ಭಾರತ - ಪಾಕಿಸ್ತಾನದ ನಡುವೆ ಕ್ರಿಕೆಟ್ ಸಂಬಂಧ ಮುಂದುವರಿಯಬೇಕು: ಸೌರವ್ ಗಂಗುಲಿ

ಸೌರವ್ ಗಂಗುಲಿ (PTI)
ಮುಂಬೈ: ಭಾರತ ಮತ್ತು ಪಾಕಿಸ್ತಾನ ತಂಡಗಳು 2025ರ ಏಷ್ಯಾ ಕಪ್ ಟೂರ್ನಿಯಲ್ಲಿ ಮುಖಾಮುಖಿಯಾಗಲು ಸಜ್ಜಾಗಿರುವ ಹಿನ್ನೆಲೆಯಲ್ಲಿ, ಎರಡೂ ದೇಶಗಳು ತಮ್ಮ ಕ್ರಿಕೆಟ್ ಸಂಬಂಧವನ್ನು ಮುಂದುವರಿಸಬೇಕು ಎಂಬ ಅಭಿಪ್ರಾಯವನ್ನು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐದ ಮಾಜಿ ಅಧ್ಯಕ್ಷ ಸೌರವ್ ಗಂಗುಲಿ ವ್ಯಕ್ತಪಡಿಸಿದ್ದಾರೆ.
“ಕ್ರಿಕೆಟ್ ಮುಂದುವರಿಯಬೇಕು. ಆದರೆ ಪಹಲ್ಗಾಮ್ ಘಟನೆಯಂಥ ಭಯೋತ್ಪಾದಕ ದಾಳಿಗಳು ನಡೆಯಬಾರದು. ಭಾರತ ಭಯೋತ್ಪಾದನೆಯ ವಿರುದ್ಧ ಸದಾ ಬಲವಾದ ನಿಲುವು ಹೊಂದಿದೆ. ಅಂತಹ ದಾಳಿಗಳನ್ನು ಖಂಡಿಸಲೇಬೇಕು. ಆದರೆ, ಅದರ ನಡುವೆ ಕ್ರೀಡೆಗಳು ನಿಲ್ಲಬಾರದು” ಎಂದು ಗಂಗುಲಿ ANIಗೆ ನೀಡಿದ ಹೇಳಿಕೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
2025ರ ಏಷ್ಯಾ ಕಪ್ ಟೂರ್ನಿಯ ವೇಳಾಪಟ್ಟಿ ಇತ್ತೀಚೆಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಬಿಡುಗಡೆ ಮಾಡಿದೆ ಭಾರತ ಹಾಗೂ ಪಾಕಿಸ್ತಾನವನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಒಮಾನ್ ತಂಡಗಳೊಂದಿಗೆ ಒಂದೇ ಗುಂಪಿನಲ್ಲಿ ಇರಿಸಲಾಗಿದೆ. ಸೆಪ್ಟೆಂಬರ್ 14ರಂದು ಈ ಎರಡೂ ಬಲಿಷ್ಠ ತಂಡಗಳು ಮೊದಲ ಪಂದ್ಯದಲ್ಲಿ ಸೆಣಸಲಿವೆ. ಎರಡೂ ತಂಡಗಳು ಸೂಪರ್ ಫೋರ್ ಹಂತಕ್ಕೆ ಅರ್ಹತೆ ಪಡೆದರೆ, ಸೆಪ್ಟೆಂಬರ್ 21ರಂದು ಮತ್ತೊಮ್ಮೆ ಎದುರಾಗುವ ಸಾಧ್ಯತೆಯಿದೆ. ಫೈನಲ್ ಗೆ ತಲುಪಿದರೆ, ಭಾರತ–ಪಾಕಿಸ್ತಾನ ನಡುವೆ ಮೂರನೇ ಬಾರಿಗೆ ಪಂದ್ಯ ನಡೆಯುವ ಸಾಧ್ಯತೆ ಇದೆ.
ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬೆನ್ನಲ್ಲೇ ಭಾರತವು ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡಲು ಒಪ್ಪಿಕೊಂಡಿರುವುದು ಟೀಕೆಗೆ ಗುರಿಯಾಗಿದೆ. ಆದರೆ ಬಿಸಿಸಿಐನ ನಿರ್ಧಾರವನ್ನು ಬೆಂಬಲಿಸಿದ ಗಂಗುಲಿ, “ರಾಷ್ಟ್ರೀಯ ಭದ್ರತೆ ಬಗ್ಗೆ , ಭಾರತ ಭಯೋತ್ಪಾದನೆಯ ವಿರುದ್ಧ ಸದಾ ಬಲವಾದ ನಿಲುವು ಹೊಂದಿದೆ. ಅಂತಹ ದಾಳಿಗಳನ್ನು ಖಂಡಿಸಲೇಬೇಕು. ಆದರೆ ಕ್ರೀಡಾಕ್ಷೇತ್ರದಲ್ಲಿ ಸ್ನೇಹದ ಬಾಗಿಲು ಸದಾ ತೆರೆಯಿರಬೇಕು” ಎಂದು ಹೇಳಿದ್ದಾರೆ.
ಈ ಬಾರಿ ಏಷ್ಯಾ ಕಪ್ನಲ್ಲಿ ಒಟ್ಟು 19 ಪಂದ್ಯಗಳು ನಡೆಯಲಿದ್ದು, 8 ತಂಡಗಳು ಭಾಗವಹಿಸುತ್ತಿವೆ. ಹಿಂದಿನ ಆವೃತ್ತಿಯ ಹೋಲಿಕೆಯಲ್ಲಿ ಎರಡು ತಂಡಗಳು ಹೆಚ್ಚಾಗಿವೆ. ಟೂರ್ನಿಯ ಪಂದ್ಯಗಳು ಯುಎಇನ ಅಬುಧಾಬಿ ಮತ್ತು ದುಬೈನಲ್ಲಿ ನಡೆಯಲಿದ್ದು, ನಿರ್ದಿಷ್ಟ ಪಂದ್ಯಗಳ ಸ್ಥಳಗಳನ್ನು ಇನ್ನೂ ಘೋಷಿಸಲಾಗಿಲ್ಲ. ಗಡಿಯಾಚೆಗಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಬಿಸಿಸಿಐ ಆತಿಥೇಯ ಹಕ್ಕುಗಳನ್ನು ಹೊಂದಿದ್ದರೂ, ಪಂದ್ಯಾವಳಿಯನ್ನು ತಟಸ್ಥ ಸ್ಥಳದಲ್ಲಿ ಆಯೋಜಿಸಲಾಗುತ್ತಿದೆ.
ಭಾರತ–ಪಾಕಿಸ್ತಾನ ಕ್ರಿಕೆಟ್ ಪಂದ್ಯಗಳು ಯಾವಾಗಲೂ ರೋಮಾಂಚನಕಾರಿಯಾಗಿದ್ದು ವಿಶ್ವದ ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆಯುತ್ತವೆ.







