ಮೊದಲ ಟ್ವೆಂಟಿ-20 ಪಂದ್ಯ : ಭಾರತ-ಆಸ್ಟ್ರೇಲಿಯ ಹಣಾಹಣಿ

Image Source: X
ಕ್ಯಾನ್ಬೆರ್ರಾ, ಅ.29: ಸ್ಫೋಟಕ ಬ್ಯಾಟಿಂಗ್ಗೆ ಖ್ಯಾತಿ ಪಡೆದಿರುವ ಸೂರ್ಯಕುಮಾರ್ ಯಾದವ್ ಬುಧವಾರ ನಡೆಯಲಿರುವ ಆತಿಥೇಯ ಆಸ್ಟ್ರೇಲಿಯ ಕ್ರಿಕೆಟ್ ತಂಡದ ವಿರುದ್ಧ ಮೊದಲ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮೊದಲಿನ ಲಯಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ. ಮಾತ್ರವಲ್ಲ ಟೀಮ್ ಇಂಡಿಯಾವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ.
ವಿಶ್ವದ ನಂ.1 ಹಾಗೂ 2ನೇ ತಂಡಗಳಾಗಿರುವ ಭಾರತ-ಆಸ್ಟ್ರೇಲಿಯ ನಡುವಿನ 5 ಪಂದ್ಯಗಳ ಟಿ-20 ಸರಣಿಯು ಮುಂದಿನ ವರ್ಷ ಫೆಬ್ರವರಿಯಲ್ಲಿ ಭಾರತ ಹಾಗೂ ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ಗೆ ಪೂರ್ವ ತಯಾರಿಯಾಗಿದೆ.
ಹಾಲಿ ಟಿ-20 ಚಾಂಪಿಯನ್ ಭಾರತ ತಂಡವು ಏಶ್ಯ ಕಪ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿತ್ತು. 2024ರಲ್ಲಿ ವಿಶ್ವಕಪ್ ಟ್ರೋಫಿ ಗೆದ್ದ ನಂತರ ಕೇವಲ 3 ಪಂದ್ಯಗಳಲ್ಲಿ ಸೋತಿದೆ.
ಏಕದಿನ ಸರಣಿಯಲ್ಲಿ ವಿಶ್ರಾಂತಿ ಪಡೆದಿದ್ದ ಭಾರತದ ಸ್ಟಾರ್ ವೇಗಿ ಜಸ್ಪ್ರಿತ್ ಬುಮ್ರಾ ಟಿ-20 ಸರಣಿಗೆ ಲಭ್ಯವಿದ್ದಾರೆ.
ಭಾರತ ಹಾಗೂ ಆಸ್ಟ್ರೇಲಿಯ ತಂಡಗಳು ಹಿಂದಿನ 10 ಟಿ-20 ಪಂದ್ಯಗಳ ಪೈಕಿ 8 ಪಂದ್ಯಗಳಲ್ಲಿ ಜಯ ಸಾಧಿಸಿ, ಕೇವಲ ಒಂದರಲ್ಲಿ ಸೋಲನುಭವಿಸಿವೆ. ಭಾರತವು ಒಂದು ಪಂದ್ಯದಲ್ಲಿ ಟೈ ಸಾಧಿಸಿದರೆ, ಆಸ್ಟ್ರೇಲಿಯ ಆಡಿರುವ ಒಂದು ಪಂದ್ಯವು ಮಳೆಗಾಹುತಿಯಾಗಿತ್ತು.ಹೀಗಾಗಿ ಸಮಬಲದ ಹೋರಾಟವನ್ನು ನಿರೀಕ್ಷಿಸಲಾಗುತ್ತಿದೆ.
ಸೂರ್ಯಕುಮಾರ್ ಇತ್ತೀಚೆಗಿನ ದಿನಗಳಲ್ಲಿ ರನ್ ಬರ ಎದುರಿಸುತ್ತಿರುವುದು ಕಳವಳದ ವಿಚಾರವಾಗಿದೆ. ಭಾರತ ತಂಡದ ನಾಯಕತ್ವವನ್ನು ವಹಿಸಿಕೊಂಡ ನಂತರ ಸೂರ್ಯಕುಮಾರ್ ಅವರು 29 ಪಂದ್ಯಗಳ ಪೈಕಿ 23ರಲ್ಲಿ ಗೆಲುವು ತಂದುಕೊಟ್ಟಿದ್ದಾರೆ.
ಸೂರ್ಯಕುಮಾರ್ ದಕ್ಷ ನಾಯಕತ್ವದಿಂದಾಗಿ ಭಾರತವು ದ್ವಿಪಕ್ಷೀಯ ಸರಣಿಯಲ್ಲಿ ಅಜೇಯ ದಾಖಲೆಯನ್ನು ಕಾಯ್ದುಕೊಂಡಿದ್ದಲ್ಲದೆ, ಇತ್ತೀಚೆಗೆ ಏಶ್ಯಕಪ್ ಟ್ರೋಫಿಯನ್ನು ಜಯಿಸಿತ್ತು.
ಆಸ್ಟ್ರೇಲಿಯ ವಿರುದ್ಧದ ಪ್ರಸಕ್ತ ಸರಣಿಯು ಮುಂದಿನ ವರ್ಷ ಆರಂಭವಾಗಲಿರುವ ಟಿ-20 ವಿಶ್ವಕಪ್ ಟೂರ್ನಿಗೆ ಭಾರತದ ನೈಜ ತಯಾರಿಯಾಗಿದೆ. ಜಾಗತಿಕ ಟೂರ್ನಿಗಿಂತ ಮೊದಲು ಭಾರತವು 15 ಪಂದ್ಯಗಳನ್ನು ಆಡಲಿದ್ದು, ಇದು ತಂಡದ ಸಿದ್ಧತೆಗೆ ನೆರವಾಗಲಿದೆ.
2022 ಹಾಗೂ 2024ರ ವಿಶ್ವಕಪ್ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿರುವ ಆಸ್ಟ್ರೇಲಿಯ ತಂಡವು ಈ ಬಾರಿಯ ವಿಶ್ವಕಪ್ನಲ್ಲಿ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದೆ. ಸದ್ಯ ಮಿಚೆಲ್ ಮಾರ್ಷ್ ನಾಯಕತ್ವದಲ್ಲಿ ಗಮನಾರ್ಹ ಪ್ರದರ್ಶನ ನೀಡುತ್ತಿದೆ.
ಪಿಚ್ ರಿಪೋರ್ಟ್:
ಕ್ಯಾನ್ಬೆರಾದ ಮನುಕಾ ಓವಲ್ ಪಿಚ್ ಸಾಮಾನ್ಯವಾಗಿ ನಿಧಾನಗತಿಯಲ್ಲಿ ವರ್ತಿಸಲಿದ್ದು ಬ್ಯಾಟರ್ಗಳಿಗೂ ನೆರವಾಗಲಿದೆ. ಈ ಮೈದಾನದಲ್ಲಿ ಎಲ್ಲ ಟಿ-20 ಪಂದ್ಯಗಳಲ್ಲಿ ಮೊದಲ ಇನಿಂಗ್ಸ್ ಸರಾಸರಿ ಸ್ಕೋರ್ ಸುಮಾರು 150. ಈ ಹಿಂದೆ ಭಾರತ-ಆಸ್ಟ್ರೇಲಿಯದ ನಡುವೆ ಈ ಮೈದಾನದಲ್ಲಿ 2020ರಲ್ಲಿ ಟಿ-20 ಪಂದ್ಯ ನಡೆದಿತ್ತು. ಆಗ ಭಾರತ ತಂಡವು 161 ರನ್ ಗಳಿಸಿದ್ದು, 11 ರನ್ನಿಂದ ರೋಚಕ ಜಯ ಸಾಧಿಸಿತ್ತು.
ಹವಾಮಾನ ಮುನ್ಸೂಚನೆ:
ಕ್ಯಾನ್ಬೆರ್ರಾದಲ್ಲಿ ವಾತಾವರಣ ತಂಪಾಗಿದೆ. ಸ್ವಲ್ಪಮಟ್ಟಿನ ಉಷ್ಣಾಂಶವಿದ್ದು, ಪಂದ್ಯದ ದಿನ ಸ್ವಲ್ಪ ಹೊತ್ತು ಮಳೆ ಬೀಳುವ ಸಾಧ್ಯತೆಯಿದೆ. ಪಂದ್ಯವು ಮೋಡ ಕವಿದ ವಾತಾವರಣದಲ್ಲಿ ನಡೆಯುವ ನಿರೀಕ್ಷೆ ಇದೆ.
ಟಿ-20 ಕ್ರಿಕೆಟ್ನಲ್ಲಿ ಭಾರತ-ಆಸ್ಟ್ರೇಲಿಯ ಹೆಡ್-ಟು-ಹೆಡ್:
2007ರಲ್ಲಿ ಮೊದಲ ಬಾರಿ ಟಿ-20 ಪಂದ್ಯವನ್ನು ಆಡಿದ ನಂತರ ಭಾರತ ಹಾಗೂ ಆಸ್ಟ್ರೇಲಿಯ ತಂಡಗಳು ಚುಟುಕು ಮಾದರಿಯ ಕ್ರಿಕೆಟ್ನಲ್ಲಿ 32 ಬಾರಿ ಮುಖಾಮಖಿಯಾಗಿವೆ. 20 ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತವು ಪ್ರಾಬಲ್ಯ ಸಾಧಿಸಿದೆ. ಆಸ್ಟ್ರೇಲಿಯವು 11 ಪಂದ್ಯದಲ್ಲಿ ಜಯ ದಾಖಲಿಸಿದ್ದು, ಒಂದು ಪಂದ್ಯ ಫಲಿತಾಂಶರಹಿತವಾಗಿದೆ.
32 ಪಂದ್ಯಗಳಲ್ಲಿ 12 ಪಂದ್ಯಗಳು ಆಸ್ಟ್ರೇಲಿಯ ನೆಲದಲ್ಲಿ ನಡೆದಿದೆ. ಇದರಲ್ಲಿ ಭಾರತವು 7ರಲ್ಲಿ ಜಯ ಸಾಧಿಸಿದ್ದು, ಕೇವಲ 4 ಪಂದ್ಯಗಳಲ್ಲಿ ಸೋತಿದೆ. ಈ ಮೂಲಕ ಆತಿಥೇಯರ ವಿರುದ್ಧ ಉತ್ತಮ ದಾಖಲೆ ಕಾಯ್ದುಕೊಂಡಿದೆ.
ಅಂಕಿ-ಅಂಶಗಳು:
ಕ್ಯಾನ್ಬೆರ್ರಾದಲ್ಲಿ ಐದು ಪುರುಷರ ಟಿ-20 ಪಂದ್ಯಗಳು ನಡೆದಿವೆ. 2022ರಲ್ಲಿ ಕೊನೆಯ ಬಾರಿ ಪಂದ್ಯ ನಡೆದಿದೆ.
ಭಾರತ ತಂಡ 2020ರಲ್ಲಿ ಕ್ಯಾನ್ಬೆರ್ರಾದಲ್ಲಿ ಆಸ್ಟ್ರೇಲಿಯ ವಿರುದ್ಧ ಆಡಿರುವ ಏಕೈಕ ಟಿ-20 ಪಂದ್ಯವನ್ನು ಜಯಿಸಿತ್ತು.
ಸೂರ್ಯಕುಮಾರ್ 14 ಟಿ-20 ಪಂದ್ಯಗಳಲ್ಲಿ ಅರ್ಧಶತಕವನ್ನು ಗಳಿಸಿಲ್ಲ.
ಆಸ್ಟ್ರೇಲಿಯ ತಂಡವು 2008ರಿಂದ ತಾಯ್ನಾಡಿನಲ್ಲಿ ಭಾರತ ತಂಡದ ಎದುರು ಟಿ-20 ಸರಣಿ ಗೆದ್ದಿಲ್ಲ.
ಮೊದಲ ಟಿ-20 ಪಂದ್ಯಕ್ಕೆ ಸಂಭಾವ್ಯ ಆಡುವ 11ರ ಬಳಗಗಳು:
ಆಸ್ಟ್ರೇಲಿಯ: ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್(ನಾಯಕ), ಜೋಶ್ ಇಂಗ್ಲಿಸ್(ವಿಕೆಟ್ಕೀಪರ್), ಮ್ಯಾಟ್ ಶಾರ್ಟ್, ಟಿಮ್ ಡೇವಿಡ್, ಮಿಚೆಲ್ ಓವನ್, ಮಾರ್ಕಸ್ ಸ್ಟೋಯಿನಿಸ್, ಕ್ಸೇವಿಯರ್ ಬಾರ್ಟ್ಲೆಟ್, ನಾಥನ್ ಎಲ್ಲಿಸ್, ಆ್ಯಡಮ್ ಝಂಪಾ, ಜೋಶ್ ಹೇಝಲ್ವುಡ್.
ಭಾರತ: ಶುಭಮನ್ ಗಿಲ್, ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್(ನಾಯಕ), ತಿಲಕ್ ವರ್ಮಾ, ಸಂಜು ಸ್ಯಾಮ್ಸನ್(ವಿಕೆಟ್ಕೀಪರ್), ಶಿವಂ ದುಬೆ, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಕುಲದೀಪ ಯಾದವ್, ಜಸ್ಪ್ರಿತ್ ಬುಮ್ರಾ, ವರುಣ್ ಚಕ್ರವರ್ತಿ.
ಪಂದ್ಯ ಆರಂಭದ ಸಮಯ: ಮಧ್ಯಾಹ್ನ 1:45
(ಭಾರತೀಯ ಕಾಲಮಾನ)







