ನಾಳೆ ಎರಡನೇ ಸೆಮಿ ಫೈನಲ್ | ಭಾರತ-ಇಂಗ್ಲೆಂಡ್ ತೀವ್ರ ಪೈಪೋಟಿ ನಿರೀಕ್ಷೆ

Photo Credit: PTI
ಮುಂಬೈ, ಮಾ.4: ಟಿ-20 ವಿಶ್ವಕಪ್ ಟೂರ್ನಿಯ ಎರಡನೇ ಸೆಮಿ ಫೈನಲ್ ಪಂದ್ಯವು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ ನಡೆಯಲಿದೆ. ಈ ತನಕ ತಲಾ ಎರಡು ಬಾರಿ ಟಿ-20 ವಿಶ್ವಕಪ್ ಟ್ರೋಫಿ ಗೆದ್ದಿರುವ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗುತ್ತಿದ್ದು, ತೀವ್ರ ಪೈಪೋಟಿಯನ್ನು ನಿರೀಕ್ಷಿಸಲಾಗುತ್ತಿದೆ.
ಸೆಮಿ ಫೈನಲ್ನಲ್ಲಿ ಉಭಯ ತಂಡಗಳು ತಲಾ ಒಂದು ಪಂದ್ಯವನ್ನು ಜಯಿಸಿ ಸಮತೋಲಿತ ಪ್ರದರ್ಶನ ನೀಡಿವೆ. ಆ ಎರಡೂ ಸಂದರ್ಭದಲ್ಲಿ ಸೆಮಿ ಫೈನಲ್ ಗೆದ್ದ ತಂಡವು ಪ್ರಶಸ್ತಿಯನ್ನು ಜಯಿಸಿತ್ತು.
ಇದೀಗ ಉಭಯ ತಂಡಗಳು ಮುಂಬೈನ ಪ್ರತಿಷ್ಠಿತ ಸ್ಟೇಡಿಯಂನಲ್ಲಿ ಮೂರನೇ ಬಾರಿ ಸೆಮಿ ಫೈನಲ್ ಪಂದ್ಯದಲ್ಲಿ ಸೆಣಸಾಡಲು ಸಜ್ಜಾಗಿವೆ. ಈ ಪಂದ್ಯವನ್ನು ಗೆಲ್ಲುವ ತಂಡವು ಐಸಿಸಿ ಪುರುಷರ ಟಿ-20 ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿ ಮೂರನೇ ಪ್ರಶಸ್ತಿ ಗೆಲ್ಲುವತ್ತ ದಿಟ್ಟ ಹೆಜ್ಜೆ ಇಡಲಿದೆ. ಭಾರತ ಹಾಗೂ ಇಂಗ್ಲೆಂಡ್ನ ಜೊತೆಗೆ ವೆಸ್ಟ್ಇಂಡೀಸ್ ಕೂಡ ಎರಡು ಬಾರಿ ಟಿ-20 ವಿಶ್ವಕಪ್ ಟ್ರೋಫಿ ಗೆದ್ದುಕೊಂಡಿದೆ.
2022ರ ಟಿ-20 ವಿಶ್ವಕಪ್ ಸೆಮಿ ಫೈನಲ್ನಲ್ಲಿ ಭಾರತ ತಂಡವನ್ನು 10 ವಿಕೆಟ್ಗಳ ಅಂತರದಿಂದ ಮಣಿಸಿದ್ದ ಇಂಗ್ಲೆಂಡ್ ತಂಡವು ಫೈನಲ್ನಲ್ಲಿ ಪಾಕಿಸ್ತಾನವನ್ನು ಮಣಿಸಿ ಪ್ರಶಸ್ತಿ ಜಯಿಸಿತ್ತು. 2024ರ ಟಿ-20 ವಿಶ್ವಕಪ್ನಲ್ಲಿ ಭಾರತ ತಂಡವು ಸೆಮಿ ಫೈನಲ್ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿತ್ತು. ರೋಚಕವಾಗಿ ಸಾಗಿದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಎರಡನೇ ಬಾರಿ ಟಿ-20 ವಿಶ್ವಕಪ್ ಎತ್ತಿ ಹಿಡಿದಿತ್ತು.
ಹೆಡ್-ಟು-ಹೆಡ್
ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಟಿ-20 ಕ್ರಿಕೆಟ್ನಲ್ಲಿ ಒಟ್ಟು 29 ಬಾರಿ ಮುಖಾಮುಖಿಯಾಗಿವೆ. ಭಾರತ 17 ಬಾರಿ ಹಾಗೂ ಇಂಗ್ಲೆಂಡ್ 12 ಬಾರಿ ಗೆಲುವು ದಾಖಲಿಸಿದೆ. ಭಾರತ ತಂಡವು ಟಿ-20 ವಿಶ್ವಕಪ್ನಲ್ಲಿ ತನ್ನಲ್ಲೇ ಉಳಿಸಿಕೊಂಡ ಮೊದಲ ತಂಡ ಹಾಗೂ ಐಸಿಸಿ ಟ್ರೋಫಿ ಗೆದ್ದ ಮೊದಲ ಆತಿಥೇಯ ದೇಶ ಎನಿಸಿಕೊಳ್ಳುವ ವಿಶ್ವಾಸದಲ್ಲಿದೆ.
ಉಭಯ ತಂಡಗಳ ಸೆಮಿ ಫೈನಲ್ ಪಯಣ ವ್ಯತಿರಿಕ್ತವಾಗಿದೆ. ಇಂಗ್ಲೆಂಡ್ ತಂಡವು ಸೂಪರ್-8ರ ಗ್ರೂಪ್-2ರಲ್ಲಿ ಅಜೇಯ ಗೆಲುವಿನ ದಾಖಲೆಯೊಂದಿಗೆ ಸೆಮಿ ಫೈನಲ್ಗೆ ತಲುಪಿದ ಮೊದಲ ತಂಡ ಎನಿಸಿಕೊಂಡಿದೆ. ಇದೇ ವೇಳೆ, ಭಾರತ ತಂಡವು ಸೂಪರ್-8ರ ಗ್ರೂಪ್-1ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋತಿತ್ತು. ವೆಸ್ಟ್ಇಂಡೀಸ್ ವಿರುದ್ಧ ರೋಚಕ ಜಯ ಸಾಧಿಸಿದ ನಂತರ ಸೆಮಿ ಫೈನಲ್ನಲ್ಲಿ ಸ್ಥಾನ ಪಡೆದಿತ್ತು.
ಇದಕ್ಕೂ ಮೊದಲು ಲೀಗ್ ಹಂತದ ‘ಎ’ ಗುಂಪಿನಲ್ಲಿ ಎಲ್ಲ ನಾಲ್ಕು ಪಂದ್ಯಗಳನ್ನು ಜಯಿಸಿದ್ದ ಭಾರತ ತಂಡ ಅಗ್ರ ಸ್ಥಾನ ಪಡೆದಿತ್ತು. ಇಂಗ್ಲೆಂಡ್ ತಂಡವು ವೆಸ್ಟ್ಇಂಡೀಸ್ ವಿರುದ್ಧ ಸೋತ ಕಾರಣ ‘ಸಿ’ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದಿತ್ತು.
ಸೆಮಿ ಫೈನಲ್ ಪಂದ್ಯವು ವಿಭಿನ್ನವಾಗಿದ್ದು, ವಾಂಖೆಡೆ ಸ್ಟೇಡಿಯಂನಲ್ಲಿನ ನೆನಪು ಆತಿಥೇಯ ತಂಡಕ್ಕೆ ಹೆಚ್ಚು ಭಾವನಾತ್ಮಕವಾಗಿದೆ. 2011ರ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಎಂ.ಎಸ್ ಧೋನಿ ಸಿಕ್ಸರ್ ಸಿಡಿಸಿ ಪ್ರಶಸ್ತಿ ಖಚಿತಪಡಿಸಿದ್ದರು. ಸಚಿನ್ ತೆಂಡುಲ್ಕರ್ರನ್ನು ಸಹ ಆಟಗಾರರು ಹೆಗಲ ಮೇಲೆ ಕುಳ್ಳಿರಿಸಿ ಸಂಭ್ರಮಿಸಿದ್ದರು.
ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಅಭಿಯಾನದಲ್ಲಿ ನಿರ್ಣಾಯಕ ಘಟ್ಟದಲ್ಲಿ ಹಲವು ಮ್ಯಾಚ್ ವಿನ್ನರ್ಗಳು ಹೊರಹೊಮ್ಮಿದ್ದಾರೆ. ಅಭಿಷೇಕ್ ಶರ್ಮಾ ಟಿ-20 ವಿಶ್ವಕಪ್ನಲ್ಲಿ ತನ್ನ ಮೊದಲ ಅರ್ಧಶತಕ ಗಳಿಸಿದರು. ಸಂಜು ಸ್ಯಾಮ್ಸನ್ ವೆಸ್ಟ್ಇಂಡೀಸ್ ವಿರುದ್ಧ ಗೆಲ್ಲಲೇಬೇಕಾದ ಪಂದ್ಯದಲ್ಲಿ ಔಟಾಗದೆ 97 ರನ್ ಗಳಿಸಿದ್ದರು. ನಾಯಕ ಸೂರ್ಯಕುಮಾರ ಯಾದವ್ ಅಮೆರಿಕ ತಂಡದ ವಿರುದ್ಧ 84 ರನ್ ಗಳಿಸಿದ್ದರು. ತಿಲಕ್ ವರ್ಮಾ, ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಅವರ ಕೊಡುಗೆಗಳು ಬ್ಯಾಟಿಂಗ್ ವಿಭಾಗವನ್ನು ಶಕ್ತಿಶಾಲಿಗೊಳಿಸಿದೆ.
ಭಾರತದ ಪರ ಗರಿಷ್ಠ ಸ್ಕೋರರ್ಗಳ ಪಟ್ಟಿಯಲ್ಲಿ ಸೂರ್ಯಕುಮಾರ್(231 ರನ್)ಅಗ್ರ ಸ್ಥಾನದಲ್ಲಿದ್ದು, ಇಶಾನ್(217 ರನ್)ಎರಡನೇ ಸ್ಥಾನದಲ್ಲಿದ್ದಾರೆ.
ಭಾರತದ ಬೌಲಿಂಗ್ ದಾಳಿಯು ಸಮತೋಲಿತವಾಗಿದೆ. ಜಸ್ಪ್ರಿತ್ ಬುಮ್ರಾ, ಅರ್ಷದೀಪ ಸಿಂಗ್, ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್, ಹಾರ್ದಿಕ್ ಹಾಗೂ ಕುಲದೀಪ ಯಾದವ್ ಎಲ್ಲರೂ ಪ್ರಮುಖ ಸಂದರ್ಭದಲ್ಲಿ ತಂಡಕ್ಕೆ ಮೇಲುಗೈ ಒದಗಿಸಿದ್ದಾರೆ. ವರುಣ್ ಒಟ್ಟು 12 ವಿಕೆಟ್ಗಳನ್ನು ಪಡೆದು ಅತ್ಯಧಿಕ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಯಾವೊಬ್ಬ ಆಟಗಾರನು ಸ್ಥಿರ ಪ್ರದರ್ಶನದಿಂದ ಪ್ರಾಬಲ್ಯ ಸಾಧಿಸಿಲ್ಲ. ಎಲ್ಲರೂ ತಮ್ಮ ಹೊಣೆಗಾರಿಕೆಯನ್ನು ಹಂಚಿಕೊಂಡು ಭಾರತ ತಂಡದ ಗೆಲುವಿಗೆ ನೆರವಾಗಿದ್ದಾರೆ.
ಇಂಗ್ಲೆಂಡ್ ತಂಡ ಕೂಡ ವೈಯಕ್ತಿಕ ಪ್ರದರ್ಶನವನ್ನು ಅವಲಂಬಿಸದೆ ಸಂಘಟಿತ ಪ್ರದರ್ಶನವನ್ನು ಹೆಚ್ಚು ನೆಚ್ಚಿಕೊಂಡಿದೆ. ಜೋಸ್ ಬಟ್ಲರ್ ತನ್ನ ಶ್ರೇಷ್ಠ ಫಾರ್ಮ್ಗಾಗಿ ಹುಡುಕಾಡುತ್ತಿದ್ದರೂ ಫಿಲ್ ಸಾಲ್ಟ್, ಜೇಕಬ್ ಬೆಥೆಲ್, ವಿಲ್ ಜಾಕ್ಸ್ ಹಾಗೂ ನಾಯಕ ಹ್ಯಾರಿ ಬ್ರೂಕ್ ಪ್ರಮುಖ ಕೊಡುಗೆಗಳನ್ನು ನೀಡಿದ್ದಾರೆ. 228 ರನ್ಗಳೊಂದಿಗೆ ಬ್ರೂಕ್ ಸ್ಕೋರ್ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್ ಆದಿಲ್ ರಶೀದ್ ಈ ತನಕ 11 ವಿಕೆಟ್ಗಳನ್ನು ಪಡೆದು ಮಿಂಚಿದ್ದಾರೆ.
ವಾಂಖೆಡೆ ಸ್ಟೇಡಿಯಂ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದ್ದರೂ, ಆರಂಭದಲ್ಲಿ ವೇಗಿಗಳಿಗೆ ನೆರವಾಗುವ ನಿರೀಕ್ಷೆ ಇದೆ. ಬಿಸಿಲಿನ ವಾತಾವರಣದ ಮುನ್ಸೂಚನೆ ಇದ್ದು, ರಾತ್ರಿ ವೇಳೆ ಇಬ್ಬನಿ ಬೀಳುವ ಸಾಧ್ಯತೆ ಇದೆ. ಹೀಗಾಗಿ ಟಾಸ್ ಪ್ರಮುಖ ಪಾತ್ರವಹಿಸಬಹುದು. ಟಾಸ್ ಗೆಲ್ಲುವ ನಾಯಕ ಮೊದಲು ಬೌಲಿಂಗ್ ಆಯ್ದುಕೊಳ್ಳಬಹುದು.
ಪಂದ್ಯಾವಳಿಯಲ್ಲಿ ಏಳು ಪಂದ್ಯಗಳ ನಂತರ ಉಭಯ ತಂಡಗಳು ಆಡುವ 11ರ ಬಳಗವನ್ನು ಕಂಡುಕೊಂಡಿವೆ. ಹೀಗಾಗಿ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ. ಭಾರತ ತಂಡವು ಸಂಜು ಸ್ಯಾಮ್ಸನ್ಗೆ ಉತ್ತಮ ಪ್ರದರ್ಶನ ಮುಂದುವರಿಸಲು ಮತ್ತೊಂದು ಅವಕಾಶ ನೀಡಬಹುದು.
ಸ್ಟೇಡಿಯಂನಲ್ಲಿ 35,000ಕ್ಕೂ ಅಧಿಕ ಕ್ರಿಕೆಟ್ ಪ್ರೇಮಿಗಳು ಜಮಾಯಿಸುವ ನಿರೀಕ್ಷೆ ಇದೆ. ಹೊನಲು ಬೆಳಕಿನಡಿ ಕಿಕ್ಕಿರಿದು ಪ್ರೇಕ್ಷಕರ ಸಮ್ಮುಖದಲ್ಲಿ ನಡೆಯುವ ಪಂದ್ಯದಲ್ಲಿ ಗೆಲ್ಲುವ ತಂಡ ಅಹ್ಮದಾಬಾದ್ನಲ್ಲಿ ಮಾ.8ರಂದು ನಡೆಯಲಿರುವ ಫೈನಲ್ಗೆ ಲಗ್ಗೆ ಇಡಲಿದೆ.
ಸಂಭಾವ್ಯ ಆಡುವ 11ರ ಬಳಗ
ಭಾರತ: ಸಂಜು ಸ್ಯಾಮ್ಸನ್(ವಿಕೆಟ್ಕೀಪರ್), ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಸೂರ್ಯಕುಮಾರ ಯಾದವ್(ನಾಯಕ), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ ಪಟೇಲ್, ಅರ್ಷದೀಪ ಸಿಂಗ್, ವರುಣ್ ಚಕ್ರವರ್ತಿ, ಜಸ್ಪ್ರಿತ್ ಬುಮ್ರಾ.
ಇಂಗ್ಲೆಂಡ್: ಫಿಲ್ ಸಾಲ್ಟ್, ಜೋಸ್ ಬಟ್ಲರ್(ವಿಕೆಟ್ಕೀಪರ್), ಹ್ಯಾರಿ ಬ್ರೂಕ್(ನಾಯಕ), ಜೇಕಬ್ ಬೆಥೆಲ್, ಟಾಮ್ ಬ್ಯಾಂಟನ್, ಸ್ಯಾಮ್ ಕರ್ರನ್, ವಿಲ್ ಜಾಕ್ಸ್, ಲಿಯಾಮ್ ಡಾಸನ್, ರಿಹಾನ್ ಅಹ್ಮದ್, ಜೋಫ್ರಾ ಆರ್ಚರ್, ಆದಿಲ್ ರಶೀದ್.
ಪಂದ್ಯ ಆರಂಭದ ಸಮಯ: ರಾತ್ರಿ 7:00
ಟಿ-20 ವಿಶ್ವಕಪ್ ಸೆಮಿ ಫೈನಲ್ನಲ್ಲಿ ಭಾರತದ ಪ್ರದರ್ಶನ
ಭಾರತ ತಂಡವು ಹತ್ತು ಆವೃತ್ತಿಗಳ ಟಿ-20 ವಿಶ್ವಕಪ್ ಟೂರ್ನಿಗಳ ಪೈಕಿ ಆರನೇ ಬಾರಿ ಸೆಮಿ ಫೈನಲ್ಗೆ ತಲುಪಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ ಇಂಗ್ಲೆಂಡ್ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವತ್ತ ಹೆಜ್ಜೆ ಇಡುವ ವಿಶ್ವಾಸದಲ್ಲಿದೆ.
2007ರಲ್ಲಿ ನಡೆದ ಮೊತ್ತ ಮೊದಲ ಟಿ-20 ವಿಶ್ವಕಪ್ನಲ್ಲಿ ಸೆಮಿ ಫೈನಲ್ಗೆ ತಲುಪಿದ್ದ ಭಾರತ ತಂಡವು ಡರ್ಬನ್ನಲ್ಲಿ ಆಸ್ಟ್ರೇಲಿಯವನ್ನು ಮಣಿಸಿತ್ತು. ಜೋಹಾನ್ಸ್ಬರ್ಗ್ನಲ್ಲಿ ನಡೆದಿದ್ದ ಫೈನಲ್ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ತನ್ನ ಚೊಚ್ಚಲ ಟಿ-20 ವಿಶ್ವಕಪ್ ಜಯಿಸಿತ್ತು.
ಫೈನಲ್ನಲ್ಲಿ ಗೌತಮ್ ಗಂಭೀರ್ 75 ರನ್ ಗಳಿಸಿದ್ದರು. ಎಂ.ಎಸ್. ಧೋನಿ ನಾಯಕತ್ವದಡಿ ಬೌಲರ್ಗಳಾದ ಆರ್.ಪಿ. ಸಿಂಗ್ ಹಾಗೂ ಇರ್ಫಾನ್ ಪಠಾಣ್ ಮಿಂಚಿದ್ದರು.
ಆ ನಂತರ 2009, 2010 ಹಾಗೂ 2012ರಲ್ಲಿ ಭಾರತ ತಂಡ ಸೆಮಿ ಫೈನಲ್ ತಲುಪುವಲ್ಲಿ ವಿಫಲವಾಗಿತ್ತು. 2014ರಲ್ಲಿ ಮತ್ತೊಮ್ಮೆ ಸೆಮಿ ಫೈನಲ್ ತಲುಪಿತು. ವಿರಾಟ್ ಕೊಹ್ಲಿಯ ಅರ್ಧಶತಕದ(ಔಟಾಗದೆ 72)ನೆರವಿನಿಂದ ದಕ್ಷಿಣ ಆಫ್ರಿಕಾವನ್ನು ಮಣಿಸಿತ್ತು. ಆದರೆ ಫೈನಲ್ನಲ್ಲಿ ಕೊಹ್ಲಿ 77 ರನ್ ಗಳಿಸಿದ ಹೊರತಾಗಿಯೂ ಶ್ರೀಲಂಕಾ ತಂಡವು 131 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತ್ತು.
ಸ್ವದೇಶದಲ್ಲಿ 2016ರಲ್ಲಿ ನಡೆದಿದ್ದ ಟಿ-20 ವಿಶ್ವಕಪ್ನಲ್ಲಿ ಭಾರತ ಮತ್ತೊಮ್ಮೆ ಸೆಮಿ ಫೈನಲ್ ತಲುಪಿತ್ತು. ಆದರೆ ಮುಂಬೈನಲ್ಲಿ ಆಗಿನ ಚಾಂಪಿಯನ್ ವೆಸ್ಟ್ಇಂಡೀಸ್ ತಂಡಕ್ಕೆ ಸೋತಿತ್ತು.
2022ರಲ್ಲಿ ನಾಕೌಟ್ ಹಂತದಲ್ಲಿ ಮೊದಲ ಬಾರಿ ಭಾರತ ತಂಡ ಇಂಗ್ಲೆಂಡ್ ತಂಡವನ್ನು ಎದುರಿಸಿತ್ತು. ಭಾರತ 6ಕ್ಕೆ 168 ರನ್ ಗಳಿಸಿದ್ದರೆ, ಇಂಗ್ಲೆಂಡ್ನ ಆರಂಭಿಕ ಆಟಗಾರರು ವಿಕೆಟ್ ಕಳೆದುಕೊಳ್ಳದೆ 10 ವಿಕೆಟ್ಗಳಿಂದ ಜಯ ಸಾಧಿಸಿ ಪ್ರಶಸ್ತಿ ಗೆಲ್ಲಲು ನೆರವಾಗಿದ್ದರು.
2024ರಲ್ಲಿ ಭಾರತ-ಇಂಗ್ಲೆಂಡ್ ಮತ್ತೊಮ್ಮೆ ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತವು ರೋಹಿತ್ ಶರ್ಮಾರ 57 ರನ್ ನೆರವಿನಿಂದ 171 ರನ್ ಗಳಿಸಿತ್ತು. ಈ ಬಾರಿ ಇಂಗ್ಲೆಂಡ್ ತಂಡವು 103 ರನ್ಗೆ ಕುಸಿದುಬಿದ್ದಿದ್ದು, ಭಾರತವು 68 ರನ್ಗನ್ಗಳಿಂದ ಜಯಶಾಲಿಯಾಗಿತ್ತು. ಭಾರತವು ಫೈನಲ್ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಎರಡನೇ ಬಾರಿ ಟಿ-20 ವಿಶ್ವಕಪ್ ಜಯಿಸಿತ್ತು.
ಇದೀಗ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಸತತ ಮೂರನೇ ಟಿ-20 ವಿಶ್ವಕಪ್ನ ಸೆಮಿ ಫೈನಲ್ನಲ್ಲಿ ಮುಖಾಮುಖಿಯಾಗುತ್ತಿವೆ. ಮತ್ತೊಂದು ಅಧ್ಯಾಯ ಆರಂಭಿಸುವ ನಿರೀಕ್ಷೆ ಮೂಡಿಸಿವೆ.






