ಮೂರನೇ ಏಕದಿನ| ಭಾರತ ವಿರುದ್ಧ ಸರಣಿ ಗೆದ್ದ ನ್ಯೂಝಿಲ್ಯಾಂಡ್: ಕೊಹ್ಲಿ ಶತಕ ವ್ಯರ್ಥ

Pc: ICC
ಇಂದೋರ್, ಜ.18: ವಿರಾಟ್ ಕೊಹ್ಲಿ ಹೋರಾಟಕಾರಿ ಶತಕದ(124 ರನ್, 108 ಎಸೆತ, 10 ಬೌಂಡರಿ, 3 ಸಿಕ್ಸರ್)ಹೊರತಾಗಿಯೂ ನ್ಯೂಝಿಲ್ಯಾಂಡ್ ಕ್ರಿಕೆಟ್ ತಂಡದ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ತತ್ತರಿಸಿದ ಟೀಮ್ ಇಂಡಿಯಾ ಮೂರನೇ ಹಾಗೂ ಕೊನೆಯ ಏಕದಿನ ಅಂತರ್ರಾಷ್ಟ್ರೀಯ ಪಂದ್ಯವನ್ನು 41 ರನ್ಗಳ ಅಂತರದಿಂದ ಕಳೆದುಕೊಂಡಿದೆ. ಈ ಮೂಲಕ ಕಿವೀಸ್ ಪಡೆ ಮೂರು ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ರವಿವಾರ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 338 ರನ್ ಗುರಿ ಪಡೆದಿದ್ದ ಭಾರತ ತಂಡವು 46 ಓವರ್ಗಳಲ್ಲಿ 296 ರನ್ ಗಳಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡಿತು.
ಕ್ರಿಸ್ಟಿಯನ್ ಕ್ಲಾರ್ಕ್(3-54) ಹಾಗೂ ಝ್ಯಾಕ್ ಫೌಲ್ಕ್ಸ್(3-77) ತಲಾ ಮೂರು ವಿಕೆಟ್ಗಳನ್ನು ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಜೇಡನ್ ಲೆನೊಕ್ಸ್(2-42)ಎರಡು ವಿಕೆಟ್ಗಳನ್ನು ಕಬಳಿಸಿ ಮಿಂಚಿದರು.
ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ(11 ರನ್),ನಾಯಕ ಶುಭಮನ್ ಗಿಲ್(23 ರನ್), ಉಪ ನಾಯಕ ಶ್ರೇಯಸ್ ಅಯ್ಯರ್(3 ರನ್) ಹಾಗೂ ಕೆ.ಎಲ್.ರಾಹುಲ್(1 ರನ್)ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಈ ವೇಳೆ ಭಾರತವು 71 ರನ್ಗೆ 4 ವಿಕೆಟ್ಗಳನ್ನು ಕಳೆದುಕೊಂಡಿತು.
ಆಗ ಕೊಹ್ಲಿ ಹಾಗೂ ನಿತೀಶ್ ರೆಡ್ಡಿ(53 ರನ್, 57 ಎಸೆತ, 2 ಬೌಂಡರಿ, 2 ಸಿಕ್ಸರ್)ಐದನೇ ವಿಕೆಟ್ಗೆ 88 ರನ್ ಜೊತೆಯಾಟ ನಡೆಸಿ ಇನಿಂಗ್ಸ್ ರಿಪೇರಿಗೆ ಮುಂದಾದರು. ರೆಡ್ಡಿ ವಿಕೆಟನ್ನು ಪಡೆದ ಕ್ಲಾರ್ಕ್ ಈ ಜೋಡಿಯನ್ನು ಬೇರ್ಪಡಿಸಿದರು.
ರವೀಂದ್ರ ಜಡೇಜ(12 ರನ್) ಬೇಗನೆ ಔಟಾದರು. ಏಳನೇ ವಿಕೆಟ್ಗೆ 99 ರನ್ ಸೇರಿಸಿದ ಕೊಹ್ಲಿ ಹಾಗೂ ಹರ್ಷಿತ್ ರಾಣಾ ಭಾರತಕ್ಕೆ ಗೆಲುವಿನ ಆಸೆ ಮೂಡಿಸಿದರು. ಆದರೆ ರಾಣಾ 43 ಎಸೆತಗಳಲ್ಲಿ ತಲಾ 4 ಬೌಂಡರಿ, ಸಿಕ್ಸರ್ ಸಹಿತ 52 ರನ್ ಗಳಿಸಿದ ಬೆನ್ನಿಗೇ ಔಟಾದರು.
ವಿರಾಟ್ ಕೊಹ್ಲಿ 54ನೇ ಏಕದಿನ ಶತಕ(124 ರನ್, 108 ಎಸೆತ)ಗಳಿಸಿದರೂ ಭಾರತಕ್ಕೆ ಗೆಲುವು ಒಲಿಯಲಿಲ್ಲ.
ನ್ಯೂಝಿಲ್ಯಾಂಡ್ 337/8: ಇದಕ್ಕೂ ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ನ್ಯೂಝಿಲ್ಯಾಂಡ್ ತಂಡವು ಆರಂಭಿಕ ಆಟಗಾರರನ್ನು ಅಲ್ಪ ಮೊತ್ತಕ್ಕೆ ಕಳೆದುಕೊಂಡರೂ ಅದರಿಂದ ಬೇಗನೆ ಚೇತರಿಸಿಕೊಂಡು ಡ್ಯಾರಿಲ್ ಮಿಚೆಲ್(137 ರನ್, 131 ಎಸೆತ, 15 ಬೌಂಡರಿ, 3 ಸಿಕ್ಸರ್)ಹಾಗೂ ಗ್ಲೆನ್ ಫಿಲಿಪ್ಸ್ (106 ರನ್, 88 ಎಸೆತ, 9 ಬೌಂಡರಿ, 3 ಸಿಕ್ಸರ್)ಶತಕಗಳ ಸಹಾಯದಿಂದ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ಗಳ ನಷ್ಟಕ್ಕೆ 337 ರನ್ ಗಳಿಸಿದೆ.
1.1 ಓವರ್ಗಳಲ್ಲಿ ನ್ಯೂಝಿಲ್ಯಾಂಡ್ ತಂಡವು ಹೆನ್ರಿ ನಿಕೊಲ್(0) ಹಾಗೂ ಡೆವೊನ್ ಕಾನ್ವೆ (5 ರನ್)ವಿಕೆಟ್ಗಳನ್ನು ಕಳೆದುಕೊಂಡಿತು.
ಆಗ ಮೂರನೇ ವಿಕೆಟ್ಗೆ 53 ರನ್ ಜೊತೆಯಾಟ ನಡೆಸಿದ ಮಿಚೆಲ್ ಹಾಗೂ ವಿಲ್ ಯಂಗ್(30 ರನ್, 41 ಎಸೆತ)ತಂಡವನ್ನು ಆಧರಿಸಿದರು.
ವಿಲ್ ಯಂಗ್ ವಿಕೆಟ್ ಒಪ್ಪಿಸಿದಾಗ ಗ್ಲೆನ್ ಫಿಲಿಪ್ಸ್ ಜೊತೆ ಕೈಜೋಡಿಸಿದ ಮಿಚೆಲ್ ನಾಲ್ಕನೇ ವಿಕೆಟ್ಗೆ 219 ರನ್ ಜೊತೆಯಾಟ ನಡೆಸಿ ತಂಡವನ್ನು ಉತ್ತಮ ಮೊತ್ತದತ್ತ ಮುನ್ನಡೆಸಿದರು.
ಈ ಇಬ್ಬರನ್ನು ಹೊರತುಪಡಿಸಿ ಉಳಿದ ಆಟಗಾರರು ದೊಡ್ಡ ಮೊತ್ತ ಗಳಿಸಲಿಲ್ಲ. ನಾಯಕ ಮೈಕಲ್ ಬ್ರೆಸ್ವೆಲ್ 18 ಎಸೆತಗಳಲ್ಲಿ 1 ಬೌಂಡರಿ ಹಾಗೂ ಮೂರು ಸಿಕ್ಸರ್ಗಳ ಸಹಿತ ಔಟಾಗದೆ 28 ರನ್ ಗಳಿಸಿದರು.
ಭಾರತದ ಬೌಲಿಂಗ್ ವಿಭಾಗದಲ್ಲಿ ವೇಗಿಗಳಾದ ಅರ್ಷದೀಪ್ ಸಿಂಗ್(3-63) ಹಾಗೂ ಹರ್ಷಿತ್ ರಾಣಾ (3-84)ತಲಾ ಮೂರು ವಿಕೆಟ್ಗಳನ್ನು ಪಡೆದರು.







