T20 ವಿಶ್ವಕಪ್ | 24 ಗಂಟೆಗಳ ಕಾಲ ಕಾಯಿರಿ: ಸೂರ್ಯಕುಮಾರ್ ಯಾದವ್

Credit: PTI Photo
ಕೊಲೊಂಬೊ: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನದ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಇನ್ನು 24 ಗಂಟೆಗಳು ಬಾಕಿಯಿದ್ದು, ಸಾಂಪ್ರದಾಯಿಕ ಹಸ್ತಲಾಘವದ ಕುರಿತು ಕೇಳಲಾದ ಪ್ರಶ್ನೆಗೆ “ಇನ್ನು 24 ಗಂಟೆಗಳ ಕಾಲ ಕಾಯಿರಿ” ಎಂದು ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಸೂಚ್ಯವಾಗಿ ಹೇಳಿದ್ದಾರೆ.
“ನಾಳೆಯವರೆಗೆ ಕಾಯಿರಿ” ಎಂದು ಪಾಕಿಸ್ತಾನದ ನಾಯಕ ಸಲ್ಮಾನ್ ಅಲಿ ಆಘಾ ಕೂಡ ಸೂರ್ಯಕುಮಾರ್ ಯಾದವ್ ಅವರ ಮಾತನ್ನೇ ಪುನರುಚ್ಚರಿಸಿದ್ದಾರೆ.
ನಾಳೆ (ರವಿವಾರ) ನಡೆಯಲಿರುವ ಪಂದ್ಯಕ್ಕೂ ಮುನ್ನ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಉಭಯ ತಂಡಗಳ ನಾಯಕರು ಸಾಂಪ್ರದಾಯಿಕ ಹಸ್ತಲಾಘವದ ಕುರಿತು ಯಾವುದೇ ಸ್ಪಷ್ಟ ಉತ್ತರ ನೀಡಲಿಲ್ಲ. ನಾಳೆ ನಡೆಯಲಿರುವ ಹೈವೋಲ್ಟೇಜ್ ಪಂದ್ಯದ ಆರಂಭದಲ್ಲಿ ಅಥವಾ ಪಂದ್ಯ ಮುಕ್ತಾಯಗೊಂಡ ಬಳಿಕ ಸಾಂಪ್ರದಾಯಿಕ ಹಸ್ತಲಾಘವ ನಡೆಯಲಿದೆಯೇ ಎಂಬ ಕುರಿತು ಉಭಯ ನಾಯಕರೂ ಯಾವುದೇ ಬದ್ಧತೆಯನ್ನು ಪ್ರದರ್ಶಿಸಲಿಲ್ಲ.
ಪಹಲ್ಗಾಮ್ ಭಯೋತ್ಪಾದಕ ದಾಳಿ ಹಾಗೂ ಅದರ ಬೆನ್ನಿಗೇ ಭಾರತೀಯ ಸಶಸ್ತ್ರ ಪಡೆಗಳಿಂದ ನಡೆದ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ಬಳಿಕ, ಕಳೆದ ವರ್ಷ ದುಬೈನಲ್ಲಿ ನಡೆದ ಏಷ್ಯಾ ಕಪ್ ಕ್ರೀಡಾಕೂಟದಿಂದ ಭಾರತ ಮತ್ತು ಪಾಕಿಸ್ತಾನದ ಆಟಗಾರರು ಪರಸ್ಪರ ಹಸ್ತಲಾಘವ ಮಾಡುವುದನ್ನು ನಿಲ್ಲಿಸಿದ್ದಾರೆ.
ಹಸ್ತಲಾಘವದ ಕುರಿತು ಸೂರ್ಯಕುಮಾರ್ ಯಾದವ್ ಅವರನ್ನು ಪ್ರಶ್ನಿಸಿದಾಗ, “ಅದಕ್ಕಾಗಿ 24 ಗಂಟೆಗಳ ಕಾಲ ಕಾಯಿರಿ. ಅದರ ಕುರಿತು ಅಷ್ಟೊಂದು ಗಮನ ಹರಿಸುವ ಅಗತ್ಯವೇನಿದೆ? ನಾವು ಕ್ರಿಕೆಟ್ ಆಡಲು ಬಂದಿದ್ದೇವೆ. ನಾವು ಉತ್ತಮ ಕ್ರಿಕೆಟ್ ಆಡಲಿದ್ದೇವೆ. ನಾವು ಈ ಕುರಿತ ಎಲ್ಲ ಪ್ರಶ್ನೆಗಳನ್ನು ನಾಳೆ ತೆಗೆದುಕೊಳ್ಳಲಿದ್ದೇವೆ. ಅದಕ್ಕಾಗಿ ಕಾಯಿರಿ. ಚೆನ್ನಾಗಿ ಊಟ ಮಾಡಿ, ನಿದ್ರೆಗೆ ಹೋಗಿ” ಎಂದು ಸೂಚ್ಯವಾಗಿ ಹೇಳಿದರು.
“ನಾವು ಈ ಕುರಿತು ನಾಳೆ ಗಮನ ಹರಿಸಲಿದ್ದೇವೆ” ಎಂದು ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಆಘಾ ಕೂಡ ನಿಗೂಢ ಶೈಲಿಯಲ್ಲಿ ಉತ್ತರಿಸಿದರು.






