ಇಂಗ್ಲೆಂಡ್ ಗೆ ಭಾರತದ ಅಂಡರ್-19 ಕ್ರಿಕೆಟ್ ತಂಡ ಪ್ರವಾಸ; ಆಯುಷ್ ನಾಯಕತ್ವದ ತಂಡದಲ್ಲಿ ವೈಭವ್ ಸೂರ್ಯವಂಶಿಗೆ ಸ್ಥಾನ

Photo: PTI
ಹೊಸದಿಲ್ಲಿ: ಮುಂಬರುವ ಇಂಗ್ಲೆಂಡ್ ಕ್ರಿಕೆಟ್ ಪ್ರವಾಸಕ್ಕಾಗಿ ಜೂನಿಯರ್ ಕ್ರಿಕೆಟ್ ಸಮಿತಿಯು ಭಾರತದ ಅಂಡರ್-19 ಕ್ರಿಕೆಟ್ ತಂಡಕ್ಕೆ 17ರ ಹರೆಯದ ಮುಂಬೈ ಓಪನರ್ ಆಯುಷ್ ಮ್ಹಾತ್ರೆ ಅವರನ್ನು ನಾಯಕರನ್ನಾಗಿ ನೇಮಿಸಿದೆ.
ಜೂನ್ 24ರಿಂದ ಜುಲೈ 23ರ ತನಕ ನಡೆಯಲಿರುವ ಇಂಗ್ಲೆಂಡ್ ಪ್ರವಾಸವು 50 ಓವರ್ಗಳ ಅಭ್ಯಾಸ ಪಂದ್ಯ, 5 ಪಂದ್ಯಗಳ ಸರಣಿಯ ಯೂತ್ ಏಕದಿನ ಸರಣಿ ಹಾಗೂ ಇಂಗ್ಲೆಂಡ್ ವಿರುದ್ಧ ಎರಡು ಚತುರ್ದಿನ ಪಂದ್ಯಗಳು ಒಳಗೊಂಡಿವೆ.
16 ಸದಸ್ಯರ ತಂಡದಲ್ಲಿ ಐಪಿಎಲ್ ನಲ್ಲಿ ತನ್ನ ಸ್ಫೋಟಕ ಬ್ಯಾಟಿಂಗ್ ನಿಂದ ಮಿಂಚುತ್ತಿರುವ 14ರ ಬಾಲಕ ವೈಭವ್ ಸೂರ್ಯವಂಶಿ ಅವರನ್ನು ಸೇರಿಸಿಕೊಳ್ಳಲಾಗಿದೆ. ರಾಜಸ್ಥಾನ ರಾಯಲ್ಸ್ ಪರ ಈ ತನಕ 7 ಪಂದ್ಯಗಳನ್ನು ಆಡಿರುವ ವೈಭವ್ 206.56ರ ಸ್ಟ್ರೈಕ್ ರೇಟ್ ನಲ್ಲಿ ಒಟ್ಟು 252 ರನ್ ಗಳಿಸಿದ್ದಾರೆ.
ಕಳೆದ ತಿಂಗಳು 14ನೇ ವರ್ಷಕ್ಕೆ ಕಾಲಿಟ್ಟಿರುವ ವೈಭವ್ ಕಳೆದ ವರ್ಷ ನಡೆದಿದ್ದ ಐಪಿಎಲ್ ಆಟಗಾರರ ಹರಾಜಿನ ವೇಳೆ 1.1 ಕೋ.ರೂ.ಗೆ ರಾಜಸ್ಥಾನ ತಂಡದೊಂದಿಗೆ ಸಹಿ ಹಾಕಿದ್ದರು. ಎಪ್ರಿಲ್ ನಲ್ಲಿ ಐಪಿಎಲ್ ನಲ್ಲಿ ಭಾಗಿಯಾದ ಅತ್ಯಂತ ಕಿರಿಯ ವಯಸ್ಸಿನ ಆಟಗಾರ ಎನಿಸಿಕೊಂಡಿದ್ದರು. ತನ್ನ ಚೊಚ್ಚಲ ಪಂದ್ಯದ ಮೊದಲ ಎಸೆತವನ್ನು ಸಿಕ್ಸರ್ಗೆ ಅಟ್ಟಿದ ವೈಭವ್ ತಕ್ಷಣವೇ ಎಲ್ಲರ ಗಮನ ಸೆಳೆದಿದ್ದರು. ಆ ನಂತರ 35 ಎಸೆತಗಳಲ್ಲಿ ಶತಕ, 15 ಎಸೆತಗಳಲ್ಲಿ 40 ರನ್ ಹಾಗೂ ಹೊಸದಿಲ್ಲಿಯಲ್ಲಿ ಸಿಎಸ್ಕೆ ವಿರುದ್ಧ ರಾಜಸ್ಥಾನ ತಂಡ 6 ವಿಕೆಟ್ಗಳಿಂದ ಗೆದ್ದಿರುವ ಪಂದ್ಯದಲ್ಲಿ 33 ಎಸೆತಗಳಲ್ಲಿ 57 ರನ್ ಗಳಿಸಿದ್ದರು.
ಇದೇ ವೇಳೆ, ಆಯುಷ್ ಮ್ಹಾತ್ರೆ ಕೂಡ ಈ ವರ್ಷದ ಐಪಿಎಲ್ ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಸಿಎಸ್ಕೆ ಪರ 6 ಇನಿಂಗ್ಸ್ಗಳಲ್ಲಿ ಒಟ್ಟು 206 ರನ್ ಗಳಿಸಿದ್ದರು. ಇದರಲ್ಲಿ ಆರ್ಸಿಬಿ ವಿರುದ್ಧ 48 ಎಸೆತಗಳಲ್ಲಿ 94 ರನ್ ಕೂಡ ಸೇರಿದೆ.
ಐಪಿಎಲ್ ಪಂದ್ಯಾವಳಿಯ ಆರಂಭದಲ್ಲಿ ಆಯುಷ್ ಇಲ್ಲವೇ ವೈಭವ್ ಆಡುವ ಸ್ಪರ್ಧೆಯಲ್ಲಿ ಇರಲಿಲ್ಲ. ಚೆನ್ನೈ ಹಾಗೂ ರಾಜಸ್ಥಾನ ತಂಡಗಳ ನಾಯಕರು ಗಾಯಗೊಂಡ ಕಾರಣ ಈ ಇಬ್ಬರು ಅವಕಾಶ ಪಡೆದಿದ್ದರು. ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಗಾಯಗೊಂಡ ಹಿನ್ನೆಲೆಯಲ್ಲಿ 14ರ ಬಾಲಕ ವೈಭವ್ ಅವಕಾಶ ಪಡೆದಿದ್ದರು. ಗಾಯಕ್ವಾಡ್ ಗಾಯಗೊಂಡ ಕಾರಣ 17ರ ಹರೆಯದ ಆಯುಷ್ ಆಡುವ ಅವಕಾಶ ಪಡೆದಿದ್ದರು.
*ಭಾರತದ ಅಂಡರ್-19 ತಂಡ: ಆಯುಷ್ ಮ್ಹಾತ್ರೆ(ನಾಯಕ), ವೈಭವ್ ಸೂರ್ಯವಂಶಿ, ವಿಹಾನ್ ಮಲ್ಹೋತ್ರ, ಮೌಲ್ಯರಾಜಸಿನ್ಹ ಚಾವ್ಡಾ, ರಾಹುಲ್ ಕುಮಾರ್, ಅಭಿಜ್ಞನ್ ಕುಂಡು(ಉಪ ನಾಯಕ, ವಿಕೆಟ್ ಕೀಪರ್), ಹರ್ವಂಶ್ ಸಿಂಗ್(ವಿಕೆಟ್ ಕೀಪರ್), ಆರ್.ಎಸ್. ಅಂಬರೀಶ್, ಕನಿಷ್ಕ್ ಚೌಹಾಣ್, ಖಿಲನ್ ಪಟೇಲ್, ಹೆನಿಲ್ ಪಟೇಲ್, ಯುದ್ಧಜೀತ್ ಗುಹಾ, ಪ್ರಣಯ್ ರಾಘವೇಂದ್ರ, ಮುಹಮ್ಮದ್ ಎನಾನ್, ಆದಿತ್ಯ ರಾಣಾ, ಅನ್ಮೋಲ್ಜೀತ್ ಸಿಂಗ್.
*ಮೀಸಲು ಆಟಗಾರರು: ನಮನ್ ಪುಷ್ಪಕ್, ಡಿ.ದೀಪೇಶ್, ವೇದಾಂತ್ ತ್ರಿವೇದಿ, ವಿಕ್ಲಪ್ ತಿವಾರಿ, ಅಲಂಕೃತ್ ರಾಪೋಲ್.
*ವೇಳಾಪಟ್ಟಿ
ಜೂನ್ 24: 50 ಓವರ್ಗಳ ಅಭ್ಯಾಸ ಪಂದ್ಯ
ಜೂನ್ 27: ಮೊದಲ ಏಕದಿನ
ಜೂನ್ 30: ಎರಡನೇ ಏಕದಿನ
ಜುಲೈ 2: ಮೂರನೇ ಏಕದಿನ
ಜುಲೈ 5: ನಾಲ್ಕನೇ ಏಕದಿನ
ಜುಲೈ 7: ಐದನೇ ಏಕದಿನ
ಜುಲೈ 12-15: ಮೊದಲನೇ ಚತುರ್ದಿನ ಪಂದ್ಯ
ಜುಲೈ 20-23: ಎರಡನೇ ಚತುರ್ದಿನ ಪಂದ್ಯ







