ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ : ನಾಳೆ ಭಾರತಕ್ಕೆ ಪಾಕಿಸ್ತಾನ ಎದುರಾಳಿ

Photo File: Altaf Qadri/AP
ಕೊಲಂಬೊ, ಅ.4: ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಬಹುನಿರೀಕ್ಷಿತ ಪಂದ್ಯಗಳ ಪೈಕಿ ಒಂದಾಗಿರುವ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಲೀಗ್ ಪಂದ್ಯವು ರವಿವಾರ ಪ್ರೇಮದಾಸ ಕ್ರೀಡಾಂಗಣದಲ್ಲಿ ನಿಗದಿಯಾಗಿದೆ. ಈ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ.
ಇತ್ತೀಚೆಗೆ ಕೊನೆಗೊಂಡಿರುವ ಪುರುಷರ ಏಶ್ಯ ಕಪ್ನಲ್ಲಿ ಭಾರತ-ಪಾಕ್ ತಂಡಗಳು 3 ಬಾರಿ ಮುಖಾಮುಖಿಯಾಗಿದ್ದು, ಈಗ ಈ ಎರಡು ತಂಡಗಳ ನಡುವೆ 4ನೇ ಸುತ್ತಿನ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ.
ಪಾಕ್ ತಂಡವು ಕೆಲವೇ ದಿನಗಳ ಹಿಂದೆ ಕೊಲಂಬೊದಲ್ಲಿ ಬಾಂಗ್ಲಾದೇಶ ವಿರುದ್ಧ 7 ವಿಕೆಟ್ಗಳ ಅಂತರದಿಂದ ಸೋತಿತ್ತು. ಭಾರತ ವಿರುದ್ಧ ಪಂದ್ಯದಲ್ಲಿ ತನ್ನ ಕೆಟ್ಟ ಪ್ರದರ್ಶನ ಸುಧಾರಿಸಿಕೊಳ್ಳುವ ವಿಶ್ವಾಸದಲ್ಲಿದೆ.
ಗುವಾಹಟಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮಳೆಬಾಧಿತ ವಿಶ್ವಕಪ್ನ ಆರಂಭಿಕ ಪಂದ್ಯದಲ್ಲಿ ಭಾರತವು 59 ರನ್ನಿಂದ ಜಯ ಸಾಧಿಸಿದ್ದು, ಈ ಪಂದ್ಯದಲ್ಲಿ ರೇಣುಕಾ ಸಿಂಗ್ ವಿಶ್ರಾಂತಿ ಪಡೆದಿದ್ದರು. ಒಂದು ವೇಳೆ ಭಾರತವು ಅಮನ್ಜೋತ್ ಕೌರ್ಗೆ ವಿಶ್ರಾಂತಿ ನೀಡಿದರೆ ಅರುಂಧತಿ ರೆಡ್ಡಿ ಅವಕಾಶ ಪಡೆಯಬಹುದು.
ಪಾಕಿಸ್ತಾನ ತಂಡವು 2013ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕಟಕ್ನಲ್ಲಿ ಭಾರತದ ವಿರುದ್ಧ ಗರಿಷ್ಠ ಸ್ಕೋರ್(192/7)ಗಳಿಸಿತ್ತು.
ಸ್ನೇಹ ರಾಣಾ ಪಾಲಿಗೆ ಕೊಲಂಬೊದ ಕ್ರೀಡಾಂಗಣ ವಿಶೇಷವಾಗಿದೆ. ಶ್ರೀಲಂಕಾ ಹಾಗೂ ದಕ್ಷಿಣ ಆಫ್ರಿಕ ಒಳಗೊಂಡಿರುವ ತ್ರಿಕೋನ ಸರಣಿಯಲ್ಲಿ ಭಾರತದ ಪರ ರಾಣಾ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.
ಮಹಿಳೆಯರ ಏಕದಿನ ಕ್ರಿಕೆಟ್ನಲ್ಲಿ ಭಾರತ ತಂಡವು ಪಾಕಿಸ್ತಾನದ ವಿರುದ್ಧ ಈ ತನಕ ಆಡಿರುವ ಎಲ್ಲ 11 ಪಂದ್ಯಗಳನ್ನು ಗೆದ್ದುಕೊಂಡು ಸಂಪೂರ್ಣ ಮೇಲುಗೈ ಸಾಧಿಸಿದೆ. 2022ರಲ್ಲಿ ನ್ಯೂಝಿಲ್ಯಾಂಡ್ನಲ್ಲಿ ನಡೆದಿದ್ದ ಮಹಿಳೆಯರ ವಿಶ್ವಕಪ್ನಲ್ಲಿ ಭಾರತವು 107 ರನ್ ಅಂತರದಿಂದ ಸುಲಭ ಜಯ ದಾಖಲಿಸಿತ್ತು. ಬಹುತೇಕ ಪಂದ್ಯಗಳನ್ನು ಸುಲಭವಾಗಿಯೇ ಗೆದ್ದುಕೊಂಡಿದೆ.
ಭಾರತ ತಂಡದಲ್ಲಿ ಆರಂಭಿಕ ಆಟಗಾರ್ತಿ ಸ್ಮತಿ ಮಂಧಾನ ಹಾಗೂ ಆಲ್ ರೌಂಡರ್ ದೀಪ್ತಿ ಶರ್ಮಾ ಸ್ಟಾರ್ ಆಟಗಾರ್ತಿಯರಾಗಿದ್ದಾರೆ. ಈ ಹಿಂದಿನ ಪಂದ್ಯದಲ್ಲಿ ದೀಪ್ತಿ, ಪಾಕಿಸ್ತಾನದ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದರು. ಲಂಕಾ ವಿರುದ್ಧ ಮಂಗಳವಾರ ನಡೆದಿದ್ದ ಪಂದ್ಯದಲ್ಲಿ 3 ವಿಕೆಟ್ಗಳನ್ನು ಉರುಳಿಸಿದ್ದಲ್ಲದೆ, 54 ರನ್ ಗಳಿಸಿದ್ದರು.
ಪಾಕ್ ತಂಡದಲ್ಲಿ ಹಿರಿಯ ಬ್ಯಾಟರ್ ಸಿದ್ರಾ ಅಮಿನ್ ಹಾಗೂ ಸ್ಪಿನ್ನರ್ ನಶ್ರಾ ಸಂಧು ಪ್ರಮುಖ ಆಟಗಾರ್ತಿಯರಾಗಿದ್ದಾರೆ.
ಉಭಯ ತಂಡಗಳು ಆಡುವ 11ರ ಬಳಗದಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ.
ಪಂದ್ಯ ಆರಂಭದ ಸಮಯ: ಮಧ್ಯಾಹ್ನ 3:00







