ಇಂಗ್ಲೆಂಡ್ ಏಕದಿನ ಸರಣಿಗೆ ಮರಳಿದ ಕೊಹ್ಲಿ; ಜೈಸ್ವಾಲ್ಗೆ ಕೊಕ್, ಬೂಮ್ರಾ–ಅಕ್ಷರ್ ಗೆ ಅವಕಾಶ

ವಿರಾಟ್ ಕೊಹ್ಲಿ |Photo Credit : PTI
ಮುಂಬೈ: ಮುಂದಿನ ತಿಂಗಳು ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿದೆ. ಶುಭಮನ್ ಗಿಲ್ ನಾಯಕತ್ವದ ತಂಡದಲ್ಲಿ ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತೆ ಸ್ಥಾನ ಪಡೆದಿದ್ದು, ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ತಂಡದಿಂದ ಹೊರಗುಳಿದಿದ್ದಾರೆ.
ಐಪಿಎಲ್ 2026ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಶಸ್ತಿ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದ ವಿರಾಟ್ ಕೊಹ್ಲಿ, ಬಳಿಕ ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದರು. ಇದೇ ಕಾರಣದಿಂದ ಅವರು ಇತ್ತೀಚೆಗೆ ಮುಕ್ತಾಯಗೊಂಡ ಅಫ್ಗಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಿರಲಿಲ್ಲ. ಇದೀಗ ಗಾಯದಿಂದ ಚೇತರಿಸಿಕೊಂಡಿರುವ ಅವರು ಇಂಗ್ಲೆಂಡ್ ಸರಣಿಗೆ ತಂಡಕ್ಕೆ ಮರಳಿದ್ದಾರೆ.
ಅಫ್ಗಾನಿಸ್ತಾನ ವಿರುದ್ಧದ ಸರಣಿಯ ಕೊನೆಯ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಆಕರ್ಷಕ ಶತಕ ಬಾರಿಸಿ ಗಮನ ಸೆಳೆದಿದ್ದರು. ಆದರೂ, ಮೊದಲ ಆಯ್ಕೆಯ ಆಟಗಾರ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ ಹಿನ್ನೆಲೆಯಲ್ಲಿ ಜೈಸ್ವಾಲ್ ಅವರಿಗೆ ಸ್ಥಾನ ಕೈತಪ್ಪಿದೆ. ಉಳಿದಂತೆ ಅಫ್ಗಾನಿಸ್ತಾನ ಸರಣಿಗೆ ಆಯ್ಕೆಯಾಗಿದ್ದ ಬಹುತೇಕ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ.
ಕೆಲಸದ ಹೊರೆ ನಿರ್ವಹಣೆಯ ಹಿನ್ನೆಲೆಯಲ್ಲಿ ವಿಶ್ರಾಂತಿ ಪಡೆದಿದ್ದ ಅನುಭವಿ ವೇಗಿ ಜಸ್ಪ್ರೀತ್ ಬೂಮ್ರಾ ಕೂಡ ತಂಡಕ್ಕೆ ಮರಳಿದ್ದಾರೆ. ಇದೇ ವೇಳೆ, ಸ್ಪಿನ್ನರ್ ಹರ್ಷ್ ದುಬೆ ಬದಲಿಗೆ ಅನುಭವಿ ಆಲ್ರೌಂಡರ್ ಅಕ್ಷರ್ ಪಟೇಲ್ ಅವರನ್ನು ಆಯ್ಕೆ ಮಾಡಲಾಗಿದೆ.
ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಜುಲೈ 14ರಂದು ಎಡ್ಜ್ಬಾಸ್ಟನ್ ನಲ್ಲಿ, ಜುಲೈ 16ರಂದು ಸೋಫಿಯಾ ಗಾರ್ಡನ್ಸ್ ನಲ್ಲಿ ಹಾಗೂ ಜುಲೈ 19ರಂದು ಲಾರ್ಡ್ಸ್ ನಲ್ಲಿ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ.
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ:
ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಕೆ.ಎಲ್. ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ನಿತೀಶ್ ಕುಮಾರ್ ರೆಡ್ಡಿ, ಕುಲದೀಪ್ ಯಾದವ್, ಜಸ್ಪ್ರೀತ್ ಬೂಮ್ರಾ, ಹರ್ಷಿತ್ ರಾಣಾ, ಪ್ರಸಿದ್ಧ ಕೃಷ್ಣ, ಗುರ್ನೂರ್ ಬ್ರಾರ್ ಹಾಗೂ ಅರ್ಷದೀಪ್ ಸಿಂಗ್.






