ಭಾರತ-ಆಸ್ಟ್ರೇಲಿಯಾ ಪಂದ್ಯಕ್ಕೆ ಮಳೆ ಅಡ್ಡಿ; 35 ಓವರ್ ಗೆ ಇಳಿಕೆ

Photo credit: PTI
ಪರ್ತ್: ರವಿವಾರ ಪರ್ತ್ ನಲ್ಲಿ ಪ್ರಾರಂಭಗೊಂಡಿರುವ ಭಾರತ-ಆಸ್ಟ್ರೇಲಿಯಾ ನಡುವಿನ ಪ್ರಥಮ ಏಕದಿನ ಪಂದ್ಯ ಎರಡನೆ ಬಾರಿ ಮಳೆಯ ಅಡಚಣೆ ಎದುರಿಸಿದ್ದು, ಪಂದ್ಯವನ್ನು ತಲಾ 35 ಓವರ್ ಗಳಿಗೆ ಇಳಿಕೆ ಮಾಡಲಾಗಿದೆ.
ಭಾರತ ತಂಡವು 11.5 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 37 ರನ್ ಗಳಿಸಿ ಪರದಾಡುತ್ತಿದ್ದಾಗ, ಎರಡನೆಯ ಬಾರಿ ಮಳೆ ಸುರಿದಿದ್ದರಿಂದ ಪಂದ್ಯ ಸ್ಥಗಿತಗೊಂಡಿತು. ಬಳಿಕ ಪಂದ್ಯವನ್ನು 35 ಓವರ್ ಗಳಿಗೆ ಇಳಿಕೆ ಮಾಡಲಾಗಿದ್ದು, ಪ್ರತಿ ಬೌಲರ್ ಗರಿಷ್ಠ ಏಳು ಓವರ್ ಗಳನ್ನು ಬೌಲ್ ಮಾಡಬಹುದಾಗಿದೆ.
ಈ ಹಂತದಲ್ಲಿ ಶ್ರೇಯಸ್ ಅಯ್ಯರ್ (6 ರನ್) ಹಾಗೂ ಅಕ್ಷರ್ ಪಟೇಲ್ (7 ರನ್) ಗಳಿಸಿ ಬ್ಯಾಟ್ ಮಾಡುತ್ತಿದ್ದರು. ಪಂದ್ಯ ಪುನಾರಂಭಗೊಂಡಾಗ, ತಮ್ಮ ಮೊತ್ತಕ್ಕೆ ಕೇವಲ 5 ರನ್ ಸೇರಿಸಲಷ್ಟೆ ಶಕ್ತರಾದ ಅಯ್ಯರ್, ಜೋಶ್ ಹೇಝಲ್ವುಡ್ ಬೌಲಿಂಗ್ ನಲ್ಲಿ ಜೋಶ್ ಫಿಲಿಪ್ ಗೆ ಕ್ಯಾಚಿತ್ತು ನಿರ್ಗಮಿಸಿದರು.
ಇದೀಗ 14 ರನ್ ಗಳಿಸಿರುವ ಅಕ್ಷರ್ ಪಟೇಲ್ ಹಾಗೂ 3 ರನ್ ಗಳಿಸಿರುವ ಕೆ.ಎಲ್.ರಾಹುಲ್ ಕ್ರೀಸಿನಲ್ಲಿದ್ದು, ತಂಡದ ಮೊತ್ತ 4 ವಿಕೆಟ್ ನಷ್ಟಕ್ಕೆ 52 ಆಗಿದೆ.





