ಏಕದಿನ ಕ್ರಿಕೆಟ್ | ನಾಯಕನಾಗಿ ಆಡಿದ ಮೊದಲ ಪಂದ್ಯದಲ್ಲಿ ಸೋತ ಶುಭಮನ್ ಗಿಲ್

Photo: ICC/X
ಪರ್ತ್, ಅ.19: ಭಾರತದ ಏಕದಿನ ಕ್ರಿಕೆಟ್ ತಂಡದ ನಾಯಕನಾಗಿ ಆಡಿರುವ ತನ್ನ ಮೊದಲ ಪಂದ್ಯದಲ್ಲಿ ಶುಭಮನ್ ಗಿಲ್ ಸೋಲನುಭವಿಸಿದ್ದಾರೆ. ಆಸ್ಟ್ರೇಲಿಯ ವಿರುದ್ಧ ರವಿವಾರ ನಡೆದ 3 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಗಿಲ್ ನಾಯಕತ್ವದ ಭಾರತ ತಂಡವು 7 ವಿಕೆಟ್ಗಳ ಅಂತರದಿಂದ ಸೋಲುಂಡಿದೆ.
ಈ ಮೂಲಕ ಗಿಲ್ ಅವರು ವಿರಾಟ್ ಕೊಹ್ಲಿ ಅವರ ಹೆಜ್ಜೆ ಅನುಸರಿಸಿದರು. ತನ್ನ ಮೊದಲ ಪಂದ್ಯದಲ್ಲಿ ಸೋತ ಭಾರತೀಯ ನಾಯಕರ ಅನಪೇಕ್ಷಿತ ದಾಖಲೆಯ ಪಟ್ಟಿಗೆ ಗಿಲ್ ಸೇರ್ಪಡೆಯಾದರು.
ಮಳೆಯಿಂದಾಗಿ 26 ಓವರ್ಗಳಿಗೆ ಕಡಿತಗೊಳಿಸಲ್ಪಟ್ಟ ಪಂದ್ಯದಲ್ಲಿ ಭಾರತದ ಅಗ್ರ ಸರದಿಯು ಭಾರೀ ವೈಫಲ್ಯ ಕಂಡಿತು. ಹೀಗಾಗಿ ಗಿಲ್ ನಾಯಕತ್ವದಲ್ಲಿ ಭಾರತಕ್ಕೆ ಗೆಲುವು ಮರೀಚಿಕೆಯಾಯಿತು.
‘‘ಪವರ್ ಪ್ಲೇನಲ್ಲಿ 3 ವಿಕೆಟ್ಗಳನ್ನು ಕಳೆದುಕೊಂಡ ನಂತರ ಪಂದ್ಯವನ್ನು ಆಡುವುದು ತುಂಬಾ ಕಷ್ಟಕರ. ಈ ಪಂದ್ಯದಿಂದ ನಾವು ಸಾಕಷ್ಟು ಕಲಿತ್ತಿದ್ದೇವೆ. ಸಾಕಷ್ಟು ಸಕಾರಾತ್ಮಕ ಅಂಶವೂ ಲಭಿಸಿದೆ’’ ಎಂದು ಗಿಲ್ ಹೇಳಿದರು.
ಭಾರತ ತಂಡವು ಈ ವಾರ ಅಡಿಲೇಡ್ ಹಾಗೂ ಸಿಡ್ನಿಯಲ್ಲಿ ಇನ್ನೆರಡು ಏಕದಿನ ಪಂದ್ಯಗಳನ್ನು ಆಡಲಿದೆ. ಆ ನಂತರ ಅ.29ರಂದು 5 ಪಂದ್ಯಗಳ ಟಿ-20 ಸರಣಿಯನ್ನು ಆಡಲಿದೆ.
500ನೇ ಅಂತರ್ರಾಷ್ಟ್ರೀಯ ಪಂದ್ಯವನ್ನಾಡಿದ ಭಾರತದ 5ನೇ ಬ್ಯಾಟರ್ ರೋಹಿತ್
ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ ತನ್ನ ದೇಶದ ಪರ 500ನೇ ಅಂತರ್ರಾಷ್ಟ್ರೀಯ ಪಂದ್ಯವನ್ನಾಡಿದ 5ನೇ ಬ್ಯಾಟರ್ ಎನಿಸಿಕೊಂಡು ಇತಿಹಾಸ ನಿರ್ಮಿಸಿದ್ದಾರೆ. ಆಸ್ಟ್ರೇಲಿಯದ ವಿರುದ್ಧ ರವಿವಾರ ನಡೆದ ಮೊದಲ ಏಕದಿನ ಪಂದ್ಯದ ವೇಳೆ ಈ ಮೈಲಿಗಲ್ಲು ತಲುಪಿದರು.
ಇದರೊಂದಿಗೆ ರೋಹಿತ್ ಅವರು ಸಚಿನ್ ತೆಂಡುಲ್ಕರ್(664 ಪಂದ್ಯಗಳು), ವಿರಾಟ್ ಕೊಹ್ಲಿ(551 ಪಂದ್ಯಗಳು), ಎಂ.ಎಸ್. ಧೋನಿ(538 ಪಂದ್ಯಗಳು)ಹಾಗೂ ರಾಹುಲ್ ದ್ರಾವಿಡ್(509 ಪಂದ್ಯಗಳು)ಅವರನ್ನೊಳಗೊಂಡ ಭಾರತೀಯರ ಪಟ್ಟಿಗೆ ಸೇರ್ಪಡೆಯಾದರು. ಈ ಎಲ್ಲ ಆಟಗಾರರು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು 500ಕ್ಕೂ ಅಧಿಕ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ 500ನೇ ಪಂದ್ಯವನ್ನಾಡಿದ 11ನೇ ಆಟಗಾರ ರೋಹಿತ್ ಶರ್ಮಾ.
38ರ ಹರೆಯದ ರೋಹಿತ್ ರವಿವಾರ ತನ್ನ 274ನೇ ಏಕದಿನ ಪಂದ್ಯವನ್ನಾಡಿದರು. 67 ಟೆಸ್ಟ್ ಹಾಗೂ 159 ಟಿ-20 ಪಂದ್ಯಗಳನ್ನೂ ಆಡಿದ್ದಾರೆ. ಕಳೆದ ವರ್ಷ ಜೂನ್ನಲ್ಲಿ ಭಾರತ ತಂಡ ವಿಶ್ವಕಪ್ ಜಯಿಸಿದ ನಂತರ ಟಿ-20 ಕ್ರಿಕೆಟ್ನಿಂದ ನಿವೃತ್ತಿಯಾಗಿದ್ದರು. ಈ ವರ್ಷಾರಂಭದಲ್ಲಿ ಟೆಸ್ಟ್ ಕ್ರಿಕೆಟಿಗೆ ವಿದಾಯ ಹೇಳಿದ್ದರು.
ಈ ವರ್ಷದ ಮಾರ್ಚ್ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ಆಡಿದ ನಂತರ ರೋಹಿತ್ ಆಸ್ಟ್ರೇಲಿಯ ವಿರುದ್ಧ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆಡಿ ಅಂತರ್ರಾಷ್ಟ್ರೀಯ ಕ್ರಿಕೆಟಿಗೆ ವಾಪಸಾದರು.
ರೋಹಿತ್ ಭಾರತದ ಪರ ಅತಿ ಹೆಚ್ಚು ಟಿ-20 ಪಂದ್ಯವನ್ನಾಡಿದ ದಾಖಲೆ ಹೊಂದಿದ್ದಾರೆ.
ಅಂತರ್ರಾಷ್ಟ್ರೀಯ ಪಂದ್ಯಗಳ ಸಾರ್ವಕಾಲಿಕಪಟ್ಟಿಯಲ್ಲಿ ತೆಂಡುಲ್ಕರ್(664 ಪಂದ್ಯಗಳು) ಮೊದಲ ಸ್ಥಾನದಲ್ಲಿದ್ದರೆ, ಮಹೇಲ ಜಯವರ್ಧನೆ(652), ಕುಮಾರ ಸಂಗಕ್ಕರ(594), ಸನತ್ ಜಯಸೂರ್ಯ(586), ರಿಕಿ ಪಾಂಟಿಂಗ್(560), ವಿರಾಟ್ ಕೊಹ್ಲಿ(551*), ಎಂ.ಎಸ್.ಧೋನಿ(538), ಶಾಹೀದ್ ಅಫ್ರಿದಿ(524), ಜಾಕಸ್ ಕಾಲಿಸ್(519) ಹಾಗೂ ರಾಹುಲ್ ದ್ರಾವಿಡ್(509) ಅವರಿದ್ದಾರೆ.







