IND Vs SA ODI | ʼವಿರಾಟ್ʼ ದರ್ಶನಕ್ಕೆ ಬೆದರಿದ ಹರಿಣಗಳು; ಭಾರತಕ್ಕೆ ರೋಚಕ ಜಯ

Photo : x/@BCCI
ರಾಂಚಿ, ನ. 30: ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ರವಿವಾರ ಭಾರತವು ವಿರಾಟ್ ಕೊಹ್ಲಿಯ ಅಮೋಘ ಶತಕದ ನೆರವಿನಿಂದ ಪ್ರವಾಸಿ ದಕ್ಷಿಣ ಆಫ್ರಿಕವನ್ನು 17 ರನ್ಗಳಿಂದ ಸೋಲಿಸಿದೆ.
ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಭಾರತವು 1-0 ಮುನ್ನಡೆ ಗಳಿಸಿದೆ.
ವಿರಾಟ್ ಕೊಹ್ಲಿ 120 ಎಸೆತಗಳಲ್ಲಿ 135 ರನ್ ಗಳಿಸಿ ತಂಡದ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದು ಅವರ 52ನೇ ಏಕದಿನ ಶತಕವಾಗಿದೆ.
ಗೆಲ್ಲಲು 50 ಓವರ್ಗಳಲ್ಲಿ 350 ರನ್ಗಳನ್ನು ಗಳಿಸುವ ಗುರಿಯನ್ನು ಪಡೆದ ದಕ್ಷಿಣ ಆಫ್ರಿಕ 49.2 ಓವರ್ಗಳಲ್ಲಿ 332 ರನ್ಗಳನ್ನು ಗಳಿಸುವಷ್ಟರಲ್ಲಿ ಎಲ್ಲಾ ವಿಕೆಟ್ಗಳನ್ನು ಕಳೆದುಕೊಂಡಿತು.
ಒಂದು ಹಂತದಲ್ಲಿ ಮಾರ್ಕೊ ಜಾನ್ಸನ್ (70) ಮತ್ತು ಕಾರ್ಬಿನ್ ಬೋಶ್ (67) ವಿಜಯವನ್ನು ಭಾರತದಿಂದ ಕಸಿದುಕೊಳ್ಳುವ ಸೂಚನೆಯನ್ನು ನೀಡಿದರು. ಆದರೆ, ಭಾರತೀಯ ಬೌಲರ್ಗಳು ಈ ಸವಾಲನ್ನು ಎದುರಿಸಿ ನಿಂತು ಭಾರತದ ಜಯವನ್ನು ಖಾತರಿಪಡಿಸಿದರು.
ಒಂದು ಹಂತದಲ್ಲಿ ದಕ್ಷಿಣ ಆಫ್ರಿಕ 11 ರನ್ಗಳನ್ನು ಗಳಿಸುವಷ್ಟರಲ್ಲಿ 3 ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ, ಮ್ಯಾಥ್ಯೂ ಬ್ರೀಝ್ಕ್ (72), ಮಾರ್ಕೊ ಜಾನ್ಸನ್ ಮತ್ತು ಬೋಶ್ ತಂಡವನ್ನು ವಿಜಯದ ಸನಿಹಕ್ಕೆ ಒಯ್ದರು. ಆದರೆ, ವಿಜಯದ ತೀರವನ್ನು ತಲುಪಲು ಅವರಿಗೆ ಸಾಧ್ಯವಾಗಲಿಲ್ಲ.
ಭಾರತದ ಪರವಾಗಿ ಕುಲದೀಪ್ ಯಾದವ್ ನಾಲ್ಕು ವಿಕೆಟ್ಗಳನ್ನು ಪಡೆದರೆ, ಹರ್ಷಿತ್ ರಾಣಾ ಮೂರು ವಿಕೆಟ್ಗಳನ್ನು ಉರುಳಿಸಿದರು.
ಇದಕ್ಕೂ ಮುನ್ನ, ರಾಂಚಿಯ ಜೆಎಸ್ಸಿಎ ಇಂಟರ್ನ್ಯಾಶನಲ್ ಸ್ಟೇಡಿಯಮ್ ಕಾಂಪ್ಲೆಕ್ಸ್ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ವಿರಾಟ್ ಕೊಹ್ಲಿಯ ಆಕರ್ಷಕ ಶತಕ ಹಾಗೂ ರೋಹಿತ್ ಶರ್ಮಾ (57) ಮತ್ತು ಕೆ.ಎಲ್. ರಾಹುಲ್ (60)ರ ಅರ್ಧ ಶತಕಗಳ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ಗಳ ನಷ್ಟಕ್ಕೆ 349 ರನ್ಗಳನ್ನು ಕಲೆಹಾಕಿತು.
ಕೊಹ್ಲಿ ಕ್ರೀಸ್ನಲ್ಲಿ ನಿಂತು ಒತ್ತಡವನ್ನು ನಿಭಾಯಿಸಿ ಶ್ರೇಷ್ಠ ಇನಿಂಗ್ಸೊಂದನ್ನು ಆಡಿದರು. ಅರ್ಧ ಶತಕ ಬಾರಿಸಿದ ಬಳಿಕ, ರೋಹಿತ್ ಶರ್ಮಾ ನಿರ್ಗಮಿಸಿದರೂ ಇನ್ನೊಂದು ಕಡೆಯಲ್ಲಿ ತಳವೂಡಿ ಆಡಿದ ಕೊಹ್ಲಿ ತನ್ನ 52ನೇ ಏಕದಿನ ಶತಕವನ್ನು ಬಾರಿಸಿದರು.
ಕೊಹ್ಲಿ ಮತ್ತು ರೋಹಿತ್ ಶರ್ಮಾ ಎರಡನೇ ವಿಕೆಟ್ಗೆ 136 ರನ್ಗಳ ಭಾಗೀದಾರಿಕೆಯನ್ನು ನಿಭಾಯಿಸಿದರು. ಇದು ಭಾರತೀಯ ಇನಿಂಗ್ಸ್ಗೆ ಭದ್ರ ಬುನಾದಿಯನ್ನು ಹಾಕಿತು.
ಕೆ.ಎಲ್. ರಾಹುಲ್ ಇನಿಂಗ್ಸ್ನ ಕೆಳ ಕ್ರಮಾಂಕದಲ್ಲಿ 56 ಎಸೆತಗಳಲ್ಲಿ 60 ರನ್ಗಳನ್ನು ಗಳಿಸಿ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ನೆರವಾದರು. ಕೊಹ್ಲಿ ಮತ್ತು ರಾಹುಲ್ ಐದನೇ ವಿಕೆಟ್ಗೆ 76 ರನ್ಗಳನ್ನು ಸೇರಿಸಿ ತಂಡವನ್ನು ಬೃಹತ್ ಮೊತ್ತದತ್ತ ಒಯ್ದರು.
ಬಳಿಕ ರಾಹುಲ್ ಜೊತೆಗೆ ಸೇರಿದ ರವೀಂದ್ರ ಜಡೇಜ ಆರನೇ ವಿಕೆಟ್ಗೆ 65 ರನ್ಗಳನ್ನು ಕೂಡಿಸಿದರು. ಜಡೇಜ 20 ಎಸೆತಗಳಲ್ಲಿ 32 ರನ್ಗಳನ್ನು ಸಿಡಿಸಿದರು.
ದಕ್ಷಿಣ ಆಫ್ರಿಕದ ಪರವಾಗಿ ಮಾರ್ಕೊ ಜಾನ್ಸನ್, ನ್ಯಾಂಡ್ರಿ ಬರ್ಗರ್, ಕಾರ್ಬಿನ್ ಬೋಶ್ ಮತ್ತು ಒಟ್ನೇಲ್ ಬಾರ್ಟ್ಮನ್ ತಲಾ ಎರಡು ವಿಕೆಟ್ಗಳನ್ನು ಉರುಳಿಸಿದರು.







