ನಾಳೆ ಮೊದಲ ಏಕದಿನ ಪಂದ್ಯ | ಭಾರತ-ನ್ಯೂಝಿಲ್ಯಾಂಡ್ ಹಣಾಹಣಿ

Photo Credit : PTI
ಆಕ್ಲೆಂಡ್: ಈಗಾಗಲೇ ಐದು ಪಂದ್ಯಗಳ ಟಿ-20 ಸರಣಿಯಲ್ಲಿ ಕ್ರಿಕೆಟ್ ಅಭಿಮಾನಿಗಳಿಗೆ ಮನರಂಜನೆ ನೀಡಿರುವ ಭಾರತ ಹಾಗೂ ನ್ಯೂಝಿಲ್ಯಾಂಡ್ ಕ್ರಿಕೆಟ್ ತಂಡಗಳು ಬುಧವಾರ ಈಡನ್ ಪಾರ್ಕ್ ಸ್ಟೇಡಿಯಂನಲ್ಲಿ ಮೊದಲ ಏಕದಿನ ಅಂತರ್ರಾಷ್ಟ್ರೀಯ ಪಂದ್ಯವನ್ನಾಡಲಿವೆ.
ಭಾರತ ತಂಡ ಟಿ-20 ಸರಣಿಯ ಯಶಸ್ಸು ಮುಂದುವರಿಸುವ ಗುರಿ ಇಟ್ಟುಕೊಂಡಿದ್ದರೆ, ನ್ಯೂಝಿಲ್ಯಾಂಡ್ ತಂಡ ಈಡನ್ಪಾರ್ಕ್ನ ತವರಿನ ವಾತಾವರಣದ ಲಾಭ ಪಡೆಯುವ ವಿಶ್ವಾಸದಲ್ಲಿದೆ.
ನ್ಯೂಝಿಲ್ಯಾಂಡ್ ತಂಡ ಆಕ್ಲೆಂಡ್ನಲ್ಲಿ ಇತ್ತೀಚೆಗೆ ನಡೆದಿದ್ದ ನಾಲ್ಕನೇ ಟಿ-20 ಪಂದ್ಯದಲ್ಲಿ 259 ರನ್ ಗಳಿಸಿ ಭಾರತವನ್ನು 9 ವಿಕೆಟ್ಗೆ 172 ರನ್ಗೆ ನಿಯಂತ್ರಿಸಿ 87 ರನ್ಗಳಿಂದ ಜಯ ಗಳಿಸಿತ್ತು. ಈಡನ್ಪಾರ್ಕ್ನಲ್ಲಿ 2007ರಲ್ಲಿ ಗರಿಷ್ಠ ಏಕದಿನ ಸ್ಕೋರ್(340)ದಾಖಲಾಗಿತ್ತು. ಕಳೆದ ಎರಡು ಏಕದಿನ ಪಂದ್ಯಗಳಲ್ಲಿ ಹೊನಲುಬೆಳಕಿನಡಿ ಆಡಿದ್ದ ತಂಡಗಳು 150 ಹಾಗೂ 76 ರನ್ಗೆ ಆಲೌಟಾಗಿದ್ದವು.
ಈಡನ್ ಪಾರ್ಕ್ ಮೈದಾನವು ಪರ್ತ್ ನಂತರ ವಿಶ್ವದ ಎರಡನೇ ಹೆಚ್ಚು ಬೌನ್ಸ್ ಇರುವ ಮೈದಾನವಾಗಿದೆ ಎಂದು ಗ್ಲೆನ್ ಫಿಲಿಪ್ಸ್ ಅಭಿಪ್ರಾಯಪಟ್ಟಿದ್ದಾರೆ. ಪಿಚ್ನಲ್ಲಿನ ಬೌನ್ಸ್ 2027ರ ವಿಶ್ವಕಪ್ಗೆ ತಯಾರಿ ನಡೆಸಲು ಉಭಯ ತಂಡಗಳಿಗೆ ನೆರವಾಗಲಿದೆ.
ನ್ಯೂಝಿಲ್ಯಾಂಡ್ ತಂಡವು 2023ರ ಏಕದಿನ ವಿಶ್ವಕಪ್ ಸೆಮಿ ಫೈನಲ್ನಲ್ಲಿ ಭಾರತ ತಂಡದ ವಿರುದ್ಧ ಸೋತಿದ್ದರೂ ಆ ನಂತರ ದ್ವಿಪಕ್ಷೀಯ ಏಕದಿನ ಸರಣಿಯಲ್ಲಿ ಜಯಶಾಲಿಯಾಗಿತ್ತು. ಎರಡೂ ತಂಡಗಳು ಇತ್ತೀಚೆಗೆ ಟಿ-20 ಸರಣಿಯಲ್ಲಿ ತೀವ್ರ ಪೈಪೋಟಿ ನಡೆಸಿವೆ. ಎರಡೂ ತಂಡಗಳ ಕೆಲವು ಟೆಸ್ಟ್ ಆಟಗಾರರು ಕೊನೆಯ ಎರಡು ಪಂದ್ಯಗಳಿಂದ ಹೊರಗುಳಿಯುತ್ತಿರುವ ಕಾರಣ ಏಕದಿನ ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ಭಾರೀ ಪೈಪೋಟಿ ಕಂಡು ಬರಬಹುದು.
ಶುಭಮನ್ ಗಿಲ್ ಪ್ರಸಕ್ತ ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ಭಾರತದ ನಾಯಕನಾಗಿರುತ್ತಾರೆ, ಶ್ರೇಯಸ್ ಅಯ್ಯರ್ ಕೊನೆಯ ಎರಡು ಏಕದಿನ ಪಂದ್ಯದಲ್ಲಿ ನಾಯಕತ್ವವಹಿಸಲಿದ್ದಾರೆ.
ಟೀಮ್ ನ್ಯೂಸ್: ಮೊದಲ ಏಕದಿನ ಪಂದ್ಯದ ಹಿನ್ನೆಲೆಯಲ್ಲಿ ನಡೆದ ಫೀಲ್ಡಿಂಗ್ ಕಸರತ್ತಿನ ವೇಳೆ ಮ್ಯಾಟ್ ಹೆನ್ರಿ ಅವರಿಗೆ ಡಿಕ್ಕಿಯಾದ ಡೆವೊನ್ ಕಾನ್ವೆ ಅವರು ಮೊದಲ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿದೆ. ಬೌಲರ್ ಹೆನ್ರಿ ಕೂಡ ಆಡುವುದು ಅನುಮಾನ. ನ್ಯೂಝಿಲ್ಯಾಂಡ್ ತಂಡದಲ್ಲಿ ಈಗಾಗಲೇ ಮಾರ್ಕ್ ಚಾಪ್ಮನ್ ಹಾಗೂ ರಚಿನ್ ರವೀಂದ್ರ ಅನುಪಸ್ಥಿತಿ ಕಾಡುತ್ತಿದೆ. ಟಿಮ್ ಸೀಫರ್ಟ್ ಮತ್ತೆ ಏಕದಿನ ತಂಡಕ್ಕೆ ಮರಳಲು ಬಾಗಿಲು ತೆರೆದಿದೆ. ಹೆನ್ರಿ ನಿಕೊಲ್ಸ್ ಅವರು ಕಿವೀಸ್ನ ಮೀಸಲು ಆರಂಭಿಕ ಆಟಗಾರನಾಗಿದ್ದು, ಆಡುವ 11ರ ಬಳಗ ಸೇರಲಿದ್ದಾರೆ.
ಭಾರತ ತಂಡದಲ್ಲಿ ಜಸ್ಪ್ರಿತ್ ಬುಮ್ರಾ ಹಾಗೂ ಹಾರ್ದಿಕ್ ಪಾಂಡ್ಯ ಅವರ ಅನುಪಸ್ಥಿತಿ ಇದೆ. ದೀರ್ಘ ಸರಣಿಯಲ್ಲಿ ತನ್ನ ಬೌಲಿಂಗ್ ಶಕ್ತಿ ಪ್ರದರ್ಶಿಸಲು ನಿತೀಶ್ ರೆಡ್ಡಿಗೆ ಉತ್ತಮ ಅವಕಾಶ ಲಭಿಸಿದೆ. ನಾಲ್ಕನೇ ಕ್ರಮಾಂಕದಲ್ಲಿ ಋತುರಾಜ್ ಗಾಯಕ್ವಾಡ್ ಬದಲಿಗೆ ಶ್ರೇಯಸ್ ಅಯ್ಯರ್ ಆಡಲು ಸಜ್ಜಾಗಿದ್ದಾರೆ. ಸ್ಪಿನ್ನರ್ ರೂಪದಲ್ಲಿ ಅಕ್ಷರ್ ಪಟೇಲ್ ವಾಪಸಾಗಲಿದ್ದಾರೆ. ಭಾರತ ತಂಡವು ಕುಲದೀಪ್ ಯಾದವ್ರನ್ನು ಕೈಬಿಟ್ಟು ಮೂವರು ಆಲ್ರೌಂಡರ್ಗಳನ್ನು ಆಡಿಸಬಹುದು.
ಪಿಚ್ ಹಾಗೂ ವಾತಾವರಣ
ಟಿ-20 ಕ್ರಿಕೆಟ್ ಆಡಿದ ಪಿಚ್ನಲ್ಲಿ ಏಕದಿನ ಪಂದ್ಯ ನಡೆಯುತ್ತಿಲ್ಲ. ಹೀಗಾಗಿ ಬ್ಯಾಟ್ ಹಾಗೂ ಬಾಲ್ನಲ್ಲಿ ಸಮತೋಲನವಿರುವ ವಿಶ್ವಾಸವಿದೆ. ಎಂದಿನಂತೆ ಪಿಚ್ನಲ್ಲಿ ಉತ್ತಮ ಬೌನ್ಸ್ ನಿರೀಕ್ಷಿಸಬಹುದು. ಸಾಂಪ್ರದಾಯಿಕವಾಗಿ ಈಡನ್ ಪಾರ್ಕ್ ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿದೆ. ಚಿಕ್ಕ ಬೌಂಡರಿಗಳು ಆಕ್ರಮಣಕಾರಿ ಆಟಗಾರರಿಗೆ ಸೂಕ್ತವಾಗಿದೆ. ಹೊಸ ಚೆಂಡಿನಲ್ಲಿ ವೇಗದ ಬೌಲರ್ಗಳು ಅವಕಾಶ ಗಿಟ್ಟಿಸಿಕೊಳ್ಳಬಹುದು. ಗರಿಷ್ಠ ಮೊತ್ತದ ಪಂದ್ಯಕ್ಕೆ ಈ ಮೈದಾನ ಹೆಸರುವಾಸಿಯಾಗಿದೆ. ವಾತಾವರಣ ಬಹುತೇಕ ಶುಭ್ರವಾಗಿದ್ದು, ಹವಾಮಾನ ಮುನ್ಸೂಚನೆಯ ಪ್ರಕಾರ ಬೆಳಗ್ಗಿನ ಅವಧಿಯಲ್ಲಿ ಮಳೆಯಾಗುವ ಸಾಧ್ಯತೆ ಶೇ.56ರಷ್ಟಿದೆೆ. ಮಧ್ಯಾಹ್ನ ಹಾಗೂ ಸಂಜೆ ವೇಳೆ ವಾತಾವರಣ ತಿಳಿಯಾಗಲಿದೆ. ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯಿಲ್ಲ.
ಅಂಕಿ-ಅಂಶಗಳು
ರೋಹಿತ್ ಶರ್ಮಾ ನ್ಯೂಝಿಲ್ಯಾಂಡ್ನಲ್ಲಿ ನಡೆದ ಏಕದಿನ ಕ್ರಿಕೆಟ್ನಲ್ಲಿ ಶತಕ ಗಳಿಸಿಲ್ಲ. ಅವರು 13 ಇನಿಂಗ್ಸ್ಗಳಲ್ಲಿ 36.41ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.
ಈ ವರ್ಷ ಶುಭಮನ್ ಗಿಲ್ ಏಕದಿನ ಕ್ರಿಕೆಟ್ನಲ್ಲಿ ಗರಿಷ್ಠ ರನ್ ಗಳಿಸಿದ್ದಾರೆ. ಕೇವಲ 11 ಇನಿಂಗ್ಸ್ಗಳಲ್ಲಿ 111.87ರ ಸರಾಸರಿಯಲ್ಲಿ, 118.7ರ ಸ್ಟ್ರೈಕ್ರೇಟ್ನಲ್ಲಿ 895 ರನ್ ಗಳಿಸಿದ್ದಾರೆ.
ತಂಡಗಳು
ಭಾರತ(ಸಂಭಾವ್ಯ): 1.ರೋಹಿತ್ ಶರ್ಮಾ, 2. ಶುಭಮನ್ ಗಿಲ್(ನಾಯಕ), 3. ವಿರಾಟ್ ಕೊಹ್ಲಿ, 4. ಶ್ರೇಯಸ್ ಅಯ್ಯರ್, 5. ಕೆ.ಎಲ್.ರಾಹುಲ್(ವಿಕೆಟ್ಕೀಪರ್), 6. ನಮನ್ ಧೀರ್, 7. ನಿತೀಶ್ ಕುಮಾರ್ ರೆಡ್ಡಿ, 8. ಅಕ್ಷರ್ ಪಟೇಲ್, 9. ಗುರ್ನೂರ್ ಬ್ರಾರ್, 10. ಮುಹಮ್ಮದ್ ಸಿರಾಜ್, 11.ಅರ್ಷದೀಪ್ ಸಿಂಗ್.
ನ್ಯೂಝಿಲ್ಯಾಂಡ್(ಸಂಭಾವ್ಯ): 1. ವಿಲ್ ಯಂಗ್, 2. ಟಿಮ್ ಸೀಫರ್ಟ್/ಹೆನ್ರಿ ನಿಕೊಲ್ಸ್, 3. ಡ್ಯಾರಿಲ್ ಮಿಚೆಲ್, 4. ಗ್ಲೆನ್ ಫಿಲಿಪ್ಸ್, 5. ಟಾಮ್ ಲ್ಯಾಥಮ್(ವಿಕೆಟ್ಕೀಪರ್), 6. ಮೈಕಲ್ ಬ್ರೆಸ್ವೆಲ್, 7. ಮಿಚೆಲ್ ಸ್ಯಾಂಟ್ನರ್(ನಾಯಕ), 8. ನಾಥನ್ ಸ್ಮಿತ್, 9. ಕೈಲ್ ಜಮೀಸನ್, 10.ಮ್ಯಾಟ್ ಹೆನ್ರಿ/ಬ್ಲೇರ್ ಟಿಕ್ನೆರ್, 11. ಜೇಕಬ್ ಡಫಿ.






