2029, 2031ರ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ ಶಿಪ್ ಆತಿಥ್ಯಕ್ಕೆ ಭಾರತದಿಂದ ಬಿಡ್ : ಫೆಡರೇಶನ್ ವಕ್ತಾರ ಆದಿಲ್ ಸುಮರಿವಾಲಾ

ಎಎಫ್ಐ ವಕ್ತಾರ ಆದಿಲ್ ಸುಮರಿವಾಲಾ | Photo Credit: R.V. Moorthy
ಬೆಂಗಳೂರು: 2029 ಮತ್ತು 2031ರ ಎರಡೂ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ ಶಿಪ್ ಗಳ ಆತಿಥ್ಯಕ್ಕೆ ಭಾರತವು ಬಿಡ್ ಸಲ್ಲಿಸಲಿದೆ ಎಂದು ಭಾರತೀಯ ಅತ್ಲೆಟಿಕ್ಸ್ ಫೆಡರೇಶನ್ (ಎಎಫ್ಐ)ನ ವಕ್ತಾರ ಆದಿಲ್ ಸುಮರಿವಾಲಾ ರವಿವಾರ ಹೇಳಿದ್ದಾರೆ. ಬಿಡ್ಡಿಂಗ್ ಪ್ರಕ್ರಿಯೆಯು ಈ ವರ್ಷದ ಉತ್ತರಾರ್ಧದಲ್ಲಿ ನಡೆಯಲಿದ್ದು, ಎರಡರ ಪೈಕಿ ಒಂದಾದರೂ ಕ್ರೀಡಾಕೂಟದ ಆತಿಥ್ಯ ಪಡೆಯುವ ನಿಟ್ಟಿನಲ್ಲಿ ಈ ಕಸರತ್ತು ನಡೆಸಲಾಗುತ್ತಿದೆ.
ಕ್ರೀಡೆಯ ಜಾಗತಿಕ ಆಡಳಿಯ ಮಂಡಳಿ ವರ್ಲ್ಡ್ ಅತ್ಲೆಟಿಕ್ಸ್ ಕ್ರೀಡಾಕೂಟದ ಎರಡೂ ಆವೃತ್ತಿಗಳ ಆತಿಥೇಯರನ್ನು 2026 ಸೆಪ್ಟಂಬರ್ ನಲ್ಲಿ ಘೋಷಿಸುವುದು. ಸದಸ್ಯ ರಾಷ್ಟ್ರಗಳು ಆತಿಥ್ಯ ವಹಿಸುವ ಇಚ್ಛೆಯನ್ನು ವ್ಯಕ್ತಪಡಿಸುವ ಕೊನೆಯ ದಿನಾಂಕ ಈ ವರ್ಷದ ಅಕ್ಟೋಬರ್ 1 ಆಗಿರುತ್ತದೆ.
‘‘ನಾವು 2029 ಮತ್ತು 2031ರಲ್ಲಿ ನಡೆಯಲಿರುವ ಎರಡೂ ಚಾಂಪಿಯನ್ ಶಿಪ್ ಗಳ ಆತಿಥ್ಯಕ್ಕೆ ಬಿಡ್ ಸಲ್ಲಿಸಲಿದ್ದೇವೆ. ಎರಡೂ ಪಂದ್ಯಾವಳಿಗಳ ಆತಿಥ್ಯವನ್ನು ಒಟ್ಟಿಗೇ ಘೋಷಿಸಲಾಗುತ್ತದೆ. ಅವುಗಳ ಪೈಕಿ ಯಾವುದು ಸಿಕ್ಕಿದರೂ ಸರಿ’’ ಎಂದು ವರ್ಲ್ಡ್ ಅತ್ಲೆಟಿಕ್ಸ್ನ ಉಪಾಧ್ಯಕ್ಷ ಹಾಗೂ ಭಾರತೀಯ ಅತ್ಲೆಟಿಕ್ಸ್ ಫೆಡರೇಶನ್ನ ಮಾಜಿ ಅಧ್ಯಕ್ಷ ಸುಮಾರಿವಾಲಾ ಪಿಟಿಐಯೊಂದಿಗೆ ಮಾತನಾಡುತ್ತಾ ಹೇಳಿದರು.
‘‘ಬಿಡ್ ಪ್ರಕ್ರಿಯೆ ಆರಂಭಗೊಳ್ಳಲು ಇನ್ನೂ ಸ್ವಲ್ಪ ಸಮಯವಿದೆ. ನಾವು ಬಿಡ್ಗಳನ್ನು ಸಲ್ಲಿಸಲಿದ್ದೇವೆ’’ ಎಂದು ನೀರಜ್ ಚೋಪ್ರಾ ಕ್ಲಾಸಿಕ್ ಇಂಟರ್ನ್ಯಾಶನಲ್ ಜಾವೆಲಿನ್ ಎಸೆತ ಕ್ರಿಡಾಕೂಟವನ್ನು ವೀಕ್ಷಿಸಲು ಆಗಮಿಸಿರುವ ಸುಮಾರಿವಾಲಾ ತಿಳಿಸಿದರು.
2036ರ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಆಯೋಜಿಸುವ ಆಕಾಂಕ್ಷೆಯನ್ನು ಹೊಂದಿರುವ ಭಾರತ, ಅದಕ್ಕಿಂತಲೂ ಮೊದಲು ತನ್ನ ವಿಶ್ವಾಸಾರ್ಹತೆಯನ್ನು ಸಾಬೀತುಪಡಿಸಲು ಹಲವು ಉನ್ನತ ದರ್ಜೆಯ ಅಂತರರಾಷ್ಟ್ರೀಯ ಕ್ರೀಡಾಕೂಟಗಳನ್ನು ಏರ್ಪಡಿಸುವ ಯೋಜನೆಯನ್ನು ಹೊಂದಿದೆ.