ಪವರ್ ಪ್ಲೇ ನಲ್ಲಿ ಭಾರತಕ್ಕೆ ಆರಂಭಿಕ ಆಘಾತ; ಅಭಿಷೇಕ್ ಗೆ ಸತತ ಮೂರನೇ ಡಕ್

Photo Credit : NDTV
ಅಹಮದಾಬಾದ್: ಟಿ20 ವಿಶ್ವಕಪ್ 2026ರ ಗ್ರೂಪ್ ‘ಎ’ ಹಂತದ ಕೊನೆಯ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಭಾರತ ಆರಂಭದಲ್ಲೇ ಎರಡು ವಿಕೆಟ್ ಕಳೆದುಕೊಂಡಿತು. ಬುಧವಾರ ನಡೆದ ಪಂದ್ಯದಲ್ಲಿ ಪವರ್ಪ್ಲೇ ಅವಧಿಯಲ್ಲೇ ಅಭಿಷೇಕ್ ಶರ್ಮಾ ಹಾಗೂ ಇಶಾನ್ ಕಿಶನ್ ಔಟಾಗಿದ್ದು,9.2 ಓವರ್ಗಳಲ್ಲಿ ಭಾರತ 3 ವಿಕೆಟ್ ನಷ್ಟಕ್ಕೆ 72 ರನ್ ಗಳಿಸಿತು. ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಶಿವಂ ದುಬೆ ಕ್ರೀಸ್ನಲ್ಲಿದ್ದು ಇನ್ನಿಂಗ್ಸ್ ಕಟ್ಟುತ್ತಿದ್ದಾರೆ.
ಪಂದ್ಯದ ಆರಂಭದಲ್ಲೇ ಅಭಿಷೇಕ್ ಶರ್ಮಾ ಶೂನ್ಯಕ್ಕೆ ಕ್ಲೀನ್ ಬೌಲ್ಡ್ ಆಗಿದ್ದು, ಇದು ಅವರ ಸತತ ಮೂರನೇ ‘ಡಕ್’ ಆಗಿದೆ. ಈ ಮೂಲಕ ಐಪಿಎಲ್ 2014ರ ಆರಂಭದಲ್ಲಿ ಗೌತಮ್ ಗಂಭೀರ್ ದಾಖಲಿಸಿದ್ದ ಸತತ ಮೂರು ʼಡಕ್ʼ ದಾಖಲೆಯನ್ನು ಅಭಿಷೇಕ್ ಸಮಗಟ್ಟಿದರು! ವಿಶ್ವ ನಂ.1 ಟಿ20 ಬ್ಯಾಟರ್ ಆಗಿರುವ ಅಭಿಷೇಕ್ ಆರ್ಯನ್ ದತ್ ಎಸೆತದಲ್ಲಿ ಕೇವಲ ಮೂರು ಎಸೆತಗಳಲ್ಲಿ ಸ್ಟಂಪ್ ಶೂನ್ಯಕ್ಕೆ ಔಟಾದರು.
ಟಾಸ್ ಗೆದ್ದ ಸೂರ್ಯಕುಮಾರ್ ಯಾದವ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಈ ಪಂದ್ಯಕ್ಕೆ ವೇಗಿ ಅರ್ಶ್ದೀಪ್ ಸಿಂಗ್ ಹಾಗೂ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಅವರನ್ನು ತಂಡದಲ್ಲಿ ಸೇರಿಸಲಾಯಿತು. ಭಾರತ ತನ್ನ ಮೊದಲ ಮೂರು ಗುಂಪು ಪಂದ್ಯಗಳನ್ನೂ ಗೆದ್ದು ಸೂಪರ್–8 ಹಂತಕ್ಕೆ ಈಗಾಗಲೇ ಅರ್ಹತೆ ಪಡೆದಿದೆ.
ಇನ್ನೊಂದೆಡೆ, ಸ್ಕಾಟ್ ಎಡ್ವರ್ಡ್ಸ್ ನೇತೃತ್ವದ ನೆದರ್ಲ್ಯಾಂಡ್ಸ್ ತಂಡದ ಸೂಪರ್–8 ಕನಸು ಪಂದ್ಯಕ್ಕೂ ಮುನ್ನವೇ ಭಗ್ನಗೊಂಡಿತ್ತು. ಪಾಕಿಸ್ತಾನ ತಂಡ ನಮೀಬಿಯಾವನ್ನು ಸೋಲಿಸಿ ಎರಡನೇ ಅರ್ಹತಾ ಸ್ಥಾನ ಪಡೆದ ಹಿನ್ನೆಲೆ ನೆದರ್ಲ್ಯಾಂಡ್ಸ್ಗೆ ಮುಂದಿನ ಹಂತದ ಅವಕಾಶ ತಪ್ಪಿದೆ.






