ಭಾರತ-ಅಫ್ಘಾನಿಸ್ತಾನ ಟೆಸ್ಟ್ | ಚೊಚ್ಚಲ ಪಂದ್ಯದಲ್ಲೇ ಸುಥರ್ ಮಾರಕ ದಾಳಿ: ಅಫ್ಘಾನಿಸ್ತಾನ 152 ಕ್ಕೆ ಆಲೌಟ್

Photo credit: X/BCCI
ನ್ಯೂ ಚಂಡೀಗಢ: ಭಾರತ ಮತ್ತು ಅಫ್ಘಾನಿಸ್ತಾನ ತಂಡಗಳ ನಡುವೆ ನಡೆಯುತ್ತಿರುವ ಏಕೈಕ ಟೆಸ್ಟ್ ಕ್ರಿಕೆಟ್ ನಲ್ಲಿ ತಮ್ಮ ಚೊಚ್ಚಲ ಪಂದ್ಯದಲ್ಲೇ ಬೌಲಿಂಗ್ ನಲ್ಲಿ ಕೈಚಳಕ ತೋರಿದ ರಾಜಸ್ಥಾನದ ಪ್ರತಿಭೆ ಮಾನವ್ ಸುಥರ್ ದಾಳಿಗೆ ತತ್ತರಿಸಿದ ಅಫ್ಘಾನಿಸ್ತಾನ ತಂಡ ಕೇವಲ 152 ರನ್ ಗಳಿಗೆ ಆಲೌಟ್ ಆಗಿದೆ. 22 ಓವರ್ ಗಳನ್ನು ಬೌಲ್ ಮಾಡಿದ ಸುಥರ್, ಕೇವಲ 33 ರನ್ ನೀಡಿ ಆರು ವಿಕೆಟ್ ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು.
ನಿನ್ನೆ ಭಾರತ ತಂಡ ತನ್ನ ಮೊದಲ ಇನಿಂಗ್ಸ್ ನಲ್ಲಿ 8 ವಿಕೆಟ್ ಗಳ ನಷ್ಟಕ್ಕೆ 564 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಬಳಿಕ ಬ್ಯಾಟಿಂಗ್ ಗೆ ಇಳಿದಿದ್ದ ಅಫ್ಘಾನಿಸ್ತಾನ ತಂಡ, ದಿನದಾಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಇಂದು ಬ್ಯಾಟಿಂಗ್ ಪ್ರಾರಂಭಿಸಿದ ಅಫ್ಘಾನಿಸ್ತಾನ ತಂಡ, ಚೊಚ್ಚಲ ಪಂದ್ಯವಾಡುತ್ತಿರುವ ಸುಥರ್ ಹಾಗೂ ಪ್ರಸಿದ್ಧ್ ಕೃಷ್ಣ ಜೋಡಿಯ ಪರಿಣಾಮಕಾರಿ ಬೌಲಿಂಗ್ ಅನ್ನು ಎದುರಿಸಲಾಗದೆ ಕೇವಲ 152 ರನ್ ಗಳಿಗೆ ಆಲೌಟ್ ಆಗಿ ಫಾಲೋ ಆನ್ ಗೆ ಒಳಗಾಯಿತು.
ನಿನ್ನೆ ಕೇವಲ 21 ರನ್ ನೀಡಿ 3 ವಿಕೆಟ್ ಪಡೆದಿದ್ದ ಸುಥರ್, ಇಂದೂ ಕೂಡಾ ಮೂರು ವಿಕೆಟ್ ಗಳನ್ನು ಕಬಳಿಸಿದರು. ಅವರಿಗೆ ಉತ್ತಮ ಸಾಥ್ ನೀಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ ಕೂಡಾ ಕೇವಲ 37 ರನ್ ನೀಡಿ 3 ವಿಕೆಟ್ ಕಿತ್ತರು.
ಸ್ಕೋರ್:
ಭಾರತ – 564/8 ಡಿಕ್ಲೇರ್ಡ್
ಅಫ್ಘಾನಿಸ್ತಾನ – 152/10




