ನಾಳೆ(ಜು.31)ಯಿಂದ ಭಾರತ-ಇಂಗ್ಲೆಂಡ್ 5ನೇ ಟೆಸ್ಟ್
ಆತಿಥೇಯ ನಾಯಕ ಬೆನ್ ಸ್ಟೋಕ್ಸ್ ಹೊರಗೆ; ಆತಿಥೇಯರಿಗೆ ಸರಣಿ ಸಮಬಲಗೊಳಿಸುವ ಅವಕಾಶ

Image credit: BCCI
ಲಂಡನ್, ಜು. 30: ಭಾರತ ಮತ್ತು ಆತಿಥೇಯ ಇಂಗ್ಲೆಂಡ್ ಕ್ರಿಕೆಟ್ ತಂಡಗಳ ನಡುವಿನ ಆ್ಯಂಡರ್ಸನ್-ತೆಂಡುಲ್ಕರ್ ಟ್ರೋಫಿ ಟೆಸ್ಟ್ ಸರಣಿಯ ಐದನೇ ಹಾಗೂ ಕೊನೆಯ ಪಂದ್ಯ ಗುರುವಾರ ಲಂಡನ್ನ ಕೆನಿಂಗ್ಟನ್ ಓವಲ್ ನಲ್ಲಿ ಆರಂಭಗೊಳ್ಳಲಿದೆ. ಈಗ ಭಾರತ 1-2 ಅಂತರದಿಂದ ಹಿಂದಿದ್ದು, ಕೊನೆಯ ಪಂದ್ಯದಲ್ಲಿ ಸರಣಿಯನ್ನು ಸಮಬಲಗೊಳಿಸುವ ಅವಕಾಶ ಅದಕ್ಕಿದೆ.
ಭುಜದ ಗಾಯದಿಂದ ಬಳಲುತ್ತಿರುವ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಸರಣಿ ನಿರ್ಣಾಯಕ ಟೆಸ್ಟ್ ನಿಂದ ಹೊರಬಿದ್ದಿದ್ದಾರೆ. ಈ ವಿಷಯವನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಬುಧವಾರ ಪ್ರಕಟಿಸಿದೆ. ನಿಯಮಿತ ನಾಯಕನ ಅನುಪಸ್ಥಿತಿಯಲ್ಲಿ, ಉಪ ನಾಯಕ ಓಲೀ ಪೋಪ್ ತಂಡವನ್ನು ಮುನ್ನಡೆಸಲಿದ್ದಾರೆ.
ಹಾಲಿ ಸರಣಿಯಲ್ಲಿ ಸ್ಟೋಕ್ಸ್ ವಿವಿಧ ದೈಹಿಕ ಕ್ಷಮತೆ ಕೊರತೆಯಿಂದ ಬಳಲುತ್ತಿದ್ದಾರೆ. ಈ ಸರಣಿಯಲ್ಲಿ ಅವರು 140 ಓವರ್ ಗಳನ್ನು ಬೌಲ್ ಮಾಡಿದ್ದಾರೆ. ಇದು ಸರಣಿಯೊಂದರಲ್ಲಿ ಅವರು ಬೌಲ್ ಮಾಡಿರುವ ಗರಿಷ್ಠ ಓವರ್ ಗಳಾಗಿವೆ. ಅವರು ಈ ಸರಣಿಯ ಗರಿಷ್ಠ ವಿಕೆಟ್ ಗಳಿಕೆದಾರರಾಗಿದ್ದಾರೆ. ಅವರು 17 ವಿಕೆಟ್ ಗಳನ್ನು ಈವರೆಗೆ ಪಡೆದಿದ್ದಾರೆ.
‘‘ಸರಣಿಯನ್ನು ಪೂರ್ಣಗೊಳಿಸಲು ಸಾಧ್ಯವಾಗದಿರುವುದಕ್ಕಾಗಿ ನನಗೆ ನಿರಾಶೆಯಾಗಿದೆ’’ ಎಂದು ಬುಧವಾರ ಪಂದ್ಯಪೂರ್ವ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ಟೋಕ್ಸ್ ಭಾವನಾತ್ಮಕವಾಗಿ ಹೇಳಿದರು.
‘‘ನನ್ನ ಭುಜದ ಸ್ನಾಯು ಸ್ವಲ್ಪ ಹರಿದಿದೆ. ಅದನ್ನು ಹೇಗೆ ಹೇಳುವುದು ಎಂದು ನನಗೆ ಗೊತ್ತಾಗುತ್ತಿಲ್ಲ. ಈ ಸಂಬಂಧ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಮುನ್ನ ಎಷ್ಟು ಸಾಧ್ಯವೋ ಅಷ್ಟು ಸಮಯವನ್ನು ನಾವು ತೆಗೆದುಕೊಂಡಿದ್ದೇವೆ’’ ಎಂದು 34 ವರ್ಷದ ಸ್ಟೋಕ್ಸ್ ಹೇಳಿದರು.
ಮ್ಯಾಂಚೆಸ್ಟರ್ನಲ್ಲಿ ನಡೆದ ನಾಲ್ಕನೇ ಟೆಸ್ಟ್ ನಲ್ಲಿ ಭಾರತೀಯ ಬ್ಯಾಟರ್ಗಳು ಉತ್ತಮ ನಿರ್ವಹಣೆ ನೀಡಿ ತಂಡವನ್ನು ಅಪಾಯದಿಂದ ಪಾರು ಮಾಡಿದ್ದಾರೆ. ಆದರೆ ಭಾರತೀಯ ಬೌಲಿಂಗ್ ಘಟಕವು ಕಳಪೆ ನಿರ್ವಹಣೆ ನೀಡಿದೆ. ಚೊಚ್ಚಲ ಪಂದ್ಯ ಆಡಿರುವ ಅಂಶುಲ್ ಕಾಂಬೋಜ್ ವೇಗವನ್ನು ಪಡೆಯುವಲ್ಲಿ ಪರದಾಡಿದರು. ಇತರ ಬೌಲರ್ ಗಳಿಗೆ ನಿಖರತೆಯನ್ನು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ.
ಗಾಯಗೊಂಡಿರುವ ವಿಕೆಟ್ ಕೀಪರ್-ಬ್ಯಾಟರ್ ರಿಶಭ್ ಪಂತ್ ಅವರ ಸ್ಥಾನವನ್ನು ಓವಲ್ ನಲ್ಲಿ ಧ್ರುವ ಜೂರೆಲ್ ತುಂಬಲಿದ್ದಾರೆ.
ಮ್ಯಾಂಚೆಸ್ಟರ್ ಟೆಸ್ಟ್ ನಲ್ಲಿ, ಇಂಗ್ಲೆಂಡ್ ಹೆಚ್ಚಿನ ಸಮಯಗಳಲ್ಲಿ ಪಂದ್ಯದ ಮೇಲೆ ನಿಯಂತ್ರಣ ಹೊಂದಿತ್ತು. ಆದರೂ ಪಂದ್ಯ ಡ್ರಾದಲ್ಲಿ ಕೊನೆಗೊಂಡಿರುವುದರಿಂದ ಇಂಗ್ಲೆಂಡಿಗೆ ನಿರಾಶೆಯಾಗಿದೆ. ಅದು ಅಂತಿಮ ಟೆಸ್ಟ್ ನಲ್ಲಿ ವೇಗದ ಬೌಲಿಂಗ್ ಸಂಯೋಜನೆಯಲ್ಲಿ ಬದಲಾವಣೆ ಮಾಡಬಹುದಾಗಿದೆ. ಸರಣಿಯಲ್ಲಿ ಎಲ್ಲಾ ಬೌಲರ್ ಗಳು ತಮ್ಮ ಪಾತ್ರಗಳನ್ನು ಚೆನ್ನಾಗಿಯೇ ನಿರ್ವಹಿಸಿದ್ದಾರೆ. ಆದರೆ, ಬ್ರೈಡನ್ ಕಾರ್ಸ್ ಮತ್ತು ಕ್ರಿಸ್ ವೋಕ್ಸ್ ನಾಲ್ಕು ಟೆಸ್ಟ್ ಗಳನ್ನು ಆಡಿದ್ದಾರೆ. ಹಾಗಾಗಿ, ಅವರ ಮೇಲಿನ ಒತ್ತಡವನ್ನು ಕಡಿಮೆಗೊಳಿಸಲು ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ.
ಓವಲ್ ನ ಪಿಚ್ ಇಂಗ್ಲೆಂಡ್ ನ ಶ್ರೇಷ್ಠ ಪಿಚ್ ಗಳಲ್ಲಿ ಒಂದು ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಆದರೆ, ಶುಷ್ಕ ಬೇಸಿಗೆಯಿಂದಾಗಿ ಎಲ್ಲಾ ಪಿಚ್ ಗಳು ಒಂದೇ ತರ ವರ್ತಿಸುತ್ತಿವೆ. ಆದರೆ, ಓವಲ್ ಪಿಚ್ ಸಾಂಪ್ರದಾಯಿಕವಾಗಿ ಒಂದನೇ ದಿನದಂದು ವೇಗಿಗಳಿಗೆ ನೆರವು ನೀಡುತ್ತದೆ, ಎರಡು ಮತ್ತು ಮೂರನೇ ದಿನಗಳಂದು ಬ್ಯಾಟಿಂಗ್ ಗೆ ಉತ್ತಮವಾಗಿದೆ ಹಾಗೂ ಕೊನೆಯ ಎರಡು ದಿನಗಳಲ್ಲಿ ಸ್ವಲ್ಪ ತಿರುವು ಪಡೆದುಕೊಳ್ಳುತ್ತದೆ.
ಪಂದ್ಯದ ಮೊದಲ ಎರಡು ದಿನಗಳಲ್ಲಿ ಮಳೆ ಸುರಿಯುವ ನಿರೀಕ್ಷೆಯಿದೆ. ಹಾಗಾಗಿ, ಟಾಸ್ ಗೆಲ್ಲುವ ತಂಡವು ಮೊದಲು ಬೌಲಿಂಗ್ ಮಾಡಿ ವೇಗದ ಬೌಲರ್ ಗಳಿಗೆ ಪೂರಕವಾಗಿರುವ ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಳಲು ಮುಂದಾಗಬಹುದಾಗಿದೆ.
► ತಂಡಗಳು
ಭಾರತ: ಯಶಸ್ವಿ ಜೈಸ್ವಾಲ್, ಕೆ.ಎಲ್. ರಾಹುಲ್, ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ಧ್ರುವ ಜೂರೆಲ್ (ವಿಕೆಟ್ ಕೀಪರ್ ), ರವೀಂದ್ರ ಜಡೇಜ, ವಾಶಿಂಗ್ಟನ್ ಸುಂದರ್, ಶಾರ್ದುಲ್ ಠಾಕೂರ್/ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ/ಆಕಾಶ್ ದೀಪ್, ಮುಹಮ್ಮದ್ ಸಿರಾಜ್, ಅಂಶುಲ್ ಕಾಂಬೋಜ್/ಅರ್ಶದೀಪ್ ಸಿಂಗ್.
ಇಂಗ್ಲೆಂಡ್: ಝ್ಯಾಕ್ ಕ್ರಾಲಿ, ಬೆನ್ ಡಕೆಟ್, ಓಲೀ ಪೋಪ್ (ನಾಯಕ), ಜೋ ರೂಟ್, ಹ್ಯಾರಿ ಬ್ರೂಕ್, ಜಾಕೋಬ್ ಬೆತೆಲ್, ಜೇಮೀ ಸ್ಮಿತ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಗಸ್ ಆ್ಯಟ್ಕನ್ಸನ್, ಜೇಮಿ ಓವರ್ಟನ್, ಜೋಶ್ ಟಂಗ್.
► ಪಂದ್ಯ ಆರಂಭ: ಅಪರಾಹ್ನ 3:30
► ಇಂಗ್ಲೆಂಡ್ ತಂಡದಲ್ಲಿ 4 ಬದಲಾವಣೆ
ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ನಲ್ಲಿ ನಡೆದ ನಾಲ್ಕನೇ ಟೆಸ್ಟ್ನಲ್ಲಿ ಆಡಿದ ಇಂಗ್ಲೆಂಡ್ ತಂಡಕ್ಕೆ ಈಗ ನಾಲ್ಕು ಬದಲಾವಣೆಗಳನ್ನು ಮಾಡಲಾಗಿದೆ. ಜಾಕೋಬ್ ಬೆತೆಲ್, ಜೋಶ್ ಟಂಗ್, ಗಸ್ ಆ್ಯಟ್ಕಿನ್ಸನ್ ಮತ್ತು ಜೇಮೀ ಓವರ್ಟನ್ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ನಾಯಕ ಬೆನ್ ಸ್ಟೋಕ್ಸ್ ಹಾಗೂ ವೇಗಿಗಳಾದ ಜೋಫ್ರಾ ಆರ್ಚರ್ ಮತ್ತು ಬ್ರೈಡನ್ ಕಾರ್ಸ್ರಿಗೆ ವಿಶ್ರಾಂತಿ ನೀಡಲಾಗಿದೆ. ಸ್ಪಿನ್ ಬೌಲಿಂಗ್ ಆಲ್ರೌಂಡರ್ ಬೆತೆಲ್ ಈ ವರ್ಷದಲ್ಲಿ ಮೊದಲ ಬಾರಿಗೆ ಟೆಸ್ಟ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಅವರು ಬೆನ್ ಸ್ಟೋಕ್ಸ್ರ ಸ್ಥಾನದಲ್ಲಿ ಕಣಕ್ಕಿಳಿಯಲಿದ್ದಾರೆ.
► ಜಸ್ಪ್ರೀತ್ ಬುಮ್ರಾ ಹೊರಗೆ?
ಲಂಡನ್ನ ಕೆನಿಂಗ್ಟನ್ ಓವಲ್ ನಲ್ಲಿ ಗುರುವಾರ ನಡೆಯಲಿರುವ ಆತಿಥೇಯ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಸರಣಿ ನಿರ್ಣಾಯಕ ಐದನೇ ಹಾಗೂ ಕೊನೆಯ ಪಂದ್ಯಕ್ಕೆ ಭಾರತೀಯ ವೇಗಿ ಜಸ್ಪ್ರೀತ್ ಬುಮ್ರಾ ಲಭ್ಯರಾಗುವ ಸಾಧ್ಯತೆಯಿಲ್ಲ ಎಂದು ಹೇಳಲಾಗಿದೆ.
ಐದು ಪಂದ್ಯಗಳ ಸರಣಿಯಲ್ಲಿ, ಬುಮ್ರಾ ಪ್ರಥಮ, ತೃತೀಯ ಮತ್ತು ನಾಲ್ಕನೇ ಟೆಸ್ಟ್ ನಲ್ಲಿ ಆಡಿದ್ದಾರೆ. ಎಜ್ಬಾಸ್ಟನ್ನಲ್ಲಿ ನಡೆದ ಪಂದ್ಯದಲ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿತ್ತು.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಎಲ್ಲಾ ಪಂದ್ಯಗಳಲ್ಲಿ ಬುಮ್ರಾ ಆಡುವುದಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಸರಣಿಗೆ ಮುನ್ನ ಹೇಳಿತ್ತು. ಐದನೇ ಪಂದ್ಯದಲ್ಲಿ ಅವರ ಸ್ಥಾನವನ್ನು ಆಕಾಶ್ ದೀಪ್ ತುಂಬುವ ನಿರೀಕ್ಷೆಯಿದೆ.
‘‘ನಿಮ್ಮ ಬೆನ್ನನ್ನು ರಕ್ಷಿಸಲು ಮತ್ತು ದೀರ್ಘಾವಧಿ ಕ್ರೀಡಾ ಬದುಕನ್ನು ಗಮನದಲ್ಲಿರಿಸಿಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಬಿಸಿಸಿಐ ವೈದ್ಯಕೀಯ ತಂಡವು ಬುಮ್ರಾರಿಗೆ ತಿಳಿಸಿದೆ’’ ಎಂದು espncricinfo ವರದಿ ಮಾಡಿದೆ. ಇದಕ್ಕೂ ಮೊದಲು, ತಂಡ ಸಂಯೊಜನೆ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲಾಗಿಲ್ಲ ಮತ್ತು ಬುಮ್ರಾ ಸೇರಿದಂತೆ ಎಲ್ಲಾ ಬೌಲರ್ ಗಳು ದೈಹಿಕ ಕ್ಷಮತೆ ಹೊಂದಿದ್ದಾರೆ ಎಂದು ತಂಡದ ಪ್ರಧಾನ ಕೋಚ್ ಗೌತಮ್ ಗಂಭೀರ್ ಹೇಳಿದ್ದರು.
ನಾಲ್ಕನೇ ಟೆಸ್ಟ್ ನ ಮೊದಲ ಇನಿಂಗ್ಸ್ ನಲ್ಲಿ ಬುಮ್ರಾ 33 ಓವರ್ಗಳನ್ನು ಬೌಲ್ ಮಾಡಿದ್ದರು. ಅದು ಒಂದು ಇನಿಂಗ್ಸ್ನಲ್ಲಿ ಅವರು ಬೌಲ್ ಮಾಡಿದ ಗರಿಷ್ಠ ಓವರ್ಗಳಾಗಿವೆ. ಅವರು 103 ರನ್ಗಳನ್ನು ನೀಡಿ ಎರಡು ವಿಕೆಟ್ಗಳನ್ನು ಪಡೆದಿದ್ದಾರೆ. ಟೆಸ್ಟ್ ಇನಿಂಗ್ಸ್ ಒಂದರಲ್ಲಿ 100ಕ್ಕಿಂತ ಹೆಚ್ಚು ರನ್ ಗಳನ್ನು ಅವರು ನೀಡಿರುವುದು ಅದೇ ಮೊದಲ ಬಾರಿಯಾಗಿತ್ತು.







