ಐಸಿಸಿ ಮಹಿಳಾ ಏಕದಿನ ವಿಶ್ವಕಪ್ | ಆಸಿಸ್ ಗೆ ದಾಖಲೆಯ ಗೆಲುವು; ಭಾರತಕ್ಕೆ 3 ವಿಕೆಟ್ ಗಳ ಸೋಲು

Photo Credit : x/CricketNDTV
ವಿಶಾಖಪಟ್ಟಣಂ, ಅ. 12: ನಾಯಕಿ ಅಲೈಸಾ ಹೀಲಿ ಮತ್ತು ಮತ್ತು ಎಲೈಸ್ ಪೆರಿ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ರವಿವಾರ ಆಸ್ಟ್ರೇಲಿಯವು ಭಾರತವನ್ನು ಮೂರು ವಿಕೆಟ್ ಗಳ ಅಂತರದಿಂದ ಸೋಲಿಸಿ ಇತಿಹಾಸ ಸೃಷ್ಟಿಸಿದೆ.
ಗೆಲುವಿಗೆ ಭಾರತ ನೀಡಿರುವ 331 ರನ್ ಗಳ ಗುರಿಯು ಮಹಿಳಾ ಏಕದಿನ ಕ್ರಿಕೆಟ್ ನ ಈವರೆಗಿನ ಯಶಸ್ವಿಯಾಗಿ ಬೆನ್ನತ್ತಲ್ಪಟ್ಟ ಅತಿ ದೊಡ್ಡ ಗುರಿಯಾಗಿದೆ. ಅದನ್ನು ಆಸ್ಟ್ರೇಲಿಯವು ಇನ್ನೂ ಒಂದು ಓವರ್ ಬಾಕಿಯಿರುವಂತೆಯೇ ಯಶಸ್ವಿಯಾಗಿ ಬೆನ್ನತ್ತಿತು. ಈವರೆಗಿನ ಯಶಸ್ವಿಯಾಗಿ ಬೆನ್ನತ್ತಲ್ಪಟ್ಟ ಅತಿ ದೊಡ್ಡ ಗುರಿ 302 ರನ್ ಆಗಿತ್ತು. 2024ರಲ್ಲಿ ದಕ್ಷಿಣ ಆಫ್ರಿಕ ನೀಡಿದ ಈ ಗುರಿಯನ್ನು ಶ್ರೀಲಂಕಾ ಯಶಸ್ವಿಯಾಗಿ ಬೆನ್ನತ್ತಿತ್ತು.
ವಿಶಾಖಪಟ್ಟಣಂನ ಡಾ. ವೈ.ಎಸ್. ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ, ಆಸ್ಟ್ರೇಲಿಯವು 49 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 331 ರನ್ ಗಳಿಸಿತು.
ಶತಕ ಸಿಡಿಸಿದ ಆರಂಭಿಕ ಬ್ಯಾಟರ್ ಹಾಗೂ ನಾಯಕಿ ಅಲೈಸಾ ಹೀಲಿ ಆಸ್ಟ್ರೇಲಿಯದ ಗೆಲುವಿಗೆ ಸುಭದ್ರ ತಳಹದಿ ಹಾಕಿದರು. ಅವರು 107 ಎಸೆತಗಳಲ್ಲಿ 142 ರನ್ಗಳನ್ನು ಸಿಡಿಸಿದರು.
ಅಂತಿಮ ಹಂತದಲ್ಲಿ ವಿಕೆಟ್ಗಳು ಉರುಳುತ್ತಿದ್ದಾಗ ತಳವೂರಿ ನಿಂತ ಎಲೈಸ್ ಪೆರಿ 52 ಎಸೆತಗಳಲ್ಲಿ 47 ರನ್ ಗಳಿಸಿ ತಂಡದ ವಿಜಯವನ್ನು ಖಾತರಿಪಡಿಸಿದರು.
ಭಾರತದ ಶ್ರೀಚರಣಿ ಮೂರು ವಿಕೆಟ್ಗಳನ್ನು ಕಿತ್ತರು.ಇದಕ್ಕೂ ಮೊದಲು, ಟಾಸ್ ಸೋತ ಭಾರತವು ಮೊದಲು ಬ್ಯಾಟಿಂಗ್ ಮಾಡಿ ಆರಂಭಿಕರಾದ ಪ್ರತೀಕಾ ರಾವಲ್ ಮತ್ತು ಸ್ಮತಿ ಮಂಧಾನರ ಭರ್ಜರಿ ಅರ್ಧ ಶತಕಗಳ ನೆರವಿನಿಂದ 48.5 ಓವರ್ಗಳಲ್ಲಿ ಎಲ್ಲಾ ವಿಕೆಟ್ಗಳನ್ನು ಕಳೆದುಕೊಂಡು 330 ರನ್ಗಳ ಬೃಹತ್ ಎನ್ನಬಹುದಾದ ಮೊತ್ತವನ್ನೇ ಪೇರಿಸಿತು.
ಆರಂಭಿಕರಾದ ಪ್ರತೀಕಾ ರಾವಲ್ (96 ಎಸೆತಗಳಲ್ಲಿ 75) ಮತ್ತು ಸ್ಮೃತಿ ಮಂಧಾನ (66 ಎಸೆತಗಳಲ್ಲಿ 80) ಭಾರತಕ್ಕೆ ಸದೃಢ ಅಡಿಪಾಯವನ್ನೇ ಹಾಕಿದರು. ಅವರು ಮೊದಲನೇ ವಿಕೆಟ್ಗೆ 155 ರನ್ಗಳನ್ನು ಸೇರಿಸಿದರು.
ಸ್ಮತಿ ಮಂಧಾನ ಒಂದು ಕ್ಯಾಲೆಂಡರ್ ವರ್ಷದಲ್ಲಿ ಮಹಿಳಾ ಏಕದಿನ ಪಂದ್ಯಗಳಲ್ಲಿ 1,000 ರನ್ಗಳನ್ನು ಶೇಖರಿಸಿದ ಮೊದಲ ಆಟಗಾರ್ತಿಯಾಗಿ ಇತಿಹಾಸ ನಿರ್ಮಿಸಿದರು.
ಬಳಿಕ ಹರ್ಲೀನ್ ದೇವಲ್ (38), ನಾಯಕಿ ಹರ್ಮನ್ಪ್ರೀತ್ ಕೌರ್ (22), ಜೆಮಿಮಾ ರೋಡ್ರಿಗಸ್ (21 ಎಸೆತಗಳಲ್ಲಿ 33 ರನ್) ಮತ್ತು ರಿಚಾ ಘೋಷ್ (22 ಎಸೆತಗಳಲ್ಲಿ 32 ರನ್) ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ಆರಂಭಿಕರ ಪರಂಪರೆಯನ್ನು ಮುಂದುವರಿಸಿದರು.
ಅವರು ಮಧ್ಯಮ ಮತ್ತು ಕೊನೆಯ ಓವರ್ಗಳಲ್ಲಿ ಭಾರತದ ರನ್ ಗಳಿಕೆಯ ವೇಗವನ್ನು ಕಾಯ್ದುಕೊಂಡರು.
ಆದರೆ, ಆಸ್ಟ್ರೇಲಿಯ ಪಂದ್ಯದ ಕೊನೆಯ ಹಂತದಲ್ಲಿ ಪ್ರತಿ ಹೋರಾಟ ನೀಡಿತು. ಅದು 48.5 ಓವರ್ಗಳಲ್ಲಿ ಭಾರತವನ್ನು ಆಲೌಟ್ ಮಾಡಿತು.
ಅನಾಬೆಲ್ ಸದರ್ಲ್ಯಾಂಡ್ ಬೌಲಿಂಗ್ನಲ್ಲಿ ಮಿಂಚಿದರು. ಬಿಗು ಬೌಲಿಂಗ್ ನಡೆಸಿದ ಅವರು ಕೇವಲ 40 ರನ್ಗಳನ್ನು ನೀಡಿ ಐದು ವಿಕೆಟ್ಗಳನ್ನು ಉರುಳಿಸಿದರು. ಅದೇ ವೇಳೆ, ಸೋಫೀ ಮೊಲಿನೋಸ್ 75 ರನ್ಗಳನ್ನು ನೀಡಿದರಾದರೂ ಮೂರು ವಿಕೆಟ್ಗಳನ್ನು ಕಿತ್ತರು.







