ದಕ್ಷಿಣ ಆಫ್ರಿಕಾದ ವಿರುದ್ಧ ʼಯಶಸ್ವಿʼ ಚೇಸಿಂಗ್; ಭಾರತಕ್ಕೆ ಸರಣಿ

ಯಶಸ್ವಿ ಜೈಸ್ವಾಲ್ | Photo Credit : BCCI
ವಿಶಾಖಪಟ್ಟಣಂ: ಇಲ್ಲಿನ ACA-VDCA Cricket Stadium ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ತಂಡವು 271 ರನ್ ಗಳನ್ನು ಯಶಸ್ವಿ ಚೇಸಿಂಗ್ ಮೂಲಕ 9 ವಿಕೆಟ್ ಗಳ ಭರ್ಜರಿ ಜಯ ಗಳಿಸಿದೆ. ಆ ಮೂಲಕ 2-1ರಿಂದ ಸರಣಿ ತನ್ನದಾಗಿಸಿಕೊಂಡಿದೆ.
ದಕ್ಷಿಣ ಆಫ್ರಿಕಾ ನೀಡಿದ 271 ರನ್ ಗಳ ಬೆನ್ನತ್ತಿದ ಭಾರತ ತಂಡವು ಕೇವಲ ಒಂದು ವಿಕೆಟ್ ಕಳದುಕೊಂಡು ಜಯಗಳಿಸಿತು. ಭಾರತ ತಂಡದ ಪದ ಯಶಸ್ವಿ ಜೈಸ್ವಾಲ್ 2 ಸಿಕ್ಸರ್, 12 ಬೌಂಡರಿ ಸಹಿತ ಶತಕ ಬಾರಿಸುವ ಮೂಲಕ ಅಜೇಯವಾಗಿ 116 ರನ್ ಗಳಿಸಿದರು. ವಿರಾಟ್ ಕೊಹ್ಲಿ ಅಜೇಯರಾಗಿ 45 ಎಸೆತಗಳಲ್ಲಿ 3 ಸಿಕ್ಸರ್, 6 ಬೌಂಡರಿಗಳೊಂದಿಗೆ 65 ರನ್ ಗಳಿಸಿ ಗೆಲುವಿನ ದಡ ಸೇರಿಸಿದರು. ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ 73 ಎಸೆತಗಳಲ್ಲಿ 75 ರನ್ ಗಳಿಸಿ ತಮ್ಮ ಸಾಮರ್ಥ್ಯ ಮತ್ತೆ ಸಾಬೀತುಪಡಿಸಿದರು. ರೋಹಿತ್ ಇನ್ನಿಂಗ್ಸ್ ನಲ್ಲಿ 3 ಸಿಕ್ಸರ್ 7 ಬೌಂಡರಿ ಸೇರಿದ್ದವು. ಕೇಶವ್ ಮಹರಾಜ್ ಎಸೆತದಲ್ಲಿ ರೋಹಿತ್ ಶರ್ಮಾ ಮ್ಯಾಥ್ಯೂ ಬ್ರೀಟ್ಸ್ಕೀ ಅವರಿಗೆ ಕ್ಯಾಚಿತ್ತು ಪೆವಿಲಿಯನ್ ಗೆ ಮರಳಿದರು.
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡವು ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಅವರ ಭರ್ಜರಿ ಶತಕದ ನೆರವಿನೊಂದಿಗೆ 47.5 ಓವರ್ಗಳ ಅಂತ್ಯಕ್ಕೆ 270 ರನ್ ಗಳಿಸಿ ಆಲೌಟ್ ಆಯಿತು.
ಭಾರತದ ಪರ ಕುಲದೀಪ್ ಯಾದವ್ ಮತ್ತು ಪ್ರಸಿದ್ಧ ಕೃಷ್ಣ ತಲಾ 4 ವಿಕೆಟ್ ಪಡೆದು ಹರಿಣಗಳ ಬ್ಯಾಟಿಂಗ್ ಬಲವನ್ನು ಮುರಿದರು.





