ಲೆಜಂಡ್ಸ್ ಕ್ರಿಕೆಟ್ | ಪಾಕ್ ವಿರುದ್ಧ ಸೆಮಿಫೈನಲ್ ನಲ್ಲಿ ಆಡಲು ಭಾರತ ನಿರಾಕರಣೆ ?
ಪಂದ್ಯ ರದ್ದಾದರೆ ಪಾಕಿಸ್ತಾನ ಫೈನಲ್ ಗೆ

Image credit: X
ಲಂಡನ್, ಜು. 30: ವರ್ಲ್ಡ್ ಚಾಂಪಿಯನ್ ಶಿಪ್ ಆಫ್ ಲೆಜಂಡ್ಸ್ (ಡಬ್ಲ್ಯುಸಿಎಲ್) 2025 ಪಂದ್ಯಾವಳಿಯ ಪಾಕಿಸ್ತಾನ ವಿರುದ್ಧದ ಸೆಮಿಫೈನಲ್ ನಲ್ಲಿ ಆಡದಿರಲು ಭಾರತ ಚಾಂಪಿಯನ್ಸ್ ತಂಡ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಪಂದ್ಯವು ಗುರುವಾರ ನಡೆಯಲು ನಿಗದಿಯಾಗಿದೆ.
ಪಾಕಿಸ್ತಾನ ವಿರುದ್ಧದ ಗುಂಪು ಹಂತದ ಪಂದ್ಯವನ್ನೂ ಭಾರತ ಬಹಿಷ್ಕರಿಸಿತ್ತು. ಯುವರಾಜ್ ಸಿಂಗ್, ಶಿಖರ್ ಧವನ್, ಯೂಸುಫ್ ಪಠಾಣ್, ಇರ್ಫಾನ್ ಪಠಾಣ್, ಪೀಯುಶ್ ಚಾವ್ಲಾ ಮುಂತಾದವರು ಭಾರತ ಚಾಂಪಿಯನ್ಸ್ ತಂಡದ ಸದಸ್ಯರಾಗಿದ್ದಾರೆ. ಅವರು ಪಾಕಿಸ್ತಾನದ ವಿರುದ್ಧ ಆಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ.
ಮಂಗಳವಾರ ನಡೆದ ತನ್ನ ಕೊನೆಯ ಗುಂಪು ಹಂತದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಚಾಂಪಿಯನ್ಸ್ ತಂಡವನ್ನು ಕೇವಲ 13.2 ಓವರ್ಗಳಲ್ಲಿ ಸೋಲಿಸುವ ಮೂಲಕ ಭಾರತ ಚಾಂಪಿಯನ್ಸ್ ಸೆಮಿಫೈನಲ್ ಪ್ರವೇಶಿಸಿದೆ.
ಎಪ್ರಿಲ್ 22ರಂದು ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ವಿರುದ್ಧ ನಡೆಸಿದ ಭೀಕರ ಹತ್ಯಾಕಾಂಡದ ಹಿನ್ನೆಲೆಯಲ್ಲಿ ಪಾಕಿಸ್ತಾನ್ ಚಾಂಪಿಯನ್ಸ್ ತಂಡದ ವಿರುದ್ಧ ಆಡಲು ಭಾರತ ಚಾಂಪಿಯನ್ಸ್ ತಂಡದ ಸದಸ್ಯರು ನಿರಾಕರಿಸಿದ್ದಾರೆ. ಆ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಡಬ್ಲ್ಯುಸಿಎಲ್ ನ ಪ್ರಧಾನ ಪ್ರಾಯೋಜಕರ ಪೈಕಿ ಒಂದಾದ ಈಸ್ಮೈಟ್ರಿಪ್ ಬುಧವಾರ ಭಾರತ-ಪಾಕಿಸ್ತಾನ ಡಬ್ಲ್ಯುಸಿಎಲ್ ಸೆಮಿಫೈನಲ್ ನಿಂದ ಹಿಂದೆ ಸರಿದಿದೆ ಎಂದು ಹೇಳಿದೆ.
ಹಾಗಾಗಿ, ಗುರುವಾರದ ಸೆಮಿಫೈನಲ್ ಪಂದ್ಯ ನಡೆಯುವ ಸಾಧ್ಯತೆ ತೀರಾ ವಿರಳವಾಗಿದೆ. ಒಂದು ವೇಳೆ ಪಂದ್ಯ ರದ್ದಾದರೆ ಗುಂಪು ಹಂತದಲ್ಲಿ ಪಡೆದಿರುವ ಉತ್ತಮ ಅಂಕಗಳ ಆಧಾರದಲ್ಲಿ ಪಾಕಿಸ್ತಾನವು ಫೈನಲ್ ತಲುಪುತ್ತದೆ.
ಡಬ್ಲ್ಯುಸಿಎಲ್ ನಲ್ಲಿ ಭಾರತದ ಏಳು-ಬೀಳಿನ ಪ್ರಯಾಣ ಅಲ್ಲಿಗೆ ಕೊನೆಗೊಳ್ಳುತ್ತದೆ. ಭಾರತವು ತನ್ನ ಅಭಿಯಾನವನ್ನು ದಕ್ಷಿಣ ಆಫ್ರಿಕ ಚಾಂಪಿಯನ್ಸ್ ವಿರುದ್ಧದ 88 ರನ್ ಸೋಲಿನೊಂದಿಗೆ ಆರಂಭಿಸಿತ್ತು. ಬಳಿಕ, ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ವಿರುದ್ಧ ಬೆನ್ನು ಬೆನ್ನಿಗೆ ಸೋಲನುಭವಿಸಿತು.







