲ್, ರವೀಂದ್ರ ಜಡೇಜ ಮತ್ತು ಕುಲದೀಪ್ ಯಾದವ್ಗೆ ಮಣೆ ಹಾಕಿದ್ದಾರೆ.
ಇದಕ್ಕೆ ಕಾರಣ ನೀಡಿದ ಬಿಸಿಸಿಐ ಆಯ್ಕೆ ಮಂಡಳಿಯ ಮುಖ್ಯಸ್ಥ ಅಜಿತ್ ಅಗರ್ಕರ್, “ಅಕ್ಷರ್ ಪಟೇಲ್ ಉತ್ತಮ ನಿರ್ವಹಣೆ ನೀಡಿದ್ದಾರೆ. ಅವರು ಬ್ಯಾಟಿಂಗ್ ಕೂಡ ಮಾಡಬಲ್ಲರು. ಕುಲದೀಪ್ ಸಿಂಗ್ ಈವರೆಗೆ ಉತ್ತಮ ನಿರ್ವಹಣೆಯನ್ನು ನೀಡುತ್ತಾ ಬಂದಿದ್ದಾರೆ. ಹಾಗಾಗಿ, ಯಾರಾದರೊಬ್ಬರು ಹೊರ ಹೋಗಲೇ ಬೇಕು. ಚಾಹಲ್ಗಿಂತ ಕುಲದೀಪ್ ಸ್ವಲ್ಪ ಮುಂದಿದ್ದಾರೆ’’ ಎಂದು ಹೇಳಿದರು.







