ಭಾರತದಲ್ಲಿ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ಸ್ ಆಯೋಜನೆ: ಬಿಡ್ ಸಲ್ಲಿಸುವ ಬಗ್ಗೆ ಇನ್ನೆರಡು ದಿನಗಳಲ್ಲಿ ನಿರ್ಧಾರ; ಎಎಫ್ಐ ಅಧ್ಯಕ್ಷ

ಹೊಸದಿಲ್ಲಿ, ಅ. 14: 2027ರಲ್ಲಿ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ಸ್ ಆಯೋಜಿಸಲು ಔಪಚಾರಿಕ ಬಿಡ್ ಸಲ್ಲಿಸುವ ಬಗ್ಗೆ ನಿರ್ಧರಿಸಲು ಭಾರತೀಯ ಅತ್ಲೆಟಿಕ್ಸ್ ಫೆಡರೇಶನ್ (ಎಎಫ್ಐ)ಗೆ ಇನ್ನೂ ಎರಡು ದಿನಗಳು ಬೇಕು ಎಂದು ಫೆಡರೇಶನ್ನ ಅಧ್ಯಕ್ಷ ಆದಿಲ್ ಸುಮಾರಿವಾಲ ಶನಿವಾರ ಹೇಳಿದ್ದಾರೆ.
ಈ ಬಾರಿಯ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ಸ್ ಇತ್ತೀಚೆಗೆ ಹಂಗೇರಿಯ ಬುಡಾಪೆಸ್ಟ್ನಲ್ಲಿ ನಡೆದಿದೆ. ಮುಂದಿನ ಆವೃತ್ತಿಯ ಚಾಂಪಿಯನ್ಶಿಪ್ಸ್ 2025ರಲ್ಲಿ ಜಪಾನ್ನಲ್ಲಿ ನಡೆಯಲಿದೆ. 2027ರಲ್ಲಿ ಪಂದ್ಯಾವಳಿಯ ಆತಿಥ್ಯ ವಹಿಸಲು ಭಾರತ ಉತ್ಸುಕವಾಗಿದೆ ಎಂದು ಹೇಳಲಾಗಿದೆ.
‘‘ನಾವು ಔಪಚಾರಿಕ ಬಿಡ್ ಸಲ್ಲಿಸಿಲ್ಲ’’ ಎಂದು ಪಿಟಿಐಯೊಂದಿಗೆ ಮಾತನಾಡಿದ ಸುಮಾರಿವಾಲ ಹೇಳಿದರು.
‘‘ಈ ಬಗ್ಗೆ ನಾವು ಆಂತರಿಕವಾಗಿ ಚರ್ಚಿಸುತ್ತಿದ್ದೇವೆ ಹಾಗೂ ಮುಂದಿನ ಎರಡು ದಿನಗಳಲ್ಲಿ ನಾವು ಈ ಬಗ್ಗೆ ಅಂತಿಮ ತೀರ್ಮಾನವೊಂದನ್ನು ತೆಗೆದುಕೊಳ್ಳುತ್ತೇವೆ’’ ಎಂದು ಸುಮಾರಿವಾಲ ತಿಳಿಸಿದರು.
2036ರ ಒಲಿಂಪಿಕ್ಸ್ನ ಆತಿಥ್ಯಕ್ಕೆ ಔಪಚಾರಿಕ ಬಿಡ್ ಸಲ್ಲಿಸಲು ಭಾರತ ಚಿಂತಿಸುತ್ತಿದೆ ಎನ್ನಲಾಗಿದೆ. ಭಾರತದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯುವುದನ್ನು ನೋಡಲು ನಾನು ಬಯಸುತ್ತೇನೆ ಎಂದು ವಿಶ್ವ ಅತ್ಲೆಟಿಕ್ಸ್ ಅಧ್ಯಕ್ಷ ಹಾಗೂ ಅಂತರ್ರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ)ಯ ಸದಸ್ಯ ಸೆಬಾಸ್ಟಿಯನ್ ಕೋ ಇದೇ ಸಂದರ್ಭದಲ್ಲಿ ಹೇಳಿದರು.
‘‘ಭಾರತ ಒಂದು ಅದ್ಭುತ ದೇಶವಾಗಿದೆ. ಇಲ್ಲಿ ಕ್ರೀಡೆಗಳು ಅತ್ಯುತ್ತಮವಾಗಿ ರೂಪುಗೊಳ್ಳುತ್ತಿವೆ. ಇದನ್ನು ಪ್ರತಿಯೊಬ್ಬರೂ ಒಪ್ಪುತ್ತಾರೆ ಎಂದು ನನಗೆ ಅನಿಸುತ್ತಿದೆ. ಆದರೆ, ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಾಗಿರುವುದು ಅಂತರ್ರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ’’ ಎಂದು ಅವರು ಅಭಿಪ್ರಾಯಪಟ್ಟರು.







